ADVERTISEMENT

ಬೀದರ್‌ |ಒಳಮೀಸಲಾತಿ : ಕೇಶಮುಂಡನ- ಅರೆಬೆತ್ತಲೆ ಮೆರವಣಿಗೆ; ಮಾನವ ಸರಪಳಿ

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗರಿಂದ ಪ್ರತಿಭಟನಾ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 6:32 IST
Last Updated 2 ಆಗಸ್ಟ್ 2025, 6:32 IST
ಮಾದಿಗ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಬೀದರ್‌ನಲ್ಲಿ ಶುಕ್ರವಾರ ಅರೆಬೆತ್ತಲೆ ಪ್ರತಿಭಟನಾ ರ್‍ಯಾಲಿ ನಡೆಸಿದರು
ಮಾದಿಗ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಬೀದರ್‌ನಲ್ಲಿ ಶುಕ್ರವಾರ ಅರೆಬೆತ್ತಲೆ ಪ್ರತಿಭಟನಾ ರ್‍ಯಾಲಿ ನಡೆಸಿದರು   

ಬೀದರ್‌: ತಕ್ಷಣವೇ ಒಳಮೀಸಲಾತಿ ಜಾರಿಗೆ ತರಬೇಕೆಂದು ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು.

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ ಸಮೀಪದ ಪ್ರವಾಸಿ ಮಂದಿರದಲ್ಲಿ ಸೇರಿದ ಕಾರ್ಯಕರ್ತರು ಅಲ್ಲಿಂದ ಅಂಬೇಡ್ಕರ್‌ ವೃತ್ತದ ವರೆಗೆ ರ್‍ಯಾಲಿ ನಡೆಸಿ, ಕೆಲಕಾಲ ಮಾನವ ಸರಪಳಿ ನಿರ್ಮಿಸಿ, ರಸ್ತೆತಡೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೆಲ ಕಾರ್ಯಕರ್ತರು ಕೇಶಮುಂಡನ ಮಾಡಿಸಿಕೊಂಡು ವಿರೋಧ ದಾಖಲಿಸಿದರು. ಉದ್ದೇಶಿತ ಸರ್ಕಾರದ ಶವಯಾತ್ರೆಗೆ ಪೊಲೀಸರು ಅವಕಾಶ ಕಲ್ಪಿಸಲಿಲ್ಲ.

ಅಲ್ಲಿಂದ ಪ್ರತಿಭಟನಾಕಾರರು ಅರೆಬೆತ್ತಲೆಯಲ್ಲಿ ರ್‍ಯಾಲಿ ನಡೆಸಿದರು. ನೆಹರೂ ಕ್ರೀಡಾಂಗಣ, ಮಡಿವಾಳ ಮಾಚಿದೇವ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತನಕ ರ್‍ಯಾಲಿ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಅಳವಡಿಸಿದ್ದ ಬ್ಯಾರಿಕೇಡ್‌ಗಳ ಮೇಲೆ ಹತ್ತಿ ಕೆಲವರು ಘೋಷಣೆ ಕೂಗಿದರು. ಡಿಸಿ ಕಚೇರಿ ನುಗ್ಗಲು ವಿಫಲ ಯತ್ನ ನಡೆಸಿದರು. ಆನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ADVERTISEMENT

ಒಳಮೀಸಲಾತಿ ಜಾರಿಗೆ ತರುವ ವಿಷಯ 35 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಅವಕಾಶ ವಂಚಿತ ಸಮುದಾಯಗಳಿಗೆ ಒಳಮೀಸಲಾತಿ ಮೂಲಕ ಮೇಲೆತ್ತುವ ಕೆಲಸ ಮಾಡಬೇಕಿದೆ. ಈ ಸಂಬಂಧ ಸುಪ್ರೀಂಕೋರ್ಟ್‌ ತೀರ್ಪು ನೀಡಿ, ವರ್ಷವಾಗುತ್ತ ಬಂದಿದೆ. ಆದರೆ, ರಾಜ್ಯ ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.

