ಬೀದರ್: ‘ಸೆ.22ರಿಂದ ನಡೆಯಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಮರಾಠ ಸಮಾಜದವರು ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಮರಾಠ, ಉಪಜಾತಿ ಕಾಲಂನಲ್ಲಿ ಕುನಬಿ ಎಂಬುದಾಗಿ ಬರೆಸಬೇಕು’ ಎಂದು ಸಕಲ ಮರಾಠ ಸಮಾಜದ ಅಧ್ಯಕ್ಷ ಪದ್ಮಾಕರ್ ಪಾಟೀಲ ಮನವಿ ಮಾಡಿದರು.
ನಗರದ ನೌಬಾದ್‌ನಲ್ಲಿ ಬುಧವಾರ ನಡೆದ ಮರಾಠ ಸಮುದಾಯದವರ ಸಭೆಯಲ್ಲಿ ಮಾತನಾಡಿದ ಅವರು, ‘ಸಮೀಕ್ಷೆ ನಡೆಸುವವರು ತಮ್ಮ ಮನೆಗಳಿಗೆ ಬಂದಾಗ 60 ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಬೇಕು’ ಎಂದರು.
‘ಸಮಾಜದ ಕಾರ್ಯಕರ್ತರು ಇಡೀ ಜಿಲ್ಲೆಯಲ್ಲಿ ಸಂಚರಿಸಿ, ಜಾಗೃತಿ ಮೂಡಿಸಬೇಕು. ಸಮೀಕ್ಷೆ ಮಾಡುವವರಿಗೆ ಸೂಕ್ತ ದಾಖಲೆ, ಮಾಹಿತಿ ಸಲ್ಲಿಸಬೇಕು. ಸಮೀಕ್ಷೆ ವೇಳೆ ಮನೆಯಲ್ಲಿಯೇ ಇರಬೇಕು. ಹೊರ ದೇಶ, ಹೊರ ರಾಜ್ಯ, ಹೊರ ಜಿಲ್ಲೆಗಳಲ್ಲಿ ಕೆಲಸದಲ್ಲಿರುವ ಸಮಾಜದವರು ಸ್ಥಳೀಯವಾಗಿ ಲಭ್ಯರಿರಬೇಕು’ ಎಂದು ತಿಳಿಸಿದರು.
ಮರಾಠ ಕ್ರಾಂತಿ ಮೋರ್ಚಾ ಸಂಯೋಜಕ ವೆಂಕಟ ಮೆಯಿಂದೆ ಮಾತನಾಡಿ, ‘ರಾಜ್ಯದಲ್ಲಿ ಮರಾಠ ಸಮಾಜದವರ ಜನಸಂಖ್ಯೆ 40 ಲಕ್ಷ ಇದೆ. ರಾಜ್ಯ ಸರ್ಕಾರದ ದಾಖಲೆಯಲ್ಲಿ 16 ಲಕ್ಷ ಇದೆ. ಬೀದರ್ ಜಿಲ್ಲೆಯೊಂದರಲ್ಲೇ 3 ಲಕ್ಷ ಜನಸಂಖ್ಯೆ ಇದೆ. ಸಮುದಾಯದವರ ನಿಜ ಸಂಖ್ಯೆ ಗೊತ್ತಾಗಬೇಕಾದರೆ ಎಲ್ಲರೂ ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.
‘ಸರ್ಕಾರದ ಯೋಜನೆಗಳು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಆಯಾ ಸಮುದಾಯದವರ ಜನಸಂಖ್ಯೆ, ಅವರ ಸ್ಥಿತಿಗತಿ ನೋಡಲಾಗುತ್ತದೆ. ಆ ಕಾರಣದಿಂದ ಈ ಜನಗಣತಿ ಬಹಳ ಮುಖ್ಯವಾದುದು’ ಎಂದರು.
ಜಿಲ್ಲಾ ಕ್ಷೇತ್ರಿಯ ಮರಾಠ ಪರಿಷತ್ ಅಧ್ಯಕ್ಷ ದಿಗಂಬರರಾವ್ ಮಾನಕಾರಿ ಮಾತನಾಡಿ, ‘ಸೆ.19ರಂದು ಔರಾದ್, 20ರಂದು ಭಾಲ್ಕಿ, 21ರಂದು ಬಸವಕಲ್ಯಾಣದಲ್ಲಿ ಸಮಾಜದ ಸಭೆ ಕರೆಯಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.
ಮುಖಂಡರಾದ ಅಶೋಕ ಸೊಂಜೆ, ಅನಿಲ್ ಭೂಸಾರೆ, ಬಾಬುರಾವ್ ಕಾರಬಾರಿ, ಪ್ರಕಾಶ ಪಾಟೀಲ, ನಾರಾಯಣ ಗಣೇಶ, ಜನಾರ್ದನ ಬಿರಾದಾರ, ವಿಜಯಕುಮಾರ ಪಾಟೀಲ ಕಣಜಿಕರ್, ಸತೀಶ ಮುಳೆ, ಅನಿಲ ಶಿಂಧೆ, ದಿನಕರ್ ಮೋರೆ, ರಾಮರಾವ್ ವರವಟ್ಟಿಕರ್, ಕಿಶನರಾವ್ ಪಾಟೀಲ ಇಂಚೂರಕರ್, ತಾತ್ಯಾರಾವ್ ಪಾಟೀಲ, ಅನಿಲ ಕಾಳೆ, ಪಂಚಶೀಲ ಪಾಟೀಲ, ಶಿವಾಜಿರಾವ್ ಪಾಟೀಲ ಮುಂಗನಾಳ, ಡಿ.ಜಿ ಜಗತಾಪ, ಮಾಧವರಾವ್ ಕಾದೆಪುರಕರ್, ಸತೀಶ ವಾಸರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.