ಬೀದರ್: ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ರೈತರು ತೋಟಗಾರಿಕೆಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಅದರಲ್ಲೂ ಮಾವು ಬೆಳೆಯಲು ವಿಶೇಷ ಆಸ್ಥೆ ವಹಿಸುತ್ತಿದ್ದಾರೆ.
ಈ ಕಾರಣದಿಂದಲೇ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಮಾವು ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಹಜವಾಗಿಯೇ ಮಾವಿನ ಪ್ರದೇಶ ಕೂಡ ವಿಸ್ತರಣೆಯಾಗುತ್ತಿದೆ.
ತೋಟಗಾರಿಕೆ ಇಲಾಖೆಯ ಪ್ರಕಾರ, ಕಳೆದ ಮೂರ್ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಪ್ರತಿ ವರ್ಷ 150ರಿಂದ 200 ಹೆಕ್ಟೇರ್ ಪ್ರದೇಶದಲ್ಲಿ ಹೊಸದಾಗಿ ಮಾವು ಬೆಳೆಸಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ 2,047 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಸಲಾಗಿದೆ. ಉತ್ತಮ ಫಸಲು ಹಾಗೂ ಆದಾಯ ಸಿಗುತ್ತಿರುವುದರಿಂದ ಬರುವ ವರ್ಷಗಳಲ್ಲಿ ಇನ್ನಷ್ಟು ಪ್ರದೇಶ ವಿಸ್ತರಣೆಯಾಗುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಾರೆ ಅಧಿಕಾರಿಗಳು.
ಮಾವು ಬೆಳೆಗೆ ಜಿಲ್ಲೆಯ ಜಮೀನು ಪ್ರಶಸ್ತವಾಗಿದ್ದು, ಅನೇಕ ತಳಿಯ ಮಾವು ಬೆಳೆಸಲಾಗುತ್ತದೆ. ಕೇಸರ್, ಮಲ್ಲಿಕಾ, ಬೆನೆಶಾನ್, ದಶೇರಿ, ಹಿಮಾಯತ್, ಮಲ್‌ಗೋವಾ ಪ್ರಮುಖವಾದವುಗಳು. ಇದಲ್ಲದೇ ಸ್ಥಳೀಯ ದೇಶಿ ತಳಿಯ ಮಾವು ಕೂಡ ಬೆಳೆಯಲಾಗುತ್ತದೆ.
ಹೈದರಾಬಾದ್, ಪುಣೆ, ಮುಂಬೈ, ಸೋಲಾಪೂರ, ನಾಂದೇಡ್, ಲಾತೂರ್‌ನಲ್ಲಿ ಉತ್ತಮ ಮಾರುಕಟ್ಟೆ ಇರುವುದರಿಂದ ಅಲ್ಲಿನ ವ್ಯಾಪಾರಿಗಳೇ ಖುದ್ದು ರೈತರ ತೋಟಕ್ಕೆ ಬಂದು, ಮುಂಗಡವಾಗಿ ಹಣ ಪಾವತಿಸುತ್ತಿದ್ದಾರೆ. ಈ ಕಾರಣದಿಂದ ರೈತರಿಗೆ ಎಂದೂ ಮಾರುಕಟ್ಟೆಯ ಸಮಸ್ಯೆಯೇ ಆಗಿಲ್ಲ.
