ADVERTISEMENT

ಬೀದರ್: ಸೈನಿಕ ಶಾಲೆಯ ವಿದ್ಯಾರ್ಥಿಗಳಿಂದ ಗ್ರಹಣ ವೀಕ್ಷಣೆ, ಉಪಾಹಾರ ಸೇವನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 17:06 IST
Last Updated 7 ಸೆಪ್ಟೆಂಬರ್ 2025, 17:06 IST
   

ಬೀದರ್: ಹೈದರಾಬಾದ್ ಕರ್ನಾಟಕ ಎಜ್ಯುಕೇಶನ್ ಸೊಸೈಟಿಯ ಬೀದರ್ ನ ಸೈನಿಕ್ ಶಾಲೆ ಹಾಗೂ ಜಿಲ್ಲಾ ವಿಜ್ಞಾನ ಸಮಿತಿ ಸಹಯೋಗದಲ್ಲಿ ನಗರದ ಬಿ.ವಿ.ಭೂಮರಡ್ಡಿ ಕಾಲೇಜು ಆವರಣದಲ್ಲಿ ಭಾನುವಾರ ರಾತ್ರಿ ಖಗ್ರಾಸ ಚಂದ್ರಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬಾಹ್ಯಾಕಾಶದಲ್ಲಿ ನಡೆದ ವಿಸ್ಮಯವನ್ನು ಸೈನಿಕ ಶಾಲೆಯ ನೂರಾರು ವಿದ್ಯಾರ್ಥಿ, ಸಿಬ್ಬಂದಿ ಹಾಗೂ ಸಾರ್ವಜನಿಕರು ಕಣ್ತುಂಬಿಕೊಂಡರು.

ಸಂಪೂರ್ಣ ಚಂದ್ರಗ್ರಹಣ ವೀಕ್ಷಣೆಗೆ ಟೆಲಿಸ್ಕೋಪ್ ಹಾಗೂ ಬೈನಾಕುಲರ್ ವ್ಯವಸ್ಥೆ ಮಾಡಲಾಗಿತ್ತು. ಗ್ರಹಣದ ದೃಶ್ಯಗಳನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು.

ಗ್ರಹಣದ ಸಮಯದಲ್ಲಿ ಆಹಾರ ಸೇವನೆಯನ್ನು ಮಾಡಬಾರದು ಎಂಬ ನಂಬಿಕೆಯನ್ನು‌ ದಿಕ್ಕರಿಸಿ ಅದಕ್ಕೆ ವಿರುದ್ಧವಾಗಿ ಸೈನಿಕ ಶಾಲೆಯ ಮಕ್ಕಳಿಗೆ ಉಪಾಹಾರ ಕೊಟ್ಟು ಮಕ್ಕಳಿಗೆ ವೈಚಾರಿಕತೆಯ ಪಾಠ ಮಾಡಲಾಯಿತು.

ADVERTISEMENT

ಇದೇ ವೇಳೆ ಮಾತನಾಡಿದ ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ಬಾಬುರಾವ್ ದಾನಿ, ಗ್ರಹಣ ಎಂಬುದು ಬಾಹ್ಯಾಕಾಶದಲ್ಲಿ ನಡೆಯುವ ಒಂದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಇದರ ಬಗ್ಗೆ ಕೆಲವು ಮೂಢನಂಬಿಕೆಗಳಿದ್ದು ಅವೆಲ್ಲ ಕೇವಲ ಕಪೋಲ ಕಲ್ಪಿತ ಯೋಚನೆಗಳಾಗಿವೆ. ಊಟ ಮಾಡಬಾರದು, ಗ್ರಹಣದ ಪೂರ್ವದಲ್ಲಿ ಮತ್ತು ನಂತರ ಸ್ನಾನ ಮಾಡಬೇಕು ಎಂಬ ಸಂಪ್ರದಾಯ ಬಿತ್ತಲಾಗಿದೆ. ಆದರೆ ಅದೆಲ್ಲವೂ ಗೊಡ್ಡು ಆಚರಣೆಗಳಾಗಿದ್ದು ಗ್ರಹಣದಿಂದ ಮನುಷ್ಯರಿಗೆ ಯಾವುದೇ ತೊಂದರೆಗಳಾಗುವುದಿಲ್ಲ ಎಂದರು.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ರಜನೀಶ್ ವಾಲಿ ಮಾತನಾಡಿ, ಬ್ಲಡ್ ಮೂನ್ ಎಂದೂ ಕರೆಯಲಾಗುವ ಸಂಪೂರ್ಣ ಚಂದ್ರಗ್ರಹಣವೂ ಚಂದ್ರನು ಭೂಮಿಯ ನೆರಳಿನ ಮೂಲಕ ಹಾದು ಹೋಗುವಾಗ ಚಂದ್ರನು ಗಾಢ ಕೆಂಪು-ಕಿತ್ತಳೆ ಬಣ್ಣಕ್ಕೆ ತಿರುಗುತ್ತಾನೆ. ಇದು ವಾತಾವರಣದಲ್ಲಿ ಸೂರ್ಯನ ಬೆಳಕಿನ ಚದುರುವಿಕೆಯಿಂದ ಉಂಟಾಗುವ ಪರಿಣಾಮವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಿ. ವಿ. ಬಿ ಕಾಲೇಜಿನ ಪ್ರಾಂಶುಪಾಲ ವಿಠಲ ರಡ್ಡಿ, ಸೈನಿಕ ಶಾಲೆಯ ಪ್ರಾಂಶುಪಾಲೆ ಶ್ರೀಲತಾ ಸ್ವಾಮಿ, ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಕಲಾಲ ದೇವಿ ಪ್ರಸಾದ್, ಜಿಲ್ಲಾ ವಿಜ್ಞಾನ ಕೇಂದ್ರದ ಜಂಟಿ ಕಾರ್ಯದರ್ಶಿ ಮುಹಮ್ಮದ್ ರಫಿ ತಾಳಿಕೋಟೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.