ADVERTISEMENT

ಬಸವಲಿಂಗ ಪಟ್ಟದ್ದೇವರಿಗೆ ಮಾಗನೂರು ಬಸಪ್ಪ ಪ್ರಶಸ್ತಿ

ಬಸವತತ್ವದ ಪರಿಚಾರಕ ಬಸಪ್ಪ ಮಾಗನೂರು, ಬಸವಲಿಂಗ ಪಟ್ಟದ್ದೇವರ ಕೊಡುಗೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 15:50 IST
Last Updated 27 ಜುಲೈ 2024, 15:50 IST
ಬೀದರ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಸವ ಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರಿಗೆ ದಾವಣಗೆರೆಯ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ 2023ನೇ ಸಾಲಿನ ರಾಜ್ಯಮಟ್ಟದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿಯನ್ನು  ಬೀದರ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್‌. ಬಿರಾದಾರ ಹಾಗೂ ಇತರೆ ಗಣ್ಯರು ಪ್ರದಾನ ಮಾಡಿದರು
ಬೀದರ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಸವ ಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರಿಗೆ ದಾವಣಗೆರೆಯ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ 2023ನೇ ಸಾಲಿನ ರಾಜ್ಯಮಟ್ಟದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿಯನ್ನು  ಬೀದರ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್‌. ಬಿರಾದಾರ ಹಾಗೂ ಇತರೆ ಗಣ್ಯರು ಪ್ರದಾನ ಮಾಡಿದರು    

ಬೀದರ್‌: ದಾವಣಗೆರೆಯ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ 2023ನೇ ಸಾಲಿನ ರಾಜ್ಯಮಟ್ಟದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿಯನ್ನು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರಿಗೆ ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.

ಬೀದರ್‌ ಹಾಗೂ ದಾವಣಗೆರೆ ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ಹೆಚ್ಚಿನ ಸಂಖ್ಯೆಯ ಜನರ ನಡುವೆ ರಂಗಮಂದಿರದಲ್ಲಿ ಬೀದರ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್‌. ಬಿರಾದಾರ ಅವರು ಸ್ವಾಮೀಜಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ₹50 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿದೆ. ಆನಂತರ ವೇದಿಕೆಯ ಮೇಲಿದ್ದ ಗಣ್ಯರು ಬಸವಲಿಂಗ ಪಟ್ಟದ್ದೇವರು ಹಾಗೂ ಮಾಗನೂರು ಬಸಪ್ಪ ಅವರು ಸಮಾಜಕ್ಕೆ ಕೊಟ್ಟಿರುವ ಕೊಡುಗೆಗಳನ್ನು ಸ್ಮರಿಸಿ ಮೆಚ್ಚುಗೆಯ ಮಾತುಗಳನ್ನು ಆಡಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಸವಲಿಂಗ ಪಟ್ಟದ್ದೇವರು, ಬಸವತತ್ವದ ಪ್ರಚಾರ, ಪ್ರಸಾರವೇ ನನ್ನ ಜೀವನದ ಗುರಿ. ನನ್ನ ಎಲ್ಲ ಪ್ರಶಸ್ತಿ, ಪುರಸ್ಕಾರಗಳಿಗೆ ಬಸವ ಗುರುವಿನ ಆಶೀರ್ವಾದ, ಚನ್ನಬಸವ ಪಟ್ಟದ್ದೇವರ ಕರುಣೆ ಕಾರಣ. ಈ ಪ್ರಶಸ್ತಿಯನ್ನು ನನ್ನ ದೀಕ್ಷಾ ಗುರುಗಳಾದ ಚನ್ನಬಸವ ಪಟ್ಟದ್ದೇವರ ಪಾದಕ್ಕೆ ಸಮರ್ಪಿಸುತ್ತೇನೆ ಎಂದು ಹೇಳಿದರು.

ADVERTISEMENT

ಯಾರು ಬಸವಣ್ಣನವರನ್ನು ನಂಬುತ್ತಾರೆ ಅವರಿಗೆ ಬಸವಣ್ಣ ರಕ್ಷಾ ಕವಚವಾಗಿ ಇರುತ್ತಾನೆ. ನನ್ನ ಎಲ್ಲ ಕೆಲಸಗಳಿಗೂ ಬಸವಣ್ಣನವರ ಶ್ರೀರಕ್ಷೆ ಇದೆ. ನನ್ನ ಜೀವನದ ಕೊನೆಯ ಉಸಿರು ಇರುವವರೆಗೆ ಬಸವತತ್ವದ ಪ್ರಚಾರಕ್ಕಾಗಿ ಶ್ರಮಿಸುತ್ತೇನೆ ಎಂದರು.

