ADVERTISEMENT

ಲೋಕ ಸ್ಪಂದನ: ಚಿಟಗುಪ್ಪ ಠಾಣೆ ಜಿಲ್ಲೆಗೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 29 ಜನವರಿ 2024, 5:45 IST
Last Updated 29 ಜನವರಿ 2024, 5:45 IST
ಚಿಟಗುಪ್ಪ ಪೋಲಿಸ್‌ ಠಾಣೆಯ ನೋಟ
ಚಿಟಗುಪ್ಪ ಪೋಲಿಸ್‌ ಠಾಣೆಯ ನೋಟ   

ಚಿಟಗುಪ್ಪ: ದೂರು ನೀಡಲು ಬರುವ ಜನರಿಗೆ ಠಾಣೆಯಲ್ಲಿ ದೊರೆತ ಸ್ಪಂದನೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಪೊಲೀಸ್‌ ಇಲಾಖೆ ಜಾರಿಗೊಳಿಸಿರುವ ವ್ಯವಸ್ಥೆ ‘ಲೋಕ ಸ್ವಂದನ’ದಲ್ಲಿ ಚಿಟಗುಪ್ಪ ಪೊಲೀಸ್‌ ಠಾಣೆ ಬೀದರ್‌ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದಿದೆ.

‘ನಿಮ್ಮ ನುಡಿ ,ನಮ್ಮ ನಡೆ’ ಘೋಷವಾಕ್ಯದೊಂದಿಗೆ ಪರಿಚಯಿಸಿದ್ದ ಈ ವ್ಯವಸ್ಥೆಯಡಿ ಸಾರ್ವಜನಿಕರು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದಾಗ ಮೊಬೈಲ್‌ನಿಂದ ಕ್ಯೂಆರ್ ಕೋಡ್ ಸ್ಕ್ಯಾನ್‌ ಮಾಡಿ ಠಾಣೆಯಲ್ಲಿ ದೊರಕಿದ ಸ್ಪಂದನೆ ಬಗ್ಗೆ ತಮ್ಮ ಅಭಿಪ್ರಾಯ ಮತ್ತು ರೇಟಿಂಗ್ ನೀಡುತ್ತಾರೆ.

2023ನೇ ಸಾಲಿನಲ್ಲಿ ಈ ಕ್ಯೂಆರ್ ಕೋಡ್ ಮೂಲಕ ನಾಗರಿಕರು ನೀಡಿದ ಉತ್ತಮ ರೇಟಿಂಗ್‌ ಫಲವಾಗಿ ಪಟ್ಟಣದ ಠಾಣೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ.

ADVERTISEMENT

ಪೊಲೀಸ್‌ ಠಾಣೆಗೆ ಭೇಟಿ ನೀಡಿದಾಗ ಸಿಕ್ಕ ಸ್ಪಂದನೆಗೆ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ 634 ನಾಗರಿಕರು ರೇಟಿಂಗ್‌ ನೀಡಿದ್ದಾರೆ. ಎಲ್ಲ ನಾಗರಿಕರು ಫೈವ್‌ಸ್ಟಾರ್‌ ಹಾಗೂ ಫೋರ್‌ ಸ್ಟಾರ್‌ ರೇಟಿಂಗ್‌ ನೀಡಿದ್ದು ವಿಶೇಷ.

ಗಣರಾಜ್ಯೋತ್ಸವ ದಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌.ಅವರು ಪಟ್ಟಣ ಠಾಣೆಯ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಬಾಶುಮಿಯ್ಯ ಮತ್ತು ಕಾನ್‌ಸ್ಟೆಬಲ್‌ ಸಾರಿಕಾ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.

ಪಟ್ಟಣ ಠಾಣೆಗೆ ಯಾವುದೇ ಸಮಸ್ಯೆ ಕುರಿತು ದೂರು ಸಲ್ಲಿಸಲು ಬರುವ ನಾಗರಿಕರ ಬಗ್ಗೆ ಕರ್ತವ್ಯದಲ್ಲಿ ಇರುವ ಸಿಬ್ಬಂದಿ ಅವರನ್ನು ಸ್ವಾಗತಿಸಿ ಅವರ ದೂರು ಆಲಿಸುತ್ತಾರೆ. ಬಳಿಕ ಪಿಎಸ್‌ಐ ಬಾಶುಮಿಯ್ಯ ಅವರಿಗೆ ಮಾಹಿತಿ ನೀಡಬೇಕು. ಅವರ ಮಾಹಿತಿ ಆಧಾರದಲ್ಲಿ ಅಧಿಕಾರಿ ಯಾವ ರೀತಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡಬೇಕು. ಯಾರ ವಿರುದ್ಧ ದೂರು ದಾಖಲಾಗಿರುತ್ತದೆಯೋ ಅವರನ್ನು ಠಾಣೆಗೆ ಕರೆಸಿ, ದೂರದಾರರ ಸಮ್ಮುಖದಲ್ಲಿ ಸೂಕ್ತವಾಗಿ ಚರ್ಚಿಸುತ್ತಾರೆ. ಶೇ 90ರಷ್ಟು ದೂರುಗಳನ್ನು ಠಾಣೆಯಲ್ಲಿಯೇ ಪರಿಹರಿಸಲಾಗುತ್ತಿದೆ. ಇದರಿಂದ ನಾಗರಿಕರು ಖುಷಿಪಡುತ್ತಿದ್ದು, ಉತ್ತಮ ರೇಟಿಂಗ್‌ ದೊರೆಯುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಚಿಟಗುಪ್ಪ ಠಾಣೆ ಪಿಎಸ್‌ಐ ಬಾಶುಮಿಯ್ಯ ಅವರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಪ್ರಶಂಸನಾ ಪತ್ರ ವಿತರಿಸಿದ ಕ್ಷಣ...
ಠಾಣೆಯ ಎಲ್ಲ ಸಿಬ್ಬಂದಿ ಹಾಗೂ ನಾಗರಿಕರ ಸಹಕಾರ ಪ್ರೋತ್ಸಾಹದಿಂದ ಲೋಕ ಸ್ಪಂದನದಲ್ಲಿ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗಿದೆ
ಬಾಶುಮಿಯ್ಯ ಪಿಎಸ್‌ಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.