‘ಉತ್ತಮ ಫಲವತ್ತಾದ ಜಮೀನಿನಲ್ಲಿ ರೈತರು ಕೃಷಿ ಮಾಡುತ್ತಾರೆ. ಪಾಳು ಬಿದ್ದ ಜಮೀನಿನಲ್ಲಿ ಈ ಹಿಂದೆ ಏನೂ ಮಾಡುತ್ತಿರಲಿಲ್ಲ. ಈಗ ಎಲ್ಲರಲ್ಲೂ ತಿಳಿವಳಿಕೆ ಬಂದಿದೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು, ಕಡಿಮೆ ನೀರಿನಲ್ಲಿ ಮಾವು ಬೆಳೆಸುತ್ತಿದ್ದಾರೆ. ಉತ್ತಮ ಆದಾಯ ಗಳಿಸಿ ಸ್ಥಿತಿವಂತರಾಗುತ್ತಿದ್ದಾರೆ. ಈ ಕಾರಣದಿಂದ ಪ್ರತಿ ವರ್ಷ ಮಾವು ಕೃಷಿಯಲ್ಲಿ ಹೊಸಬರು ಸೇರ್ಪಡೆಯಾಗುತ್ತಿದ್ದಾರೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ವಿಶ್ವನಾಥ ಜೀರಳಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಮಾವು ಬೆಳೆಯಲು ಮುಂದೆ ಬಂದರೆ ಅಗತ್ಯ ತರಬೇತಿ ಮಾರ್ಗದರ್ಶನ ನೀಡಲಾಗುತ್ತದೆ. ಅದರ ಪ್ರಯೋಜನ ಪಡೆಯಬಹುದುವಿಶ್ವನಾಥ ಜೀರಳಿ ಉಪನಿರ್ದೇಶಕ ತೋಟಗಾರಿಕೆ ಇಲಾಖೆ
ಬೀದರ್ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಗುರುವಾರ ಮಧ್ಯಾಹ್ನ ಬಿರುಗಾಳಿಯೊಂದಿಗೆ ಸುರಿದ ಭಾರಿ ಮಳೆಯಿಂದ ಅಪಾರ ಪ್ರಮಾಣದಲ್ಲಿ ಮಾವು ನೆಲಕ್ಕುರುಳಿವೆ. ಬೀದರ್ ತಾಲ್ಲೂಕಿನ ಮರಕಲ್ ಚಿಟ್ಟಾವಾಡಿ ಹುಮನಾಬಾದ್ ಚಿಟಗುಪ್ಪದ ಹಲವು ಕಡೆಗಳಲ್ಲಿ ಮಾವು ನೆಲಕ್ಕೆ ಬಿದ್ದಿವೆ. ಹೆಚ್ಚಿನ ಕಡೆಗಳಲ್ಲಿ ಮಾವು ಇನ್ನೂ ಕಾಯಿ ಹಂತದಲ್ಲಿದ್ದು ಈ ಸಂದರ್ಭದಲ್ಲಿ ಗಾಳಿಗೆ ಬಿದ್ದದ್ದರಿಂದ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ಮಾವು ಬೆಳೆಗಾರರು. ‘ನನ್ನ ತೋಟದಲ್ಲಿ ಮುನ್ನೂರಕ್ಕೂ ಹೆಚ್ಚು ಮಾವಿನ ಮರಗಳಿವೆ. ಗುರುವಾರ ಬೀಸಿದ ಬಿರುಗಾಳಿಗೆ ಸಾಕಷ್ಟು ಕಾಯಿಗಳು ನೆಲಕ್ಕೆ ಬಿದ್ದಿವೆ. ಅವಧಿಗೂ ಮುನ್ನವೇ ಈ ರೀತಿ ಕೆಳಗೆ ಬಿದ್ದರೆ ಅವುಗಳು ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸದ್ಯ ನಷ್ಟದ ಪ್ರಮಾಣ ಗೊತ್ತಾಗಲ್ಲ. ಆದರೆ ನಷ್ಟವಾಗುತ್ತದೆ’ ಎಂದು ಚಿಟ್ಟಾವಾಡಿಯ ಮಾವು ಬೆಳೆಗಾರ ಜಾಫರ್‌ಮಿಯ್ಯಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಕೆಲ ದುರ್ಬಲ ಹಣ್ಣುಗಳು ಗಾಳಿಯಿಂದ ನೆಲಕ್ಕೆ ಬೀಳಬಹುದು. ಚೆನ್ನಾಗಿ ಕಾಯಿ ಕಟ್ಟಿರುವ ಮಾವು ಬೀಳುವುದಿಲ್ಲ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ವಿಶ್ವನಾಥ ಜೀರಳಿ ತಿಳಿಸಿದ್ದಾರೆ. ‘ಇನ್ನೊಂದು ವಾರದಲ್ಲಿ ದಶೇರಿ ಮಾರುಕಟ್ಟೆಗೆ ಹೋಗುತ್ತದೆ. ಎರಡು ವಾರಗಳ ನಂತರ ಕೇಸರ್ ಮೇ ಕೊನೆಯಲ್ಲಿ ಬೆನೆಶಾನ್. ಈಗಾಗಲೇ ತೋಟಗಳ ಹರಾಜು ಪ್ರಕ್ರಿಯೆ ಆಗಿದ್ದು ಶೀಘ್ರದಲ್ಲೇ ಹಣ್ಣು ಮಾರುಕಟ್ಟೆಗೆ ಹೋಗುತ್ತದೆ’ ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.