ADVERTISEMENT

ಯೋಗದಿಂದ ಮಾನಸಿಕ ಖಿನ್ನತೆ ದೂರ

ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 11:39 IST
Last Updated 22 ಜೂನ್ 2021, 11:39 IST
ಬೀದರ್‌ನ ಗುರುದ್ವಾರದಲ್ಲಿ ನೆಹರೂ ಯುವ ಕೇಂದ್ರದ ವತಿಯಿಂದ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕ ಗೋರಕನಾಥ ಕುಂಬಾರ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು
ಬೀದರ್‌ನ ಗುರುದ್ವಾರದಲ್ಲಿ ನೆಹರೂ ಯುವ ಕೇಂದ್ರದ ವತಿಯಿಂದ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕ ಗೋರಕನಾಥ ಕುಂಬಾರ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು   

ಬೀದರ್: ನಿಯಮಿತ ಯೋಗದಿಂದ ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಹೊರ ಬರಲು ಸಾಧ್ಯವಿದೆ ಎಂದು ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ ಸಲಹೆ ಮಾಡಿದರು.

ನೆಹರೂ ಯುವ ಕೇಂದ್ರವು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಗುರುದ್ವಾರ ಪ್ರಬಂಧಕ ಕಮಿಟಿ ಸಹಯೋಗದಲ್ಲಿ ಇಲ್ಲಿಯ ಗುರುದ್ವಾರ ಆವರಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯೋಗವು ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸದೃಢಗೊಳಿಸುತ್ತದೆ. ದೇಹಕ್ಕೆ ಕೋವಿಡ್ ಹಾಗೂ ಇತರ ರೋಗಗಳ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ ಎಂದು ತಿಳಿಸಿದರು.

ADVERTISEMENT

ವಿಶ್ವಕ್ಕೆ ಯೋಗ ಕೊಡುಗೆ ನೀಡಿದ ಹಿರಿಮೆ ಭಾರತದ್ದಾಗಿದೆ. ಇಂದು ಅನೇಕ ದೇಶಗಳು ಯೋಗ ಅಳವಡಿಸಿಕೊಂಡಿವೆ. ಆದರೆ, ಭಾರತೀಯರೇ ಯೋಗದಿಂದ ದೂರ ಸರಿಯುತ್ತಿರುವುದು ಕಳವಳಕಾರಿಯಾಗಿದೆ ಎಂದು ನುಡಿದರು.

ಯುವಕರು ಉತ್ತಮ ಆರೋಗ್ಯಕ್ಕೆ ಸಹಕಾರಿಯಾದ ಯೋಗ, ಧ್ಯಾನ ಮೊದಲಾದ ಚಟುವಟಿಕೆಗಳನ್ನು ತಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಭಾರತೀಯ ಪರಂಪರೆಯಲ್ಲಿ ಯೋಗಕ್ಕೆ ಬಹಳ ಮಹತ್ವ ಇದೆ. ಆರೋಗ್ಯಕರ ಜೀವನಕ್ಕಾಗಿ ನಿತ್ಯ ಯೋಗ ಮಾಡಬೇಕು ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಶಿವಕುಮಾರ ಸ್ವಾಮಿ ಹೇಳಿದರು.

ಪತಂಜಲಿ ಯೋಗ ಸಮಿತಿಯ ಯೋಗ ಗುರು ಗೋರಕನಾಥ ಕುಂಬಾರ ಒಂದು ಗಂಟೆ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಯೋಗದ ವಿವಿಧ ಪ್ರಕಾರಗಳನ್ನು ಹೇಳಿಕೊಟ್ಟರು.

ಗುರುನಾನಕ ಐಟಿಐ ಪ್ರಾಚಾರ್ಯ ಗುರುಪ್ರೀತ್‍ಸಿಂಗ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಹಮ್ಮದ್ ಖುದ್ದೂಸ್, ರೈಸಿಂಗ್ ಹ್ಯಾಂಡ್ ಯುತ್ ಆರ್ಗನೈಸೇಷನ್ ಅಧ್ಯಕ್ಷ ಸತೀಶ್ ಬೆಳಕೋಟೆ, ನಮ್ಮ ಬೀದರ್ ಯುವಚೇತನ ಅಭಿವೃದ್ಧಿ ಸಂಘದ ಅಧ್ಯಕ್ಷ ಪ್ರದೀಪ್ ಕಾಂಬಳೆ, ಯುವ ಮುಖಂಡ ಪವನಕುಮಾರ ಲೋಣಿ ಇದ್ದರು. ಕೋವಿಡ್ ಕಾರಣ ಕಾರ್ಯಕ್ರಮದಲ್ಲಿ ಸುರಕ್ಷಿತ ಅಂತರ ಕಾಪಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.