
ಬೀದರ್: ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ದುರ್ಬಲಗೊಳಿಸಿ, ವಿಬಿ ಜಿ ರಾಮ್ ಜಿ ಕಾಯ್ದೆ ರೂಪಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಪೌರಾಡಳಿತ ಮತ್ತು ಹಜ್ ಸಚಿವ ರಹೀಂಖಾನ್ ಹಾಗೂ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಶಿವನಗರದ ಪಕ್ಷದ ಕಚೇರಿಯಿಂದ ಹೊಸ ಬಸ್ ನಿಲ್ದಾಣ, ಗುರುದ್ವಾರ ಕಮಾನ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ಬಳಿಕ ವಿಬಿ ಜಿ ರಾಮ್ ಜಿ ಕಾಯ್ದೆ ರದ್ದುಪಡಿಸುವಂತೆ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅವರಿಗೆ ಸಲ್ಲಿಸಿದರು.
ಈಶ್ವರ ಬಿ. ಖಂಡ್ರೆ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ಮನರೇಗಾ) ಹೆಸರು ಮತ್ತು ಸ್ವರೂಪ ಬದಲಾಯಿಸಿರುವ ಕೇಂದ್ರ ಸರ್ಕಾರ ಬಡವರ ವಿರೋಧಿಯಷ್ಟೇ ಅಲ್ಲ, ಭಾರತದ ಒಕ್ಕೂಟ ವ್ಯವಸ್ಥೆಯ ವಿರೋಧಿಯೂ ಆಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಕೈಗಳಿಗೆ ಉದ್ಯೋಗದ ಭದ್ರತೆ ನೀಡಲು ಯುಪಿಎ ಸರ್ಕಾರ ಆರಂಭಿಸಿದ್ದ ಉದ್ಯೋಗ ಖಾತ್ರಿ ಯೋಜನೆಯ ಮೂಲ ಉದ್ದೇಶವನ್ನೇ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರ್ಕಾರ ಹಾಳು ಮಾಡುತ್ತಿದೆ. ಇದು ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕ್ರಮವಾಗಿದ್ದು, ಸಾಮಾಜಿಕ ನ್ಯಾಯದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಜೀವನವನ್ನೇ ಸಮರ್ಪಿಸಿದ ಮಹಾತ್ಮ ಗಾಂಧಿ ಅವರ ಹೆಸರನ್ನೇ ಯೋಜನೆಯಿಂದ ತೆಗೆದು ಹಾಕಿರುವುದು ಬಾಪೂಜಿಗೆ ಮಾಡಿದ ಅವಮಾನವಾಗಿದೆ. ಅಷ್ಟೇ ಅಲ್ಲದೆ, ಯೋಜನೆಗೆ 60:40 ಅನುಪಾತವನ್ನು ಹೇರಿಕೆ ಮಾಡುವ ಮೂಲಕ ರಾಜ್ಯ ಸರ್ಕಾರಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹಾಕಲಾಗಿದೆ. ಜಿಎಸ್‍ಟಿ ಜಾರಿಯಾದ ಬಳಿಕ ರಾಜ್ಯಗಳಿಗೆ ದೊರಕುವ ತೆರಿಗೆ ಪಾಲು ಕಡಿಮೆಯಾಗಿದೆ. 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ರಾಜ್ಯಕ್ಕೆ ಸಿಗಬೇಕಾದ ಅನುದಾನದಲ್ಲಿಯೂ ಕಡಿತವಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರದ ಈ ನಿರ್ಧಾರ ಒಕ್ಕೂಟ ವ್ಯವಸ್ಥೆಯ ಮೇಲೆ ನೇರ ದಾಳಿ ಎಂದು ಖಂಡಿಸಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಹಣಮಂತರಾವ್ ಚವಾಣ್, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪುಂಡಲೀಕರಾವ್, ನಗರಸಭೆ ಮಾಜಿ ಸದಸ್ಯ ಧನರಾಜ ಹಂಗರಗಿ, ಕೆಪಿಸಿಸಿ ಉಪಾಧ್ಯಕ್ಷ ಜಾನ್ ವೆಸ್ಲಿ, ಪ್ರಧಾನ ಕಾರ್ಯದರ್ಶಿಗಳಾದ ಶಂಕರ ದೊಡ್ಡಿ, ಸಂಜಯ್ ಜಾಗೀರದಾರ್, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎ. ಸಮಿ, ದತ್ತಾತ್ರಿ ಮೂಲಗೆ, ಜಾರ್ಜ್ ಫರ್ನಾಂಡೀಸ್, ವಿನೋದಕುಮಾರ ಅಪ್ಪೆ, ಕಾರ್ಯದರ್ಶಿಗಳಾದ ಸುನೀಲ್ ಬಚ್ಚನ್, ರವೀಂದ್ರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಫರೀದ್‍ಖಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುಹಮ್ಮದ್ ಯುಸೂಫ್, ಚಂದ್ರಶೇಖರ ಚನಶೆಟ್ಟಿ, ನೀಲಕಂಠ ರಾಠೋಡ್, ರಾಜಕುಮಾರ ಹಲಬರ್ಗೆ, ಆನಂದ್ ಚವಾಣ್, ಮುಂಚೂಣಿ ಘಟಕಗಳ ಅಧ್ಯಕ್ಷರಾದ ಸಂಜುಕುಮಾರ ಡಿ.ಕೆ, ರಾಕೇಶ ಕುರುಬಖೇಳಗಿ, ಚಂದ್ರಕಾಂತ ಪಾಟೀಲ, ಪೂಜಾ ಜಾರ್ಜ್, ರಾಜಕುಮಾರ ಲದ್ದೆ, ಗೋವರ್ಧನ್ ರಾಠೋಡ್ ಮತ್ತಿತರರು ಪಾಲ್ಗೊಂಡಿದ್ದರು.
ಮನರೇಗಾ ಯೋಜನೆಯ ಹೆಸರು ತೆಗೆದು ಹಾಕುವುದರ ಜತೆಗೆ ಬಡವರ ಜೀವನೋಪಾಯದ ಮೇಲೂ ಹೊಡೆಯುವ ಈ ಕ್ರಮ ಅತಿರೇಕದ ಪರಮಾವಧಿಯಾಗಿದೆ. ಗ್ರಾಮೀಣ ಜನರ ಹಕ್ಕುಗಳನ್ನು ಕಾಪಾಡಲು ಮತ್ತು ಮನರೇಗಾ ಯೋಜನೆ ಮರುಸ್ಥಾಪಿಸಲು ಕಾಂಗ್ರೆಸ್ ಪಕ್ಷದ ಹೋರಾಟ ಮುಂದುವರೆಯಲಿದೆ.ಈಶ್ವರ ಬಿ. ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ
ಕೋವಿಡ್ ಸಮಯದಲ್ಲಿ ಖಾತ್ರಿ ಯೋಜನೆ ಗ್ರಾಮೀಣ ಜನರು ಹಾಗೂ ವಲಸೆ ಕಾರ್ಮಿಕರ ಬದುಕಿಗೆ ಆಸರೆಯಾಗಿತ್ತು . ಅದನ್ನು ದುರ್ಬಲಗೊಳಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮ ಖಂಡನಾರ್ಹ. ಇದರ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಲಿದೆ.ರಹೀಂ ಖಾನ್ ಪೌರಾಡಳಿತ ಹಾಗೂ ಹಜ್ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.