ADVERTISEMENT

ಕಂಬನಿ ತುಂಬಿದ ಕಣ್ಣು, ತಂದೆಯ ಕಾರ್ಯ ಸ್ಮರಿಸಿದ ಸಚಿವ ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 6:34 IST
Last Updated 17 ಜನವರಿ 2026, 6:34 IST
   

ಭಾಲ್ಕಿ (ಬೀದರ್ ಜಿಲ್ಲೆ): ಬಡವ, ಬಲ್ಲಿದ, ಬಡವ, ಶ್ರೀಮಂತ ಎಲ್ಲರೂ ಸಮಾನರು, ಮೇಲ್ಜಾತಿ, ಕೀಳು ಜಾತಿ ಎಂಬ ಭಾವನೆಯೇ ತಪ್ಪು ಎಂದು ಪ್ರತಿಪಾದಿಸುತ್ತಿದ್ದ ತಮ್ಮ ತಂದೆ ಲಿಂಗೈಕ್ಯ ಭೀಮಣ್ಣ ಖಂಡ್ರೆ 60ರ ದಶಕದಲ್ಲೇ ಅಸೃಶ್ಯತೆ ವಿರುದ್ಧ ಹೋರಾಟ ಮಾಡಿದ್ದರು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸ್ಮರಿಸಿದರು.

ತಮ್ಮ ತಂದೆ ಭೀಮಣ್ಣ ಖಂಡ್ರೆ ಅವರ ಪಾರ್ಥವ ಶರೀರಕ್ಕೆ ಪೂಜೆ ಸಲ್ಲಿಸಿದ ತರುವಾಯ ಮಾತನಾಡಿದ ಅವರು, ಬಸವಾದಿ ಶರಣರ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ತಾವು ಜೀವಿಸಿದ್ದ ನೂರ್ಕಾಲವೂ ಕಾಯಕಯೋಗಿಯಾಗಿ, ಕರ್ಮಯೋಗಿಯಾಗಿ ಜನರಿಗಾಗಿ, ಜನರಿಗೋಸ್ಕರ ಬದುಕಿದವರು ತಮ್ಮ ತಂದೆ ಎಂದರು.

ಮುಟ್ಟಿ-ತಟ್ಟಿ ಎಂಬ ಅನಿಷ್ಠ ಅಸ್ಪೃಶ್ಯತೆಯ ವಿರುದ್ಧ ಸಿಡಿದೆದ್ದು ತಮ್ಮ ಸಮುದಾಯದ ಹಿರಿಯರನ್ನು ಸಮಾಜವನ್ನೇ ಎದುರುಹಾಕಿಕೊಂಡು ಹೋರಾಟ ಮಾಡಿದ ತಮ್ಮ ತಂದೆ, ತಮ್ಮ ದೀಕ್ಷಾ ಗುರು ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ ಮನವೊಲಿಸಿ ಅಶೋಕ ನಗರದ ನಿವಾಸಿಗಳನ್ನು ಭಾಲ್ಕಿ ಮಠಕ್ಕೆ ಕರೆತಂದು ಸ್ನಾನ ಮತ್ತು ವಿಭೂತಿ ಧಾರಣೆ ಮಾಡಿಸಿ, ಭಾಲ್ಕೇಶ್ವರ ದೇವಾಲಯದ ಸಿಹಿನೀರ ಬಾವಿಯಿಂದ ನೀರು ಕುಡಿಸುವ ಮೂಲಕ ಕ್ರಾಂತಿಯನ್ನೇ ಮಾಡಿದ್ದರು ಎಂದು ನೆನಪಿಸಿಕೊಂಡರು.

ADVERTISEMENT

102 ವರ್ಷಗಳ ಸಾರ್ಥಕ ಜೀವನ ನಡೆಸಿದ್ದ ಭೀಮಣ್ಣ ಖಂಡ್ರೆ ಅವರು ಅಜಾತಶತ್ರುವಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಹೈದರಾಬಾದ್ ಕರ್ನಾಟಕದ ವಿಮೋಚನೆಗಾಗಿ, ಏಕೀಕರಣಕ್ಕಾಗಿ ಹೋರಾಡಿದ್ದ ಅವರು, ಶಾಸಕರಾಗಿ, ಸಚಿವರಾಗಿ, ವಿಧಾನಪರಿಷತ್ ಸದಸ್ಯರಾಗಿ, ಸಭಾನಾಯಕರಾಗಿ ಬೀದರ್ ಜಿಲ್ಲೆಯ ಸಮಗ್ರ ಪ್ರಗತಿಗೆ ಶ್ರಮಿಸಿದ್ದರು.

ನಿಷ್ಠುರವಾದಿಗಳಾಗಿದ್ದ ಅವರು ಅನ್ಯಾಯ ಕಂಡರೆ ತಮ್ಮವರು, ಅನ್ಯರು ಎಂಬ ಭೇದವಿಲ್ಲದೆ ಪ್ರತಿಭಟಿಸುತ್ತಿದ್ದರು, ಅಸಹಾಯಕರಿಗೆ ನ್ಯಾಯ ಕೊಡಿಸುತ್ತಿದ್ದರು ಎಂದರು.

