
ಬಸವಕಲ್ಯಾಣ: ‘ಬಸವಣ್ಣನವರ ನೇತೃತ್ವದಲ್ಲಿ ಜರುಗಿದ ಕಲ್ಯಾಣಕ್ರಾಂತಿಯು ವಿಶ್ವದ ಶಾಂತಿಗಾಗಿ ಸಂದೇಶ ನೀಡುವಂಥದ್ದು. ಸರ್ವ ಸಮಾನತೆ, ಸೌಹಾರ್ದ ನೆಲೆಸುವುದಕ್ಕೆ ಪ್ರೇರಣಾದಾಯಕವಾಗಿದೆ’ ಎಂದು ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ನಗರದಲ್ಲಿ ಬಸವೇಶ್ವರ ದೇವಸ್ಥಾನದ ಮಹಾದ್ವಾರ ಮತ್ತು ನವೀಕರಣಗೊಂಡಿರುವ ಕಟ್ಟಡದ ಉದ್ಘಾಟನೆ ಹಾಗೂ ಶಿವರಾತ್ರಿಯ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಸವಾದಿ ಶರಣರು ಸಕಲ ಜೀವಾತ್ಮರಿಗೆ ಲೇಸು ಬಯಸಿದರು. ಮೂಢನಂಬಿಕೆ ಮತ್ತು ಕಂದಾಚಾರವನ್ನು ವಿರೋಧಿಸಿದರು. ಅವರ ಸ್ಮಾರಕವಾದ ಬಸವೇಶ್ವರ ದೇವಸ್ಥಾನದ ನವೀಕರಣ ಕಾರ್ಯ ಕೈಗೊಂಡು ಇದನ್ನು ಭವ್ಯ ಮತ್ತು ದಿವ್ಯ ಆಗುವಂತೆ ಶ್ರಮಿಸಿರುವ ದೇವಸ್ಥಾನ ಸಮಿತಿಯವರ ಪ್ರಯತ್ನ ಶ್ಲಾಘನೀಯವಾದದ್ದು’ ಎಂದರು.
‘ಸರ್ಕಾರದಿಂದ ₹ 700 ಕೋಟಿ ವೆಚ್ಚದಲ್ಲಿ ನಗರದಲ್ಲಿ ಕಟ್ಟುತ್ತಿರುವ ಅನುಭವ ಮಂಟಪದ ಕೆಲಸ ಶೇ 70ರಷ್ಟು ಪೂರ್ಣಗೊಂಡಿದ್ದು ಮುಂದಿನ ವರ್ಷ ಇದರ ಉದ್ಘಾಟನೆ ಆಗಲಿದೆ. ಆಗ ಈ ಸ್ಥಳ ಅಂತರರಾಷ್ಟ್ರೀಯ ಆಧ್ಯಾತ್ಮಿಕ ಕೇಂದ್ರವಾಗಿ ಕಂಗೊಳಿಸುವುದರಲ್ಲಿ ಸಂಶಯವಿಲ್ಲ’ ಎಂದರು.
ಹಾರಕೂಡ ಚನ್ನವೀರ ಶಿವಾಚಾರ್ಯರು ಮಾತನಾಡಿ, ‘ಶರಣರು ನುಡಿದಿರುವುದೇ ತತ್ವ ಮತ್ತು ಅವರು ಜಾಗೃತಾವಸ್ಥೆಯಲ್ಲಿ ಇದ್ದಿರುವುದೇ ಶಿವರಾತ್ರಿ ಎಂದು ವಚನಗಳಲ್ಲಿ ಉಲ್ಲೇಖಿತವಾಗಿದೆ. ದೇವಸ್ಥಾನದ ಹೊಸ ಕಟ್ಟಡ ಬರೀ ಆಕರ್ಷಕ ತಾಣವಾಗಿರದೆ ವಚನ ಸಾಹಿತ್ಯದ ದಿವ್ಯ ಸಂದೇಶ ಸಾರುವ ಕೇಂದ್ರವಾಗಿ ಕಾರ್ಯಗೈಯಲಿದೆ’ ಎಂದರು.
ಹುಲಸೂರ ಶಿವಾನಂದ ಸ್ವಾಮೀಜಿ, ದೇವಸ್ಥಾನ ಸಮಿತಿ ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರುದ್ರಮಣಿ ಮಠಪತಿ ಮಾತನಾಡಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಕೋರಕೆ, ದೇವಸ್ಥಾನ ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಸಾಯಗಾಂವ ಶಿವಾನಂದ ದೇವರು, ಪ್ರಭುದೇವ ಸ್ವಾಮೀಜಿ, ಶಿವಲಿಂಗೇಶ್ವರ ಸ್ವಾಮೀಜಿ, ಮಲ್ಲಿಕಾರ್ಜುನ ಗುಂಗೆ ಉಪಸ್ಥಿತರಿದ್ದರು. ಬಳಿಕ ಸಾಮೂಹಿಕ ಇಷ್ಟಲಿಂಗ ಪೂಜೆ ಹಮ್ಮಿಕೊಳ್ಳಲಾಗಿತ್ತು.
ದೇವಸ್ಥಾನ ಸಮಿತಿಯ ಎಲ್ಲರ ಸಹಕಾರ ಮತ್ತು ಪ್ರಯತ್ನದಿಂದಾಗಿಯೇ ಮಂಟಪದ ನವೀಕರಣ ಹಾಗೂ ಶಿಲೆಯ ಮಹಾದ್ವಾರ ನಿರ್ಮಾಣಕಾರ್ಯ ಉತ್ತಮವಾಗಿ ನೆರವೇರಿದೆವಿವೇಕಾನಂದ ಹೊದಲೂರೆ ದೇವಸ್ಥಾನ ಸಮಿತಿ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.