ನಮ್ಮ ನಡುವೆ ಅನೇಕ ಶ್ರೀಮಂತರು, ವ್ಯಾಪಾರಿಗಳಿದ್ದಾರೆ. ಆದರೆ, ದುಃಖದಲ್ಲಿ ಇರುವವರು, ಅನಾಥರ ಕಡೆಗೆ ಲಕ್ಷ್ಯ ವಹಿಸುವವರು ಕಡಿಮೆ. ಅಂತಹವರಲ್ಲಿ ಮಾಗನೂರು ಬಸಪ್ಪನವರು ಒಬ್ಬರು. ಶ್ರೀಮಂತಿಕೆ ಇದ್ದರೂ ಕೂಡ ತನ್ನ ಮನೆಯ ದನ, ಕರುಗಳ ಸಗಣಿ ತೆಗೆದು, ಪ್ರಾತಃ ಕಾಲದಲ್ಲಿ ಬಸವಸ್ತೋತ್ರಗಳನ್ನು ಪಠಿಸುತ್ತಿದ್ದರು. ನಿತ್ಯ ಲಿಂಗಪೂಜೆ ಮಾಡುತ್ತಿದ್ದರು ಎಂದು ಹೇಳಿದರು.

ಬಸಪ್ಪನವರು ಭೋವಿ ಸಮಾಜ, ನಾಯಕ ಸಮಾಜ, ಛಲವಾದಿ ಸಮಾಜದವರಿಗಾಗಿ ಹಾಸ್ಟೆಲ್‌ಗಳನ್ನು ಆರಂಭಿಸಿ, ಅವರಿಗೆ ಉತ್ತಮ ಶಿಕ್ಷಣ ಕೊಟ್ಟು ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಿದ್ದರು. ಸಮಾಜ ಸೇವೆಯನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳಲಿಲ್ಲ. ಅವರ ಬದುಕು ಸಾತ್ವಿಕವಾಗಿತ್ತು ಎಂದು ಹೇಳಿದರು.

ಕುಲಪತಿ ಪ್ರೊ.ಬಿ.ಎಸ್‌. ಬಿರಾದಾರ ಮಾತನಾಡಿ, ಕಷ್ಟದಲ್ಲಿಯೇ ಬೆಳೆದು, ಮಠವನ್ನು ಕಟ್ಟಿ ಬೆಳೆಸಿದವರು ಬಸವಲಿಂಗ ಪಟ್ಟದ್ದೇವರು. ಅವರ ಶಿಕ್ಷಣ ಸಂಸ್ಥೆಗಳಲ್ಲಿ 20 ಸಾವಿರಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಒಂದುವರೆ ಸಾವಿರ ಶಿಕ್ಷಕರಿದ್ದಾರೆ. ಗಡಿಭಾಗದಲ್ಲಿ ಚನ್ನಬಸವ ಪಟ್ಟದ್ದೇವರು ಶಿಕ್ಷಣಕ್ಕೆ ಕೊಟ್ಟಿದ್ದ ಮಹತ್ವವನ್ನು ಬಸವಲಿಂಗ ಪಟ್ಟದ್ದೇವರು ಕೂಡ ಕೊಟ್ಟು ಅವರ ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ ಎಂದರು.

ಪಟ್ಟದ್ದೇವರು ಕರ್ನಾಟಕ, ಅವಿಭಜಿತ ಆಂಧ್ರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವೆಡೆ ಬಸವತತ್ವ ಪ್ರಚಾರ ಮಾಡಿದ್ದಾರೆ. ಕನ್ನಡ, ತೆಲುಗು, ಮರಾಠಿ, ಹಿಂದಿ, ಇಂಗ್ಲಿಷ್‌ ಭಾಷೆಗಳಲ್ಲಿ ಅವರು ಬರೆದಿರುವ ಪುಸ್ತಕಗಳು ಹೊರಬಂದಿವೆ. ನೂರಾರು ಅನಾಥ ಮಕ್ಕಳಿಗೆ ಅನ್ನ, ಶಿಕ್ಷಣ ಕೊಟ್ಟು ಬೆಳೆಸುತ್ತಿದ್ದಾರೆ ಎಂದು ವರ್ಣಿಸಿದರು.