ಹರಿಯಾಣ, ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಒಳಮೀಸಲಾತಿ ಜಾರಿಗೊಳಿಸಿ ಸಾಮಾಜಿಕ ನ್ಯಾಯದ ವಿಷಯದಲ್ಲಿ ಮೇಲ್ಪಂಕ್ತಿ ಬರೆಯಲಾಗಿದೆ. ಕರ್ನಾಟಕ ಸರ್ಕಾರದ ವಿಳಂಬ ನೀತಿಯಿಂದ ಮಾದಿಗ ಮತ್ತು 29 ಉಪಜಾತಿಗಳಿಗೆ ಅನ್ಯಾಯವಾಗುತ್ತಿದ್ದು, ಸಹಜವಾಗಿಯೇ ಜನಾಕ್ರೋಶಕ್ಕೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು, ಸರ್ಕಾರ ತಡಮಾಡದೆ ಒಳಮೀಸಲಾತಿ ಜಾರಿಗೆ ತರಬೇಕು. ಇಲ್ಲವಾದರೆ ಸಮುದಾಯದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಒಳಮೀಸಲಾತಿ ಹೋರಾಟಗಾರರ ಮೇಲಿನ ರೌಡಿಶೀಟರ್‌ ಪ್ರಕರಣ ಕೈಬಿಡಬೇಕು. ಸುರಕ್ಷತಾ ಪರಿಕರ ಇಲ್ಲದೆ ಮ್ಯಾನ್‌ಹೋಲ್‌ಗೆ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಅಧ್ಯಕ್ಷ ಫರ್ನಾಂಡಿಸ್‌ ಹಿಪ್ಪಳಗಾಂವ್‌, ಪ್ರಮುಖರಾದ ರಾಜು ಕಡ್ಯಾಳ, ವಿಜಯಕುಮಾರ ಹಿಪ್ಪಳಗಾಂವ್‌, ಪ್ರಭುರಾವ್‌ ತಾಳಮಡಗಿ, ಕಮಲಾಕರ ಎಲ್‌. ಹೆಗಡೆ, ಪರಮೇಶ್ವರ ಕಾಳಮಂದರಗಿ, ಹರೀಶ ಗಾಯಕವಾಡ್‌, ಜಾಫೇಟ್‌ರಾಜ ಕಡ್ಯಾಳ, ವಿಶಾಲ ಜೋಶಿ, ದತ್ತಾತ್ರಿ ಜ್ಯೋತಿ, ಸ್ವಾಮಿದಾಸ ಮೇಘಾ, ಜೈಶೀಲ್‌ ಮೇತ್ರೆ, ಪೀಟರ್‌ ಶ್ರೀಮಂಡಲ, ವೀರಶೆಟ್ಟಿ ಬಂಬುಳಗಿ, ಉಮೇಶ ಗುತ್ತೆದಾರ, ತುಕಾರಾಮ ಲಾಡೆ, ಜೀವನ್‌ ರಿಕ್ಕೆ, ದಯಾನಂದ ರೇಕುಳಗಿ, ಲಾಲಪ್ಪ ರಾಂಪೂರೆ, ಯುವರಾಜ ಬೆಂಡೆ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

ಬೀದರ್‌ ಜಿಲ್ಲಾಧಿಕಾರಿ ಕಚೇರಿ ಎದುರು ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ತಳ್ಳಿ ಒಳಗೆ ನುಗ್ಗಲೆತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ತಡೆದರು
ಪ್ರತಿಭಟನಾಕಾರರು ಕೇಶಮುಂಡನ ಮಾಡಿಸಿಕೊಂಡು ವಿರೋಧ ದಾಖಲಿಸಿದರು
ಬೀದರ್‌ನ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಮಾದಿಗ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು
ಮಾದಿಗ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಬೀದರ್‌ನಲ್ಲಿ ಶುಕ್ರವಾರ ರ್‍ಯಾಲಿ ನಡೆಸಿದರು –ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ

ಸರ್ಕಾರದ ವಿಳಂಬಕ್ಕೆ ಅಸಮಾಧಾನ ಸುಪ್ರೀಂಕೋರ್ಟ್‌ ತೀರ್ಪು ಪಾಲಿಸಿ ಇತರೆ ರಾಜ್ಯಗಳ ಮಾದರಿ ಅನುಸರಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.