ಬೀದರ್: ಮರೀಗೌಡರು ತೋಟಗಾರಿಕೆಯಲ್ಲಿ ಮಾಡಿದ ಸಾಧನೆ ವಿಶಿಷ್ಟ. ಅವರ ಸರಳ ಜೀವನ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ತಿಳಿಸಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ತೋಟಗಾರಿಕೆ ಮಹಾವಿದ್ಯಾಲಯ ಬೀದರ ಹಾಗೂ ತೋಟಗಾರಿಕೆ ಇಲಾಖೆ (ಜಿಲ್ಲಾ ಪಂಚಾಯಿತಿ ಬೀದರ್) ಸಹಯೋಗದಲ್ಲಿ ನಡೆದ ತೋಟಗಾರಿಕೆ ದಿನಾಚರಣೆಯಲ್ಲಿ ಮಾತನಾಡಿದರು.
ರಾಯಚೂರ ಕೃಷಿ ವಿಶ್ವವಿದ್ಯಾಲಯದ ನಿವೃತ ಶಿಕ್ಷಣ ನಿರ್ದೇಶಕ ಎಂ.ಜಿ. ಪಾಟೀಲ ಮಾತನಾಡಿ, ಕರ್ನಾಟಕದಲ್ಲಿ ತೋಟಗಾರಿಕೆ ಕ್ಷೇತ್ರ ಮುಂಚೂಣಿಗೆ ಬರಲು ದಿ. ಎಂ. ಎಚ್. ಮರೀಗೌಡರ ದೂರದೃಷ್ಟಿಯೇ ಮುಖ್ಯ ಕಾರಣ. ವಿದ್ಯಾರ್ಥಿಗಳು ಕೇವಲ ಸರ್ಕಾರಿ ಕೆಲಸಕ್ಕೋಸ್ಕರ ಪದವಿ ಪಡೆಯದೇ ಸ್ವಯಂ ಉದ್ಯಮಿಗಳಾಗಲು ಪದವಿ ಪಡೆಯಬೇಕು ಎಂದರು.
ಬೀದರ್ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಎಸ್.ವಿ. ಪಾಟೀಲ ಮಾತನಾಡಿ, ಕೃಷಿ ಆಹಾರ ಭದ್ರತೆಗಾಗಿದ್ದರೆ ತೋಟಗಾರಿಕೆ ಪೌಷ್ಟಿಕಾಂಶ ಹಾಗೂ ಆರ್ಥಿಕ ಭದ್ರತೆಗಾಗಿದೆ. ತೋಟಗಾರಿಕೆ ಮಹಾವಿದ್ಯಾಲಯ ಬೀದರ್ ಪ್ರತಿ ವರ್ಷ ಸುಮಾರು ₹15 ಲಕ್ಷ ಮೌಲ್ಯದ ತೋಟಗಾರಿಕೆ ಸಸಿಗಳನ್ನು ರೈತರಿಗೆ ತಲುಪಿಸುವ ಮುಖಾಂತರ ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ಬೀದರ ಜಿಲ್ಲಾ ಪಂಚಾಯಿತಿ ತೋಟಗಾರಿಕೆ ಉಪ ನಿರ್ದೇಶಕ ಮಲ್ಲಿಕಾರ್ಜುನ್ ಬಾವುಗೆ ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ಲಭ್ಯವಿರುವ ವಿವಿಧ ಯೋಜನೆಗಳನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಈ ವೇಳೆ ಕಾರ್ಯಕ್ರಮದಲ್ಲಿ ರೈತರಿಗೆ ಉಚಿತವಾಗಿ ಪೌಷ್ಟಿಕ ಕೈತೋಟ ಕಿಟ್ ಹಾಗೂ ಸಂಪದ್ಭರಿತ ಎರೆ ಗೊಬ್ಬರ ನೀಡಲಾಯಿತು. ಈ ಸಂದರ್ಭದಲ್ಲಿ ಕಲಬುರಗಿ ಕೃಷಿ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ. ಸುರೇಶ ಪಾಟೀಲ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.