ADVERTISEMENT

ಡಿ.13ರಿಂದ ಮೈಲಾರ ಮಲ್ಲಣ್ಣ ಜಾತ್ರೆ

ಒಂದು ತಿಂಗಳು ವಿವಿಧ ಧಾರ್ಮಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 12:30 IST
Last Updated 12 ಡಿಸೆಂಬರ್ 2018, 12:30 IST
ಭಾಲ್ಕಿ ತಾಲ್ಲೂಕಿನ ಖಾನಾಪುರದ ಮೈಲಾರ ಮಲ್ಲಣ್ಣ ದೇವಸ್ಥಾನ
ಭಾಲ್ಕಿ ತಾಲ್ಲೂಕಿನ ಖಾನಾಪುರದ ಮೈಲಾರ ಮಲ್ಲಣ್ಣ ದೇವಸ್ಥಾನ   

ಬೀದರ್‌: ‘ದಕ್ಷಿಣ ಕಾಶಿ’ ಎಂದೇ ಪ್ರಸಿದ್ಧಿ ಪಡೆದಿರುವ ಭಾಲ್ಕಿ ತಾಲ್ಲೂಕಿನ ಖಾನಾಪುರದ ಮೈಲಾರ ಮಲ್ಲಣ್ಣ ದೇವಸ್ಥಾನದ ಜಾತ್ರಾ ಮಹೋತ್ಸವ ಡಿಸೆಂಬರ್ 13 ರಂದು ಆರಂಭವಾಗಲಿದ್ದು, ಜನವರಿ 13 ರ ವರೆಗೆ ನಡೆಯಲಿದೆ.

ಜಾತ್ರೆ ಪ್ರಯುಕ್ತ ದೇಗುಲ ತಳಿರು ತೋರಣ, ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿದೆ. ಭಕ್ತರ ಪವಿತ್ರ ಸ್ನಾನಕ್ಕೆ ಪುಷ್ಕರಣಿ ಅಣಿಗೊಂಡಿದೆ. ಕಾಯಿ ಕರ್ಪೂರ, ಪೂಜಾ ಸಾಮಗ್ರಿ ಸೇರಿದಂತೆ ಹತ್ತಾರು ಮಳಿಗೆಗಳು ಸ್ಥಾಪನೆಗೊಂಡಿವೆ. ಪ್ರಸಾದ, ಕುಡಿಯುವ ನೀರು, ಭಕ್ತರಿಗೆ ವಿಶ್ರಾಂತಿ ಕೋಣೆ ಸೇರಿದಂತೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ಭಕ್ತರ ಅನುಕೂಲಕ್ಕಾಗಿ ಬೀದರ್ ಹಾಗೂ ಭಾಲ್ಕಿಯಿಂದ ಬರುವ ಬಸ್‌ಗಳು ದೇವಸ್ಥಾನದ ಮಾರ್ಗವಾಗಿ ಸಂಚರಿಸುವ ವ್ಯವಸ್ಥೆ ಮಾಡಲಾಗಿದೆ. ಗುರುವಾರ ರಾತ್ರಿ 9.30 ಕ್ಕೆ ಮಲ್ಹಾರಿ, ಮಾಳಸಕಾಂತೆ ಹಾಗೂ ಭಾನು ಅವರ ಮದುವೆಯೊಂದಿಗೆ ಜಾತ್ರೆಗೆ ಅಧಿಕೃತ ಚಾಲನೆ ದೊರೆಯಲಿದೆ.

ADVERTISEMENT

ಡಿ. 18 ರಂದು ರಾತ್ರಿ 8.30ಕ್ಕೆ ನಂದಿಯ ಮೇಲೆ ದೇವರ ಮೆರವಣಿಗೆ, ಡಿ. 22 ರಂದು ರಾತ್ರಿ 8.30ಕ್ಕೆ ಪಲ್ಲಕ್ಕಿ ಉತ್ಸವ ಮತ್ತು ಆನೆಯ ಮೇಲೆ ದೇವರ ಮೆರವಣಿಗೆ, ಡಿ.23 ರಂದು ರಾತ್ರಿ 8.30ಕ್ಕೆ ಪಲ್ಲಕ್ಕಿ ಉತ್ಸವ ಹಾಗೂ ಕುದುರೆ ಮೇಲೆ ದೇವರ ಮೆರವಣಿಗೆ, ಡಿ. 30 ರಂದು ರಾತ್ರಿ 8.30ಕ್ಕೆ ಪಲ್ಲಕ್ಕಿ ಉತ್ಸವ ಮತ್ತು ಆನೆಯ ಮೇಲೆ ದೇವರ ಮೆರವಣಿಗೆ, ಜನವರಿ 6ರಂದು ರಾತ್ರಿ 8.30ಕ್ಕೆ ಪಲ್ಲಕ್ಕಿ ಉತ್ಸವ ಹಾಗೂ ಆನೆಯ ಮೇಲೆ ದೇವರ ಮೆರವಣಿಗೆ ನಡೆಯಲಿದೆ. ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ಜನವರಿ 13ರಂದು ಜಾತ್ರಾ ಮಹೋತ್ಸವ ಸಮಾರೋಪಗೊಳ್ಳಲಿದೆ.

ಒಂದು ತಿಂಗಳ ಜಾತ್ರೆ: ಮೈಲಾರ ಮಲ್ಲಣ್ಣ ಜಾತ್ರೆಯು ಒಂದು ತಿಂಗಳ ಕಾಲ ನಡೆಯುವ ಜಿಲ್ಲೆಯ ಏಕೈಕ ಜಾತ್ರೆಯಾಗಿದೆ. ಮಲ್ಲಣ್ಣ ದೇವರಿಗೆ ಕರ್ನಾಟಕ ಅಷ್ಟೇ ಅಲ್ಲ; ನೆರೆಯ ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧೆಡೆ ಅಪಾರ ಭಕ್ತರಿದ್ದಾರೆ.

ಜಾತ್ರೆ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬಂದು ಪ್ರಾರ್ಥನೆ, ಹರಕೆ ತೀರಿಸುತ್ತಾರೆ. ಅನೇಕರು ಬಸ್, ಕಾರು, ಜೀಪ್‌ಗಳಲ್ಲಿ ಕುಟುಂಬ ಸಮೇತರಾಗಿಯೂ ಬರುತ್ತಾರೆ. ತಿಂಗಳ ಅವಧಿಯಲ್ಲಿ ಅಸಂಖ್ಯಾತ ಭಕ್ತರು ಭೇಟಿ ಕೊಡುತ್ತಾರೆ ಎಂದು ದೇವಸ್ಥಾನದ ಅಧ್ಯಕ್ಷ ಕೆ.ಡಿ. ಗಣೇಶ ಹಾಗೂ ಆಡಳಿತಾಧಿಕಾರಿಯಾದ ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.