ADVERTISEMENT

ಇಟಗಾ ; ಕೋಟಿಲಿಂಗೇಶ್ವರ ದೇಗುಲದಲ್ಲಿ ಶಿವರಾತ್ರಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 5:03 IST
Last Updated 1 ಮಾರ್ಚ್ 2022, 5:03 IST
ಚಿಟಗುಪ್ಪ ತಾಲ್ಲೂಕಿನ ಇಟಗಾ ಶಿವಸಿದ್ಧ ಯೋಗಾಶ್ರಮ ಮುಕ್ತಿಮಠದಲ್ಲಿನ ಕೋಟಿಲಿಂಗೇಶ್ವರ, 12 ಜ್ಯೋತಿರ್ಲಿಂಗ ದೇವಾಲಯ
ಚಿಟಗುಪ್ಪ ತಾಲ್ಲೂಕಿನ ಇಟಗಾ ಶಿವಸಿದ್ಧ ಯೋಗಾಶ್ರಮ ಮುಕ್ತಿಮಠದಲ್ಲಿನ ಕೋಟಿಲಿಂಗೇಶ್ವರ, 12 ಜ್ಯೋತಿರ್ಲಿಂಗ ದೇವಾಲಯ   

ಚಿಟಗುಪ್ಪ: ತಾಲ್ಲೂಕಿನ ಇಟಗಾ ಗ್ರಾಮ ಹೊರವಲಯದ ಶಿವಸಿದ್ಧ ಯೋಗಾಶ್ರಮ ಮುಕ್ತಿಮಠದಲ್ಲಿಯ ಕೋಟಿಲಿಂಗೇಶ್ವರ ದೇವಾಲಯಕ್ಕೆ ಮಹಾಶಿವರಾತ್ರಿಯಂದು ಜಿಲ್ಲೆ, ಹೊರ ಜಿಲ್ಲೆಗಳು ಹಾಗೂ ನೆರೆಯ ರಾಜ್ಯಗಳಿಂದ ಶಿವಭಕ್ತರು ಧಾವಿಸಿ ಬರುತ್ತಾರೆ.

ದೇವಾಲಯದಲ್ಲಿ 12 ಅಡಿ ಎತ್ತರದ ಶಿವಲಿಂಗ ಪ್ರತಿಷ್ಠಾಪಿಸಿದ್ದು, ಲಿಂಗ ಮೂರ್ತಿಯ ಸುತ್ತ 63 ಶಿವ ಶರಣರ ಹಾಗೂ ಅಷ್ಟ ವಿನಾಯಕ ಮೂರ್ತಿಗಳು ಇವೆ.

ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರಗಳ ಸಂತರ, ಮಹಾತ್ಮರ, ಅಧ್ಯಾತ್ಮ ಸಾಧಕರ ಮೂರ್ತಿಗಳನ್ನೂ ಕೆತ್ತಲಾಗಿದೆ. 10ರಿಂದ 21ನೇ ಶತಮಾನದವರೆಗಿನ ಶಿವನ ಆರಾಧಕ ಋಷಿ-ಮುನಿಗಳ, ಪವಾಡ ಪುರುಷರ ಮೂರ್ತಿಗಳ ದರ್ಶನವೂ ಭಕ್ತರಿಗೆ ಲಭಿಸುತ್ತದೆ.

ADVERTISEMENT

ದೇವಾಲಯದ ನಾಲ್ಕು ದಿಕ್ಕುಗಳ ಗೋಡೆಗಳು ಶಿವಾರಾಧಕರ ಪ್ರತಿಕೃತಿಗಳಿಂದ ಕಂಗೊಳಿಸುತ್ತವೆ. ದೇಗುಲದ ಪಕ್ಕದಲ್ಲಿಯೇ 12 ಜ್ಯೋತಿರ್ಲಿಂಗ ದೇವಾಲಯ ಇದೆ.

ಪ್ರತಿ ವರ್ಷ ಶಿವರಾತ್ರಿ ಪ್ರಯುಕ್ತ ವಿಶೇಷ ಬಿಲ್ವಾರ್ಚನೆ, ಮಹಾಭಿಷೇಕ ಪೂಜೆ, ಅನ್ನಸಂತರ್ಪಣೆ ಕಾರ್ಯಗಳು ಜರುಗುತ್ತವೆ. ದೇವಾಲಯಕ್ಕೆ ಬರುವ ಭಕ್ತರಿಗೆ ರಾತ್ರಿ ಚನ್ನಮಲ್ಲೇಶ್ವರ ತ್ಯಾಗಿ ಅವರ ನೇತೃತ್ವದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯುತ್ತದೆ. ಆ ನಂತರಸಂಗೀತ ಕಲಾವಿದರು ಭಜನೆ ಕಾರ್ಯಕ್ರಮ ನಡೆಸಿಕೊಡುತ್ತಾರೆ.

‘ದೇವರ ದರ್ಶನಕ್ಕೆ ಬರುವ ಭಕ್ತರಿಗೆ ನೇರವಾಗಿ ದರ್ಶನ ಪಡೆಯುವ ವ್ಯವಸ್ಥೆ ಕಲ್ಪಿಸಿದ್ದಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ’ ಎನ್ನುತ್ತಾರೆ ಮುಕ್ತಿಮಠದ ನೀಲಕಂಠ ಇಸ್ಲಾಂಪುರ್

ದೇವಾಲಯಕ್ಕೆ ಬರುವ ಭಕ್ತರಿಗೆ ವಿಶ್ರಾಂತಿ, ಪ್ರಸಾದ ವ್ಯವಸ್ತೆ ಕಲ್ಪಿಸಲಾಗಿದೆ ಎಂದು ಇಂದ್ರಣ್ಣ ಮೈಲೂರ್, ಅಣ್ಣೆಪ್ಪ ಇಸ್ಲಾಮಪುರ್ ತಿಳಿಸಿದರು.

‘ಮಹಾಶಿವರಾತ್ರಿ ಪೂಜೆಗೆ ಬರುವ ಭಕ್ತರಿಗೆ ಮಠದಿಂದ ಬಿಲ್ವಪತ್ರೆ, ವಿವಿಧ ಬಗೆಯ ಪುಷ್ಪಗಳ ಪೂಜಾ ಸಾಮಗ್ರಿಗಳು ವಿತರಿಸಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸುವ ಸಂಪ್ರದಾಯ ಹಿಂದಿನಿಂದ ನಡೆದು ಬಂದಿದೆ’ ಎನ್ನುತ್ತಾರೆ ಪೀಠಾಧಿಪತಿ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು.

*ಶಿವಸಿದ್ಧ ಯೋಗಾಶ್ರಮದ ಮುಕ್ತಿ ಮಠದ ಕೋಟಿಲಿಂಗೇಶ್ವರ ದೇವಾಲಯ ಕಲ್ಯಾಣ ಕರ್ನಾಟಕ ಭಾಗದ ಭಕ್ತರಿಗೆ ಮಹಾ ಶಿವರಾತ್ರಿ ಆಚರಣೆಗೆ ಪವಿತ್ರವಾದ ಸ್ಥಳ

-ಚನ್ನಮಲ್ಲೇಶ್ವರ ತ್ಯಾಗಿ, ಕೋಟಿಲಿಂಗೇಶ್ವರ ದೇಗುಲದ ಪೀಠಾಧಿಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.