ಸಾಹಿತಿ ಎಚ್‌.ಎಸ್‌. ಮಂಜುನಾಥ ಕುರ್ಕಿ, ಆದರ್ಶ ವ್ಯಕ್ತಿತ್ವದ ವ್ಯಕ್ತಿ ಮಾಗನೂರು ಬಸಪ್ಪನವರು. ನಿಜಲಿಂಗಪ್ಪ, ಜಂಬಣ್ಣ ಸೇರಿದಂತೆ ಅನೇಕರ ಒಡನಾಟ ಹೊಂದಿದ್ದರು. ಕಡು ಕಷ್ಟದಲ್ಲಿ ಜೀವನ ಸವೆಸಿ, ಅವರ ಸ್ವಂತ ಪರಿಶ್ರಮದಿಂದ ದೊಡ್ಡ ವ್ಯಾಪಾರಿಯಾಗಿ ಬದಲಾಗಿದ್ದರು.ದಾವಣಗೆರೆಯಲ್ಲಿ ಕಾಂಗ್ರೆಸ್‌ ಸಮ್ಮೇಳನ ಸಂಘಟಿಸಿದ್ದರು. ವ್ಯಾಪಾರಿ ಸಂಸ್ಥೆ ಹುಟ್ಟು ಹಾಕಿದ್ದರು. ಡಿಇಎ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಬಡ ಮಕ್ಕಳಿಗೆ ಶಿಕ್ಷಣ ಕೊಟ್ಟಿದ್ದರು. ಅಶಕ್ತ ಪೋಷಕರ ಸಂಘ ಸ್ಥಾಪಿಸಿ, ಅನ್ನದಾಸೋಹಕ್ಕೆ ವ್ಯವಸ್ಥೆ ಮಾಡಿದ್ದರು. ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಸಿರಿಗೆರೆ ಮಠ ಮತ್ತು ಬಸಪ್ಪನವರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಅವರ ವ್ಯಕ್ತಿತ್ವ ಕುರಿತು ಮಾತನಾಡಿದರು.

1961ರಲ್ಲಿ ದಾವಣಗೆರೆ ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌, 1970ರಲ್ಲಿ ಬಾಪೂಜಿ ಸಹಕಾರ ಸಂಸ್ಥೆ ಸ್ಥಾಪಿಸಿದ್ದರು. ಹೀಗೆ ಹಲವು ರಂಗಗಳಲ್ಲಿ ಕೆಲಸ ನಿರ್ವಹಿಸಿದ ಅವರು ದಾವಣಗೆರೆಯ ಆಧುನಿಕ ಗಾಂಧಿ ಎಂದು ಕರೆಸಿಕೊಂಡಿದ್ದರು ಎಂದರು.

ಬೀದರ್‌ ಹಾಗೂ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಸಚಿವ ಈಶ್ವರ ಬಿ. ಖಂಡ್ರೆಯವರ ಅನುಪಸ್ಥಿತಿಯಲ್ಲಿ ಅವರ ಪತ್ನಿ ಗೀತಾ ಖಂಡ್ರೆ ಅವರು ಉದ್ಘಾಟಿಸಿದರು. ಲೇಖಕ ಬಸವರಾಜ ಬಲ್ಲೂರ ಅಭಿನಂದನಾ ನುಡಿಗಳನ್ನು ಆಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ, ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಸಂಗಮೇಶ್ವರ ಗೌಡರು, ಲಿಂಗಾಯತ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಜಿ. ಶೆಟಕಾರ, ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ರಾಷ್ಟ್ರೀಯ ಬಸವ ದಳದ ಜಿಲ್ಲಾ ಅಧ್ಯಕ್ಷ ಸೋಮಶೇಖರ ಪಾಟೀಲ, ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಜಾಗಲಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ಧನ್ನೂರ, ಡಾ. ಚನ್ನಬಸವ ಪಟ್ಟದ್ದೇವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೈರಾಜ ಖಂಡ್ರೆ, ಮುಖಂಡರಾದ ಬಸವರಾಜ ಬುಳ್ಳಾ, ಶ್ರೀಕಾಂತ ಸ್ವಾಮಿ, ಶಿವಶಂಕರ ಟೋಕರೆ, ಟಿ.ಎಂ. ಮಚ್ಚೆ, ಎಂ.ಎಸ್‌. ಮನೋಹರ್‌ ಮತ್ತಿತರರು ಹಾಜರಿದ್ದರು. 

