ADVERTISEMENT

ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಬಿಯರ್ ಬಾಕ್ಸ್ ಕಂಡು ದಂಗಾದ ಸಚಿವ!

ಚವಾಣ್ ಅನಿರೀಕ್ಷಿತ ಭೇಟಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 17:08 IST
Last Updated 12 ನವೆಂಬರ್ 2019, 17:08 IST
ಬೀದರ್ ತಾಲ್ಲೂಕಿನ ಕಮಠಾಣ ಬಳಿಯ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಮಂಗಳವಾರ ಭೇಟಿ ನೀಡಿದ ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ಅವರು ಕೊಠಡಿಯೊಂದರಲ್ಲಿ ಕಂಡು ಬಂದ ಖಾಲಿ ಬೀಯರ್ ಬಾಕ್ಸ್ ವೀಕ್ಷಿಸಿದರು
ಬೀದರ್ ತಾಲ್ಲೂಕಿನ ಕಮಠಾಣ ಬಳಿಯ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ಮಂಗಳವಾರ ಭೇಟಿ ನೀಡಿದ ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ಅವರು ಕೊಠಡಿಯೊಂದರಲ್ಲಿ ಕಂಡು ಬಂದ ಖಾಲಿ ಬೀಯರ್ ಬಾಕ್ಸ್ ವೀಕ್ಷಿಸಿದರು   

ಜನವಾಡ: ಬೀದರ್ ತಾಲ್ಲೂಕಿನ ಕಮಠಾಣ ಬಳಿ ಇರುವ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಬಿಯರ್ ಬಾಕ್ಸ್ ಕಂಡು ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ದಂಗಾದರು!

ಚವಾಣ್ ಅವರು ಮಂಗಳವಾರ ವಿಶ್ವವಿದ್ಯಾಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿದಾಗ ಕೊಠಡಿಯೊಂದರಲ್ಲಿ ಕಿಂಗ್ ಫಿಶರ್ ಬಿಯರ್ ಬಾಕ್ಸ್ ಕಂಡು ಬಂದಿತು. ಸಚಿವರು ಅದನ್ನು ತೆಗೆದು ನೋಡಿದಾಗ ಖಾಲಿ ಆಗಿತ್ತು. ಆದರೆ, ಬೀಯರ್ ಖಾಲಿ ಬಾಕ್ಸ್ ವಿಶ್ವವಿದ್ಯಾಲಯದಲ್ಲಿ ಹೇಗೆ ಬಂದಿತು ಎಂದು ಸಚಿವರು ಪ್ರಶ್ನಿಸಿದರು.

ವಿದ್ಯಾರ್ಥಿಗಳಿಗೆ ಪಾಠ ಮಾಡ್ತೀರಾ ಅಥವಾ ಪಾರ್ಟಿ ಮಾಡ್ತೀರಾ ಎಂದು ಸಿಬ್ಬಂದಿಯನ್ನು ಪ್ರಶ್ನಿಸಿದರು. ವಿಶ್ವವಿದ್ಯಾಲಯದ ಆವರಣದಲ್ಲಿ ಹುಲ್ಲು, ಮುಳ್ಳುಕಂಟಿ ಬೆಳೆದಿದ್ದನ್ನು ಕಂಡು ಗರಂ ಆದರು. ಕುಲಪತಿಯವರಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ನಿಯಂತ್ರಣ ಇಲ್ಲ ಎಂದು ಅವರ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ ಗುಣಮಟ್ಟದ ಊಟ ಕೊಡುತ್ತಿಲ್ಲ. ಕುಡಿಯುವ ನೀರು ಚೆನ್ನಾಗಿಲ್ಲ. ಸೊಳ್ಳೆಗಳ ಕಾಟ ಹೆಚ್ಚಾಗಿದೆ ಎಂದು ವಸತಿ ನಿಲಯದ ವಿದ್ಯಾರ್ಥಿಗಳು ಸಚಿವರ ಗಮನ ಸೆಳೆದರು.

ಇದಕ್ಕೆ ಸ್ಪಂದಿಸಿದ ಅವರು ವಾರದೊಳಗೆ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಕುಲಪತಿಗೆ ಸೂಚನೆ ನೀಡಿದರು.ಪಶು ವೈದ್ಯಕೀಯ ಚಿಕಿತ್ಸಾ ಸಂಕೀರ್ಣಕ್ಕೆ ಭೇಟಿ ಕೊಟ್ಟು ಪಶುಗಳಿಗೆ ಚಿಕಿತ್ಸೆ ನೀಡುತ್ತಿದ್ದದ್ದನ್ನು ವೀಕ್ಷಿಸಿದರು. ರಿಜಿಸ್ಟ್ರಾರ್ ಕಚೇರಿಯ ಹಾಜರಾತಿ ಪರಿಶೀಲಿಸಿದರು. ಬಯೊಮೆಟ್ರಿಕ್ ಹಾಜರಾತಿ ಏಕಿಲ್ಲ ಎಂದು ಪ್ರಶ್ನಿಸಿದರು. ವಿವಿಗೆ ಸಂಬಂಧಿಸಿದಂತೆ ಬಂದಿರುವ ಆರ್‌ಟಿಐ ಅರ್ಜಿಗಳನ್ನು ಪರಿಶೀಲಿಸಿ, ದೂರುಗಳು ಬಹಳ ಬರುತ್ತಿವೆ. ಈ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.

ವಿಶ್ವವಿದ್ಯಾಲಯದಲ್ಲಿ ಎಲ್ಲವೂ ಪಾರದರ್ಶಕವಾಗಿ ನಡೆಯಬೇಕು. ವಿವಿಯ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಸಿಬ್ಬಂದಿ ನೇಮಕಾತಿ ಸರಿಯಾಗಿ ನಡೆದಿಲ್ಲ ಎನ್ನುವ ಆರೋಪ ಇದೆ. ವಿ.ವಿ ಆವರಣದಲ್ಲಿ ದೂರು ಪೆಟ್ಟಿಗೆ ಇಡಬೇಕು. ಪೆಟ್ಟಿಗೆಗೆ ಹಾಕುವ ದೂರನ್ನು ಖುದ್ದು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ವಿವಿ ಭೋಜನಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಊಟ ಮಾಡಿದರು. ಒಂದೇ ತರಕಾರಿ ಇದೆಯಾ, ದಾಲ್, ರೈಸ್ ಇಲ್ವಾ ಎಂದು ಪ್ರಶ್ನಿಸಿದರು. ಅದಕ್ಕೆ ಅಧಿಕಾರಿಗಳು ಅನ್ನ, ಸಾಂಬಾರು ಇದೆ ಸರ್ ಎಂದು ಉತ್ತರಿಸಿದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.