ಬೀದರ್: ‘ಇಡೀ ದೇಶದಲ್ಲಿ ಬಾಣಂತಿಯರ ಮರಣ ಪ್ರಮಾಣದಲ್ಲಿ ಸಾಕಷ್ಟು ಇಳಿಮುಖಗೊಂಡಿದ್ದು, ಇದನ್ನು ಇನ್ನಷ್ಟು ತಗ್ಗಿಸುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ’ ಎಂದು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘ ಬೀದರ್ ಜಿಲ್ಲಾ ಘಟಕದ ಉಪಾಧ್ಯಕ್ಷೆ ಡಾ. ಲಲಿತಮ್ಮ ತಿಳಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2015ರಲ್ಲಿ ಭಾರತದಲ್ಲಿ ಪ್ರತಿ ಒಂದು ಲಕ್ಷಕ್ಕೆ ಬಾಣಂತಿಯರ ಮರಣ ಪ್ರಮಾಣ ಸರಾಸರಿ 122 ಇತ್ತು. 2024–25ಕ್ಕೆ 88ಕ್ಕೆ ಇಳಿಮುಖಗೊಂಡಿದೆ. ಕರ್ನಾಟಕದಲ್ಲಿ 2015ರಲ್ಲಿ ಮರಣ ಪ್ರಮಾಣ 97 ಇತ್ತು. ಅದೀಗ 57ಕ್ಕೆ ಇಳಿದಿದೆ. ಇದನ್ನು ಸರಾಸರಿ 30ಕ್ಕೆ ತಗ್ಗಿಸುವ ಗುರಿ ಹೊಂದಲಾಗಿದೆ. ಸ್ತ್ರೀ ರೋಗ ತಜ್ಞರಿಗೆ ಹೊಸ ಆವಿಷ್ಕಾರದ ಕುರಿತು ತಿಳಿವಳಿಕೆ ಮೂಡಿಸಲು ಸ್ತ್ರೀರೋಗ ತಜ್ಞರ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಲ್ಯಾಪ್ರೊಸ್ಕೊಪಿ ಸರ್ಜರಿ ಕುರಿತು ಮುಖ್ಯವಾಗಿ ಚರ್ಚೆಗಳಾಗಲಿವೆ. ಇದರಿಂದ ವೈದ್ಯರ ಕೌಶಲ ಹೆಚ್ಚಾಗಲಿದೆ ಎಂದು ಮಾಹಿತಿ ಹಂಚಿಕೊಂಡರು.
ಯಾವ ವೈದ್ಯರು ಕೂಡ ಸಿಸೇರಿಯನ್ ಹೆರಿಗೆಗೆ ಸಲಹೆ ಮಾಡುವುದಿಲ್ಲ. ಸಂದರ್ಭಕ್ಕೆ ಅನುಸಾರವಾಗಿ ವೈದ್ಯರು ತೀರ್ಮಾನ ತೆಗೆದುಕೊಳ್ಳುತ್ತಾರೆ. ತಾಯಿಯ ಜೊತೆಗೆ ಮಗುವಿನ ಆರೋಗ್ಯ ಕೂಡ ಬಹಳ ಮುಖ್ಯವಾದುದು. ಉತ್ತಮ ರೀತಿಯಲ್ಲಿ ಹೆರಿಗೆ ಆಗಿ ಮಗು ಆರೋಗ್ಯದಿಂದ ಹೊರಬರಬೇಕು. ತಡವಾಗಿ ಮದುವೆಯಾಗುವುದು, ಕೆಲಸದ ಒತ್ತಡ, ಬಂಜೆತನದಿಂದ ಗರ್ಭಧಾರಣೆ ಮಾಡುವುದರಿಂದ ವಿವಿಧ ರೀತಿಯ ಅಡ್ಡಪರಿಣಾಮಗಳು ಉಂಟಾಗುತ್ತವೆ. ಇಂತಹ ಸಂದರ್ಭದಲ್ಲಿ ಸಿಸೇರಿಯನ್‌ಗೆ ವೈದ್ಯರು ಸಲಹೆ ಮಾಡುತ್ತಾರೆ ಹೊರತು ಇದರ ಹಿಂದೆ ಬೇರೆ ಉದ್ದೇಶ ಇಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಸಂಘದ ಕಾರ್ಯದರ್ಶಿ ಡಾ. ಸವಿತಾ ಬಡಿಗೇರ ಮಾತನಾಡಿ, ‘ಹೈ ರಿಸ್ಕ್ ಪ್ರೆಗ್ನೆನ್ಸಿ’ ಇರುವ ಮಹಿಳೆಯರ ಸುರಕ್ಷಿತ ಹೆರಿಗೆ ಕುರಿತು ಸಮ್ಮೇಳನದಲ್ಲಿ ತಜ್ಞ ವೈದ್ಯರು ಸಲಹೆ ನೀಡುವರು. ಮಹಾರಾಷ್ಟ್ರ, ಕೇರಳ, ತೆಲಂಗಾಣದ ಪರಿಣತ ವೈದ್ಯರು ಭಾಗವಹಿಸುವರು ಎಂದರು.