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನ
ನೃತ್ಯಾಂಗನ ನಾಟ್ಯ ಕಲಾ ತಂಡದವರು ಸಮೂಹ ವಚನ ನೃತ್ಯ ಪ್ರಸ್ತುತಪಡಿಸಿದರು ಪ್ರಜಾವಾಣಿ ಚಿತ್ರ: ಲೋಕೇಶ ವಿ. ಬಿರಾದಾರ
ಬಸವಲಿಂಗ ಪಟ್ಟದ್ದೇವರು ಬಸವತತ್ವದ ನಿಜ ಮೂರ್ತಿ. ಮಠದ ಗುರುಗಳು ಮನದ ಗುರುಗಳು ಪಟ್ಟದ್ದೇವರು
. –ಅಕ್ಕ ಗಂಗಾಂಬಿಕೆ ಅಧ್ಯಕ್ಷೆ ಬಸವ ಸೇವಾ ಪ್ರತಿಷ್ಠಾನ
ಕನ್ನಡ ತತ್ವ ವೈಚಾರಿಕತೆ ಬೆಳೆಸಿದವರು ಬಸವಾದಿ ಶರಣರು. ಅದನ್ನು ಮುಂದುವರೆಸುತ್ತಿರುವವರು ಪಟ್ಟದ್ಧೇವರು.
–ಬಸವರಾಜ ಬಲ್ಲೂರ ಲೇಖಕ
ಬಸವಲಿಂಗ ಪಟ್ಟದ್ದೇವರು ಮತ್ತು ಮಾಗನೂರು ಬಸಪ್ಪನವರು ಬಡತನದಲ್ಲಿ ಬೆಳೆದು ಅನೇಕರ ಬಾಳು ಹಸನಾಗಿಸಿದ್ದಾರೆ.
–ಶಿವಾನಂದ ಸ್ವಾಮೀಜಿ ಹುಲಸೂರು ಗುರು ಬಸವೇಶ್ವರ ಸಂಸ್ಥಾನ ಮಠ
‘ಲಿಂಗಾನಂದ ಸ್ವಾಮೀಜಿ ಪ್ರವಚನದ ದೊಡ್ಡ ಪರಿಣಾಮ’
‘ನಾನು 9ನೇ ತರಗತಿಯಲ್ಲಿದ್ದಾಗ ಔರಾದ್‌ನಲ್ಲಿ ಅಮರೇಶ್ವರ ದೇವಸ್ಥಾನದ ಬಳಿ ಲಿಂಗೈಕ್ಯ ಲಿಂಗಾನಂದ ಸ್ವಾಮೀಜಿಯವರು ನಡೆಸಿಕೊಡುತ್ತಿದ್ದ ಪ್ರವಚನ ಕೇಳಿದ ನಂತರ ನನ್ನ ಮೇಲೆ ದೊಡ್ಡ ಪರಿಣಾಮ ಉಂಟಾಯಿತು. ನಾನು ಬಹುದೇವೋಪಾಸನೆಯನ್ನು ತೊರೆದು ಇಷ್ಟಲಿಂಗ ಸರ್ವಸ್ವ ಎಂದು ಭಾವಿಸಿ ಅದನ್ನು ಆಚರಣೆಗೆ ತಂದೆ’ ಎಂದು ಬಸವಲಿಂಗ ಪಟ್ಟದ್ದೇವರು ಹಳೆಯ ದಿನಗಳನ್ನು ಮೆಲುಕು ಹಾಕಿದರು. ‘ಭಾಲ್ಕಿ ಹಿರೇಮಠಕ್ಕೆ ನಾನು ಓದಲು ಹೋಗಿದ್ದೆ. ಆದರೆ ನನ್ನ ಆಸಕ್ತಿ ಕಂಡು ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರು ನನಗೆ ದೀಕ್ಷೆ ಕೊಟ್ಟು ಗುರು ಸ್ಥಾನ ಕೊಟ್ಟರು. ನಂತರ ಭಾಲ್ಕಿ ಮಠವನ್ನು ನೋಡಿಕೊಳ್ಳಬೇಕೆಂದು ಜವಾಬ್ದಾರಿ ವಹಿಸಿದರು. ಆದರೆ ನನ್ನ ಕುಟುಂಬ ಸದಸ್ಯರಿಗೆ ನನ್ನೂರಿನವರಿಗೆ ಅದು ಬೇಡವಾಗಿತ್ತು. ಆದರೆ ದೈವದ ಕರೆ ಬೇರೆಯಾಗಿತ್ತು’ ಎಂದು ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.