ADVERTISEMENT

ಲಾರಿ ಮುಷ್ಕರ: ಬಸವಕಲ್ಯಾಣದಲ್ಲಿ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 15:24 IST
Last Updated 26 ಫೆಬ್ರುವರಿ 2021, 15:24 IST

ಬೀದರ್: ತೈಲ ಬೆಲೆ ಏರಿಕೆ ಖಂಡಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕರೆ ನೀಡಿದ್ದ ಲಾರಿ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಬೀದರ್‌, ಭಾಲ್ಕಿ ಹಾಗೂ ಬಸವಕಲ್ಯಾಣದಲ್ಲಿ ಸರಕು ಸಾಗಣೆ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಲಾರಿಗಳು ಮುಷ್ಕರಕ್ಕೆ ಬೆಂಬಲಿಸಿ ನಿಂತಲ್ಲೇ ನಿಂತ ಪರಿಣಾಮ ಸರಕು ಸಾಗಾಟ ನಡೆಯಲಿಲ್ಲ.

ಬಸವಕಲ್ಯಾಣ ವರದಿ:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಿಗ್ಗೆ ಬಸವಕಲ್ಯಾಣದ ಮುಡಬಿ ಕ್ರಾಸ್ ಹತ್ತಿರ ಲಾರಿ ಮಾಲೀಕರ ಸಂಘದಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಲಾಯಿತು.

ಪೆಟ್ರೋಲ್, ಡಿಸೆಲ್ ಬೆಲೆ ಏರಿಕೆ ತಡೆಯಬೇಕು. ಟೋಲ್ ನಾಕಾಗಳಲ್ಲಿ ಹೆಚ್ಚಿಗೆ ಹಣ ಪಡೆಯುವುದು ಹಾಗೂ ಹ್ಯಾಷಟ್ಯಾಗ್ ಇಲ್ಲದವರಿಗೆ ಅಧಿಕ ದಂಡ ವಿಧಿಸುವುದನ್ನು ನಿಲ್ಲಿಸಬೇಕು. 15 ವರ್ಷ ಹಳೆಯ ವಾಹನಗಳನ್ನು ಗುಜರಿಗೆ ಹಾಕುವುದರಿಂದ ಲಾರಿ ಮಾಲೀಕರಿಗೆ ನಷ್ಟವಾಗಲಿದ್ದು ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಲಾರಿ ಮಾಲೀಕರ ಸಂಘದ ಅಧ್ಯಕ್ಷ ಇಜಾಜ್ ಲಾತೂರೆ ನೇತೃತ್ವದಲ್ಲಿ ತಹಶೀಲ್ದಾರ್ ಮೂಲಕ ಪ್ರಧಾನಮಂತ್ರಿಗೆ ಮನವಿಪತ್ರ ಸಲ್ಲಿಸಿದರು.

ಪ್ರಮುಖರಾದ ಜಾಕೀರ್ ಮನಿಯಾರ್, ವಸೀಂ ಅಶೋಕರೆಡ್ಡಿ, ಶರಣಪ್ಪ ಬೊಕ್ಕೆ, ಬಸವರಾಜ ಗುಣತೂರೆ, ತಾಜೊದ್ದೀನ್ ಸೊಂಡಕೆ, ಸಂತೋಷ ಸಾಳುಂಕೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.