
ಭಾಲ್ಕಿ : ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ಪುಷ್ಪಾಲಂಕೃತ ರಥದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನೂತನ ರಾಷ್ಟ್ರೀಯ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಹಾಗೂ ಅಮೆರಿಕದ ಏಷ್ಯಾ ಇಂಟರ್ ನ್ಯಾಷನಲ್ ಕಲ್ಚರಲ್ ರಿಸರ್ಚ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕೃತ ಹಾವಗಿಲಿಂಗೇಶ್ವರ ಶಿವಾಚಾರ್ಯರ ಭವ್ಯ ಮೆರವಣಿಗೆ ನಡೆಸಲಾಯಿತು.
ಗ್ರಾಮದ ಮುಖ್ಯ ರಸ್ತೆಯಿಂದ ಆರಂಭಗೊಂಡ ಮೆರವಣಿಗೆಯು ಪ್ರಮುಖ ಬೀದಿಗಳ ಮೂಲಕ ಹಾಯ್ದು ರಾಚೋಟೇಶ್ವರ ಸಂಸ್ಥಾನ ಮಠಕ್ಕೆ ತಲುಪಿ ಸಮಾರೋಪಗೊಂಡಿತು. ಬ್ಯಾಂಡ್ ಬಾಜಾ, ಜಯ ಘೋಷಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.
ಇದಕ್ಕೂ ಮುನ್ನ ಗ್ರಾಮದ ಪ್ರವೇಶದ ದ್ವಾರದಲ್ಲಿ ಜೆಸಿಬಿ ಮೂಲಕ ಪುಷ್ಪ ವೃಷ್ಟಿ ಮಾಡಲಾಯಿತು. ಕಿವಿ ಗಡಚಿಕ್ಕುವಂತೆ ಪಟಾಕಿ ಸಿಡಿಸಲಾಯಿತು. ನಂತರ ಮಠದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಯುಕ್ತ ಈಶ್ವರ ಖಂಡ್ರೆ ಅವರನ್ನು ಹಾಗೂ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರನ್ನು ಸನ್ಮಾನಿಸಲಾಯಿತು.
‘ವೀರಶೈವ ಲಿಂಗಾಯತ ಸಮಾಜದವರು ನನ್ನ ಮೇಲೆ ವಿಶ್ವಾಸ ಇಟ್ಟು, ಮಹಾಸಭೆ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ’ ಎಂದು ಈಶ್ವರ ಖಂಡ್ರೆ ಹೇಳಿದರು. ಶತಮಾನದ ಹಿಂದೆ ಹಾನಗಲ್ ಕುಮಾರ ಶಿವಯೋಗಿಗಳು ಸ್ಥಾಪಿಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಈಶ್ವರ ಖಂಡ್ರೆ ಅವರು ಆಯ್ಕೆಯಾಗಿರುವುದು ರಾಜ್ಯದ ಜನರಿಗೆ ಸಂತಸ ಉಂಟು ಮಾಡಿದೆ ಎಂದು ಹಾವಗಿಲಿಂಗೇಶ್ವರ ಶಿವಾಚಾರ್ಯರು ಹೇಳಿದರು. ಹಲಬರ್ಗಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.