ಔರಾದ್: ‘ಮಳೆಗಾಲ ಇರುವುದರಿಂದ ವಿದ್ಯಾರ್ಥಿಗಳಿಗೆ ಆರೋಗ್ಯ ಸಮಸ್ಯೆ ಆಗದಂತೆ ಶುಚಿತ್ವ ಕಾಪಾಡಬೇಕು’ ಎಂದು ಲೋಕಾಯುಕ್ತ ಡಿವೈಎಸ್‌ಪಿ ಎನ್.ಎಂ. ಓಲೇಕಾರ್ ಸೂಚನೆ ನೀಡಿದರು.
ತಾಲ್ಲೂಕಿನ ಸಂತಪುರ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಶನಿವಾರ ಭೇಟಿ ನೀಡಿದ ಅವರು ಶುಚಿತ್ವ ಇಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ವಸತಿ ನಿಲಯ ಮೇಲ್ವಿಚಾರಕರ ಗೈರು ಹಾಜರಿ ಬಗ್ಗೆಯೂ ಸಿಡಿಮಿಡಿಗೊಂಡರು. ಊಟದ ಕೋಣೆ, ವಿದ್ಯಾರ್ಥಿಗಳು ಮಲಗುವ ಕೊಠಡಿಗೆ ಹೋಗಿ ಪರಿಶೀಲಿಸಿದರು. ಕೆಲ ವಿದ್ಯಾರ್ಥಿಗಳ ಜತೆ ಪ್ರತ್ಯೇಕವಾಗಿ ಮಾತನಾಡಿ ಮಾಹಿತಿ ಪಡೆದುಕೊಂಡರು.
ಸಂತಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೂ ಭೇಟಿ ನೀಡಿ ಪರಿಶೀಲಿಸಿದರು.
‘ಔರಾದ್ ಪಟ್ಟಣದ ಉಪ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ ದಲ್ಲಾಳಿಗಳ ಹಾವಳಿ ಇರುವ ಬಗ್ಗೆ ದೂರುಗಳು ಬಂದಿವೆ. ಸುಧಾರಿಸಿಕೊಂಡು ಜನರಿಗೆ ಅನಗತ್ಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಉಪ ನೋಂದಣಾಧಿಕಾರಿಗಳಿಗೆ ಸೂಚಿಸಿದರು.
ಲೋಕಾಯುಕ್ತ ಇನ್ಸಪೆಕ್ಟರ್ ಪ್ರದೀಪ ಕೊಳ್ಳಾ, ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ, ಸಿಪಿಐ ರಘುವೀರಸಿಂಗ್ ಠಾಕೂರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.