ಸಂಘದ ಖಜಾಂಚಿ ಡಾ.ಶಾರದಾ ಗುದಗೆ ಮಾತನಾಡಿ, ಇದು ಉಪಯುಕ್ತವಾದ ಕಾರ್ಯಾಗಾರ. ಜಿಲ್ಲೆಯ ಎಲ್ಲ ಸ್ತ್ರೀ ರೋಗ ತಜ್ಞರು ಇದರಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಸ್ತ್ರೀರೋಗ ತಜ್ಞರ ಸಮ್ಮೇಳನ 23ಕ್ಕೆ
‘ಆಗಸ್ಟ್ 2 ಮತ್ತು 3ರಂದು ಬೀದರ್‌ನ ಬ್ರಿಮ್ಸ್‌ನಲ್ಲಿ ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಉತ್ತರ ವಲಯದ ಕಾರ್ಯಾಗಾರ ಮತ್ತು ಸಮ್ಮೇಳನ–2025 ಹಮ್ಮಿಕೊಳ್ಳಲಾಗಿದೆ’ ಎಂದು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘ ಬೀದರ್ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಡಾ.ಹೇಮಲತಾ ಪಾಟೀಲ ತಿಳಿಸಿದರು.
ಆ. 2ರಂದು ಸಂಜೆ 4ಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ ಉದ್ಘಾಟಿಸುವರು. ಸಚಿವರಾದ ಈಶ್ವರ ಬಿ. ಖಂಡ್ರೆ ರಹೀಂ ಖಾನ್ ಸಂಸದ ಸಾಗರ್ ಖಂಡ್ರೆ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸಂಘದ ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ವಿವರಿಸಿದರು.
‘ಮೊದಲ ಸಲ ಕಲ್ಯಾಣ ಕರ್ನಾಟಕದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಈಗಾಗಲೇ 500ಕ್ಕೂ ಹೆಚ್ಚು ವೈದ್ಯರು ಪಿಜಿ ವೈದ್ಯಕೀಯ ವಿದ್ಯಾರ್ಥಿಗಳು ಹೆಸರು ನೋಂದಣಿ ಮಾಡಿಸಿದ್ದಾರೆ. ಹೆಸರಾಂತ ವೈದ್ಯ ಡಾ. ಜಯಪ್ರಕಾಶ ಪಾಟೀಲ ಅವರು ಲ್ಯಾಪ್ರೋಸ್ಕೊಪಿ ಸರ್ಜರಿ ಕುರಿತ ಉಪನ್ಯಾಸದ ಲೈವ್ ಡೆಮೊ ನಡೆಯಲಿದೆ. ಸುರಕ್ಷಿತ ಹೆರಿಗೆ ಮತ್ತು ಮಗುವಿನ ಆರೈಕೆ ಕುರಿತು ವಿದ್ಯಾರ್ಥಿಗಳಿಗೆ ತಿಳಿವಳಿಕೆ ವೈದ್ಯಕೀಯ ಲೋಕದಲ್ಲಿ ಆಗಿರುವ ಹೊಸ ಆವಿಷ್ಕಾರಗಳ ಕುರಿತು ಚಿಂತನ ಮಂಥನ ನಡೆಯಲಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.