ಔರಾದ್: ಭಾರಿ ಮಳೆ ಹಾಗೂ ಮಹಾರಾಷ್ಟ್ರದ ಧನೆಗಾಂವ್ ಜಲಾಶಯದಿಂದ ಹೆಚ್ಚುವರಿ ನೀರು ಹರಿದು ಬರುತ್ತಿರುವುದರಿಂದ ಜಿಲ್ಲೆಯ ಮಾಂಜ್ರಾ ನದಿ ಮೈತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟ ಮೀರಿದೆ.
ಮಾಂಜ್ರಾ ನದಿ ಪಾತ್ರದಲ್ಲಿರುವ ತಾಲ್ಲೂಕಿನ ಅನೇಕ ಗ್ರಾಮಗಳ ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದೆ. ಕಳೆದ 2 ವಾರದ ಹಿಂದೆ ಸುರಿದ ಭಾರಿ ಮಳೆಯಿಂದ ಹೆಸರು, ಉದ್ದಿನ ಬೆಳೆ ಹಾನಿಯಾಗಿದೆ. ಈಗ ಮತ್ತೆ ಮಳೆ ಆರ್ಭಟ ಮುಂದುವರಿದು ತೊಗರಿ, ಜೋಳ, ಸೋಯಾಬಿನ್ ಬೆಳೆ ಹಾಳಾಗಿದೆ. ನದಿ ಪಾತ್ರದ ಹೆಡಗಾಪುರ, ನಾಗೂರ, ಬಾಬಳಿ, ಬಾಚೆಪಳ್ಳಿ, ಮಣಿಗೆಂಪೂರ, ಧುಪತಮಹಾಗಾಂವ್, ಕೌಠಾ, ಕಂದಗೂಳ, ಖಾನಾಪೂರ ಸೇರಿದಂತೆ ಹತ್ತಾರು ಗ್ರಾಮಗಳ ಹೊಲಗಳು ನೀರಿನಲ್ಲಿ ಮುಳುಗಿವೆ. ಪಂಪಸೆಟ್, ಮೋಟಾರಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ರೈತರ ಬದುಕು ಬೀದಿಗೆ ಬಂದಿದೆ.
ಈ ಬಾರಿ ಮಳೆ ರೈತರ ನೆಮ್ಮದಿ ಕಸಿದುಕೊಂಡಿದೆ. ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದ ಶೇ 60 ಮೇಲ್ಟಪಟ್ಟು ಬೆಳೆ ಹಾನಿಯಾಗಿದೆ. ಈಗ ಮತ್ತೆ ಮಳೆ ಬಂದು ಮುಂಗಾರು ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಇಷ್ಟೆಲ್ಲ ಹಾನಿಯಾದರೂ ಸರ್ಕಾರ ಮಾತ್ರ ಸರ್ವೆ ಮಾಡುತ್ತೇವೆ. ಪರಿಹಾರ ಕೊಡುತ್ತೇವೆ ಎಂದು ದಿನ ನೂಕುತ್ತಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ ಅಸಮಾಧಾನ ವ್ಯಕ್ತಪಡಿದ್ದಾರೆ. ಇಂತಹ ಕಷ್ಟ ಕಾಲದಲ್ಲಿ ರ‍್ಕಾರ ರೈತರ ನೆರವಿಗೆ ಬಾರದೆ ಇದ್ದರೆ ಶಾಪ ತಟ್ಟುತ್ತದೆ ಎಂದು ಹೇಳಿದ್ದಾರೆ.
ನದಿ ಪಾತ್ರದ ಜನರಿಗೆ ಎಚ್ಚರಿಕೆ:
ಮಾಂಜ್ರಾ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ನದಿ ಪಾತ್ರದ ಜನರು-ಜಾನುವಾರು ಸುರಕ್ಷಿತವಾಗಿ ಇರಬೇಕು. ರೈತರು ನದಿ ಬಳಿ ಹೋಗಬಾರದು. ತಮ್ಮ ಜಾನುವಾರು ನದಿ ಕಡೆ ಹೋಗದಂತೆ ಎಚ್ಚರಿಕೆ ವಹಿಸಬೇಕು. ತಾಲ್ಲೂಕಿನ ಬಹತೇಕ ಹಳ್ಳ, ಕೆರೆಗಳು ತುಂಬಿವೆ. ಈ ವಿಷಯದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು, ಪಿಡಿಒಗಳು ಕೇಂದ್ರ ಸ್ಥಾನದಲ್ಲಿ ಉಳಿದು ಜನರನ್ನು ಜಾಗೃತಗೊಳಿಸಬೇಕು ಎಂದು ತಹಶೀಲ್ದಾರ್ ಮಹೇಶ ಪಾಟೀಲ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.