ADVERTISEMENT

ನವ ವರ್ಷದ ಮೊದಲ ಹಬ್ಬದ ಸಂಭ್ರಮ: ಎಳ್ಳು– ಬೆಲ್ಲ ಹಂಚಿ ಮಕರ ಸಂಕ್ರಮಣ

ಕೋಲಾಟವಾಡಿದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 7:28 IST
Last Updated 16 ಜನವರಿ 2026, 7:28 IST
ಬೀದರ್‌ನ ಗುಮ್ಮೆ ಕಾಲೊನಿಯಲ್ಲಿ ಏರ್ಪಡಿಸಿದ್ದ ಮಕರ ಸಂಕ್ರಮಣ ಕಾರ್ಯಕ್ರಮದಲ್ಲಿ ಮಹಿಳೆಯರು ಕೋಲಾಟವಾಡಿದರು
ಬೀದರ್‌ನ ಗುಮ್ಮೆ ಕಾಲೊನಿಯಲ್ಲಿ ಏರ್ಪಡಿಸಿದ್ದ ಮಕರ ಸಂಕ್ರಮಣ ಕಾರ್ಯಕ್ರಮದಲ್ಲಿ ಮಹಿಳೆಯರು ಕೋಲಾಟವಾಡಿದರು   

ಬೀದರ್‌: ಮಕರ ಸಂಕ್ರಮಣ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಬೆಳಿಗ್ಗೆ ಮನೆಯ ಅಂಗಳವನ್ನು ಸ್ವಚ್ಛಗೊಳಿಸಿ, ನೀರು ಹರಿಸಿ, ರಂಗು ರಂಗಿನ ರಂಗೋಲಿ ಬಿಡಿಸಿದರು. ಆನಂತರ ತಮ್ಮ ಮನೆ ದೇವರಿಗೆ ಪೂಜೆ ಸಲ್ಲಿಸಿದರು. ಎಳ್ಳು, ಬೆಲ್ಲ, ಶೇಂಗಾ, ಕಬ್ಬು, ಕಡಲೆ ದಂಟು ಹಾಗೂ ನೈವೇದ್ಯ ಅರ್ಪಿಸಿದರು. ಬಳಿಕ ಆರತಿ ಬೆಳಗಿದರು.

ಬಳಿಕ ಪರಸ್ಪರ ಎಳ್ಳು, ಬೆಲ್ಲ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಕಿರಿಯರು ಹಿರಿಯರ ಪಾದಗಳಿಗೆ ನಮಿಸಿ ಆಶೀರ್ವಾದ ಪಡೆದರು. ಕೆಲವರು ಅವರು ಗುರುಗಳ ಬಳಿಗೆ ಹೋಗಿ ಆಶೀರ್ವಾದ ಪಡೆದುಕೊಂಡರು.

ADVERTISEMENT

ಆನಂತರ ಹೊಸ ಬಟ್ಟೆ ಧರಿಸಿದ ಹೆಣ್ಣು ಮಕ್ಕಳು, ನೆಂಟರು, ಸ್ನೇಹಿತರ ಮನೆಗೆ ಹೋಗಿ ಎಳ್ಳು, ಬೆಲ್ಲ ಕೊಟ್ಟು ಹಬ್ಬದ ಶುಭ ಕೋರಿದರು. ಆಯಾ ಬಡಾವಣೆಗಳಲ್ಲಿ, ದೇವಸ್ಥಾನಗಳ ಆವರಣಗಳಲ್ಲಿ ಕೋಲಾಟ ಹಾಕಿ, ಹಾಡು ಹಾಡಿ ಸಂಭ್ರಮಿಸಿದರು.

ನಗರದ ಗುಮ್ಮೆ ಕಾಲೊನಿಯ ಹನುಮಾನ ಮಂದಿರದ ಆವರಣದಲ್ಲಿ ರಾಧಾಕೃಷ್ಣ ಮಹಿಳಾ ಕೋಲಾಟ ಸಂಘದ ಸದಸ್ಯೆ ಇಳಕಲ್‌ ಸೀರೆ ಧರಿಸಿ, ಕೋಲಾಟವಾಡಿ ಗಮನ ಸೆಳೆದರು.

ಹನುಮಾನ ಮಂದಿರದ ಅಂಗಳದಲ್ಲಿ ರಂಗೋಲಿ ಬಿಡಿಸಿ, ತಳಿರು ತೋರಣ ಕಟ್ಟಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ-ಹರಿದಿನಗಳಿಗೆ ವಿಶೇಷ ಮಹತ್ವವಿದೆ. ವರುಷದ ಮೊದಲನೆ ಹಬ್ಬವಾದ ಮಕರ ಸಂಕ್ರಮಣವನ್ನು ಗುಮ್ಮೆ ಕಾಲೊನಿಯಲ್ಲಿ ಎಲ್ಲರೂ ಸೇರಿಕೊಂಡು ಆಚರಿಸುತ್ತಿರುವುದು ಉತ್ತಮ ಸಂಪ್ರದಾಯ. ಖುಷಿ ತಂದಿದೆ ಎಂದರು.

ವೈಷ್ಣೋದೇವಿ ಕಲ್ಚರಲ್ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಿರಾದಾರ ಮತ್ತಿತರರು ಇದ್ದರು. ನೂರಂದಪ್ಪ ಬಾಳೂರೆ ಕೋಲಾಟ ಗಾಯನ ಪ್ರಸ್ತುತಪಡಿಸಿದರು. ಸಿದ್ರಾಮಯ್ಯ ಹಿರೇಮಠ ಹಾರ್ಮೋನಿಯಂ ಮತ್ತು ರೇವಣಪ್ಪ ಮೂಲಗೆ ತಬಲ ಸಾಥ್ ನೀಡಿದರು. ರಾಧಾಕೃಷ್ಣ ಮಹಿಳಾ ಕೋಲಾಟ ಸಂಘದ ಅಧ್ಯಕ್ಷೆ ಗೀತಾ ಪಾಟೀಲ್ ಸ್ವಾಗತಿಸಿದರು. ಸಂಗಮೇಶ ಬಿರಾದಾರ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಭಾರತಿ ಬಿರಾದಾರ ವಂದಿಸಿದರು. ಮಹಾದಪ್ಪ ಬಿರಾದಾರ, ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಮಹಾದೇವಿ ಬಿರಾದಾರ, ಕೋಲಾಟ ಸಂಘದ ಸದಸ್ಯರು, ಬಡಾವಣೆಯ ಜನರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.

ಬೀದರ್‌ನಲ್ಲಿ ಗುರುವಾರ ಚಿಣ್ಣರು ಪರಸ್ಪರ ಎಳ್ಳು ಬೆಲ್ಲ ವಿನಿಮಯ ಮಾಡಿಕೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.