ADVERTISEMENT

ಹುಲಸೂರ| ಲೋಕಾಯುಕ್ತ ದಾಳಿ: ಅಂಗವಿಕಲರಿಂದ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 6:44 IST
Last Updated 4 ಜನವರಿ 2026, 6:44 IST
<div class="paragraphs"><p>ಹುಲಸೂರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ವಿಕಲಚೇತನರ ಬೇಡಿಕೆ ಕುರಿತು ದೂರು ದಾಖಲಿಸಿಕೊಂಡ ಲೋಕಾಯುಕ್ತ ಪಿಎಸ್ಐ ಸೇರಿ ಹಲವರು ಉಪಸ್ಥಿತರಿದ್ದರು.</p></div>

ಹುಲಸೂರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ವಿಕಲಚೇತನರ ಬೇಡಿಕೆ ಕುರಿತು ದೂರು ದಾಖಲಿಸಿಕೊಂಡ ಲೋಕಾಯುಕ್ತ ಪಿಎಸ್ಐ ಸೇರಿ ಹಲವರು ಉಪಸ್ಥಿತರಿದ್ದರು.

   

ಹುಲಸೂರ: ಪಟ್ಟಣದ ತಹಶೀಲ್ದಾರ್ ಕಚೇರಿ, ತಾ.ಪಂ, ಸಮುದಾಯ ಆರೋಗ್ಯ ಕೇಂದ್ರ, ಗ್ರಾ.ಪಂ ಹಾಗೂ ಡಾ.ಅಂಬೇಡ್ಕರ್‌ ಬಾಲಕರ ವಸತಿ ನಿಲಯ, ಮೊರಾರ್ಜಿ ದೇಸಾಯಿ ವಸತಿ ನಿಲಯ ಸೇರಿದಂತೆ ಹಲವೆಡೆ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳ ತಂಡವು, ಪರಿಶೀಲನೆ ನಡೆಸಿತು.

ಕಚೇರಿಗಳಲ್ಲಿ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಲೋಕಾಯುಕ್ತ ಅಧಿಕಾರಿಗಳು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ADVERTISEMENT

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಅವಧಿ ಮೀರಿದ ಔಷಧ, ನೈರ್ಮಲ್ಯದ ಕೊರತೆ, ರೋಗಿಗಳಿಗೆ ಕೈಗೊಂಡಿರುವ ವ್ಯವಸ್ಥೆ, ಸಮಯ ಪಾಲನೆ ಮಾಡದ ವೈದ್ಯರು, ಸಿಬ್ಬಂದಿ ಕೊರತೆ, ಇತರೆ ಅವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.

ಬಳಿಕ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಹಾಜರಾತಿ, ದಾಖಲಾತಿ ವಹಿ ಸೇರಿದಂತೆ ಮಕ್ಕಳ ಮಾಹಿತಿ ಪಡೆದು ಭ್ರಷ್ಟಾಚಾರದ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿದರು.

ಹುಲಸೂರ ಗ್ರಾ.ಪಂನಿಂದ ಅಂಗವಿಕಲರ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನದ ಕುರಿತು ಅಧಿಕಾರಿಗಳು ಮಾಹಿತಿ ಪಡೆದರು. 13 ಮತ್ತು 14ನೇ ಹಣ ಕಾಸಿನ ಅಡಿಯಲ್ಲಿ ಮೀಸಲಿಟ್ಟ ಹಣವನ್ನು ಅಂಗವಿಕಲರ ಅಭಿವೃದ್ಧಿಗೆ ಯಾವ ರೀತಿ ವೆಚ್ಚ ಮಾಡಿದಿರಿ? ಎಷ್ಟು ಹಣ ಮೀಸಲಿಡಲಾಗಿತ್ತು ಎಂದು ಪಿಡಿಒ ಅವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ, ‘ಆನ್‌ಲೈನ್ ತಂತ್ರಾಂಶಗಳಲ್ಲಿ ಈ ಮಾಹಿತಿ ಇಲ್ಲ. ಅದು ಲಿಖಿತ ದಾಖಲೆಯಲ್ಲಿದೆ. ಈ ಕುರಿತು ನಮ್ಮ ಹತ್ತಿರವೂ ದಾಖಲೆಯಿಲ್ಲ. ಕೇವಲ 2021ರಿಂದ 2025ನೇ ಸಾಲಿನ 15‌ನೇ ಹಣಕಾಸಿನಲ್ಲಿನ ಮೀಸಲಿಟ್ಟ ಹಣ ₹10.48 ಲಕ್ಷ ಮಾತ್ರ ಜಮೆ ಆಗಿದೆ’ ಎಂದು ಹೇಳಿದರು.

ಅಂಗವಿಕಲರ ಸಂಘದ ಅಧ್ಯಕ್ಷ ಶಾಂತಕುಮಾರ ಮುಕ್ತಾ ಮಾತನಾಡಿ, ‘ಸುಮಾರು 15 ವರ್ಷಗಳಿಂದ ಅಂಗವಿಕಲರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಬಳಕೆ ಮಾಡಿಲ್ಲ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈವರೆಗೆ ಒಟ್ಟು ₹28 ಲಕ್ಷ ಇರಬೇಕು. ಆದರೆ ₹10.48 ಲಕ್ಷ ಮಾತ್ರ ಉಳಿದಿದೆ. ಉಳಿದ ಹಣ ಎಲ್ಲಿ ಹೊಯಿತು’ ಎಂದು ಪ್ರಶ್ನಿಸಿದರು.

ಅಂಗವಿಕಲರ ಅಭಿವೃದ್ಧಿಗೆ ಮೀಸಲಿಟ್ಟ ಹಣದಿಂದಲೇ ಸಮುದಾಯ ಭವನ ನಿರ್ಮಾಣ ಮಾಡಬೇಕು ಎಂದು ಲೋಕಾಯುಕ್ತ ಅಧಿಕಾರಿಗೆ ಮನವಿ ಸಲ್ಲಿಸಿದರು.

ಲೋಕಾಯುಕ್ತ ಡಿವೈಎಸ್‌ಪಿ ಅರುಣಕುಮಾರ ಹಾಗೂ ಅವರ ತಂಡ ಉಪಸ್ಥಿತರಿದ್ದರು.