
ಹುಮನಾಬಾದ್: ತಾಲ್ಲೂಕಿನ ಮೋಳಕೇರಾ ಹತ್ತಿರದ ರಾಷ್ಟ್ರೀಯ ಹೆದ್ದಾರಿ 65ರಲ್ಲಿನ ಸಹಾಯಕ ಪ್ರಾದೇಶಿಕ ಸಾರಿಗೆ ತನಿಖಾ ಠಾಣೆಯ ಮೇಲೆ ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಲೋಕಾಯುಕ್ತ ಅಧಿಕಾರಿಗಳಾದ ವಿಜಯಾನಂದ, ಸಿದ್ದರಾಜು, ವಸಂತ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಅಧಿಕಾರಿಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ದಾಖಲಾತಿಗಳ ಮಾಹಿತಿ ಕಲೆ ಹಾಕಿದರು. ಇದೇ ಸಂದರ್ಭದಲ್ಲಿ ಸರಕು ವಾಹನಗಳ ಚಾಲಕರು ಸಹಾಯಕ ಪ್ರಾದೇಶಿಕ ಸಾರಿಗೆ ತನಿಖಾ ಠಾಣೆಗೆ ಹಣ ನೀಡಿ ರಸೀದಿ ಪಡೆಯಲು ಬಂದಿದ್ದವರನ್ನು ಮತ್ತು ಹಣ ನೀಡದೇ ಕೇವಲ ತಮ್ಮ ಕಂಪನಿಯ ಗುರುತಿನ ಚೀಟಿ ತೋರಿಸಿ ಹೋಗುತ್ತಿದ್ದ ಚಾಲಕರನ್ನು ಸಹ ತಪಾಸಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ತಹಶೀಲ್ದಾರ್ ಕಚೇರಿಯಲ್ಲಿ ಪರಿಶೀಲನೆ: ಪಟ್ಟಣದ ತಹಶೀಲ್ದಾರ್ ಕಚೇರಿ ಹಾಗೂ ಚಿಟಗುಪ್ಪದ ತಹಶೀಲ್ದಾರ್ ಕಚೇರಿ, ಪುರಸಭೆಯಲ್ಲಿ ಪ್ರತ್ಯೇಕ ಲೋಕಾಯುಕ್ತರ ತಂಡ ಭೇಟಿ ನೀಡಿ ವಿವಿಧ ದಾಖಲಾತಿಗಳು ಪರಿಶೀಲನೆ ನಡೆಸಿದರು. ಈ ಮೂರು ಕಚೇರಿಯಲ್ಲಿ ಬಹುತೇಕ ಅಧಿಕಾರಿಗಳು ಡ್ರೆಸ್‌ಕೋಡ್ ಪಾಲನೆ ಮಾಡದೆ ತಮ್ಮ ಮನಬಂದಂತೆ ಬಟ್ಟೆ ಧರಿಸಿರುವುದಕ್ಕೆ ಹಾಗೂ ಇಲಾಖೆಯ ಗುರುತಿನ ಚೀಟಿ ಧರಿಸದಿರುವುದಕ್ಕೆ ಲೋಕಾಯುಕ್ತ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.