ರೈತರಿಗೆ ಬೆಳೆ ನಷ್ಟವಾದಾಗ, ಬೆಂಕಿ ಮಳೆಯಿಂದ ನಷ್ಟ ಸಂಭವಿಸಿದಾಗ ಸರ್ಕಾರದ ವಿರುದ್ಧವೇ ಹೋರಾಟ ಮಾಡಿ ಪರಿಹಾರ ಕೊಡಿಸಿದ್ದರು. ಶರಣರ ಬಗ್ಗೆ ಅವಮಾನಕರ ರೀತಿಯಲ್ಲಿ ಮತ್ತು ಸಮಾಜದ ಜನರ ಭಾವನೆಗೆ ಧಕ್ಕೆ ಬರುವಂತೆ ಕೆಲವು ಕೃತಿಗಳಲ್ಲಿ ತಿರುಚಿ ಬರೆದಾಗ ಅದರ ವಿರುದ್ಧ ಹೋರಾಟ ಮಾಡಿ ಕೃತಿಯನ್ನೇ ಮುಟ್ಟುಗೋಲು ಹಾಕಿಸಿದ್ದರು. ಹಾವನೂರು ಆಯೋಗದ ವರದಿಯ ವಿರುದ್ಧ ಸದನದ ಒಳಗೆ ಹೊರಗೆ ಹೋರಾಟ ಮಾಡಿದ್ದರು. ಅವರ ಬದ್ಧತೆ, ನ್ಯಾಯಪರತೆ, ಬಡಜನರ ಪರ ಕಾಳಜಿ ಎಲ್ಲರಿಗೂ ಆದರ್ಶ ಎಂದರು.

ಜಿಲ್ಲೆಯಲ್ಲಿ ಕಾರ್ಯಗತವಾಗಿರುವ ನೀರಾವರಿ ಯೋಜನೆಗಳೇ ಇರಲಿ, ಮೂಲಭೂತಸೌಕರ್ಯ ಯೋಜನೆಗಳೇ ಇರಲಿ ಅದರಲ್ಲಿ ತಮ್ಮ ತಂದೆಯವರ ಶ್ರಮ ಇದೆ. ಹೀಗಾಗಿಯೇ ತಮ್ಮ ತಂದೆಗೆ ಲೋಕನಾಯಕ ಎಂಬ ಬಿರುದನ್ನು ಚನ್ನಬಸವ ಪಟ್ಟದ್ದೇವರು ನೀಡಿದ್ದರು ಎಂದರು.

ಛಲವಾದಿ ಭೀಮಣ್ಣ-ಗುರುಬಸವ ಪಟ್ಟದ್ದೇವರು ಬಣ್ಣನೆ:

ಭೀಮಣ್ಣ ಖಂಡ್ರೆ ಅವರು ಛಲವಾದಿಗಳಾಗಿದ್ದರು. ಛಲಬೇಕು ಶರಣಂಗೆ ಎಂಬುದಕ್ಕೆ ಅನ್ವರ್ಥವಾಗಿದ್ದರು. ಅವರು ಗುಡುಗಿದರೆ ವಿಧಾನಸೌಧವೇ ನಡುಗುತ್ತಿತ್ತು. ಅನ್ಯಾಯದ ವಿರುದ್ಧ ಅವರು ಸದಾ ಸಿಡಿದು ನಿಂತು ನೊಂದವರಿಗೆ ನ್ಯಾಯಕೊಡಿಸುತ್ತಿದ್ದರು ಎಂದರು.

ಚನ್ನಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಭೀಮಣ್ಣ ಖಂಡ್ರೆ ಅವರ ಕೊಡುಗೆ ಅಪಾರವಾಗಿದೆ. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ, ಹಿಂದುಳಿದ ಬೀದರ್ ಭಾಗದ ಯುವಜನರು ಎಂಜಿನಿಯರಿಂಗ್ ಶಿಕ್ಷಣ ದೊರಕಿಸುವಲ್ಲಿ ಅವರ ಶ್ರಮ ಅಪರಿಮಿತವಾದ್ದು ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಕ್ಕೆ ಸ್ವಂತ ಕಚೇರಿಯೂ ಇರಲಿಲ್ಲ. ಬೆಂಗಳೂರು ನಗರದ ಹೃದಯ ಭಾಗದಲ್ಲಿ ಭೂಮಿ ಖರೀದಿಸಿ, ಭವ್ಯ ಕಟ್ಟಡ ನಿರ್ಮಿಸಿ, ಸಮಾಜ ಸಂಘಟಿಸಿ ಗಟ್ಟಿಗೊಳಿಸಿದ ಕೀರ್ತಿಯೂ ಭೀಮಣ್ಣ ಖಂಡ್ರೆ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಪಾರ್ಥೀವ ಶರೀರದ ಮೆರವಣಿಗೆಯ ಮಾರ್ಗ ಹೀಗಿದೆ...

ಶುಕ್ರವಾರ ರಾತ್ರಿ ನಿಧನರಾದ ಮಾಜಿಸಚಿವ ಭೀಮಣ್ಣ ಖಂಡ್ರೆ ಅವರ ಪಾರ್ಥೀವ ಶರೀರವನ್ನು ಶನಿವಾರ ಮಧ್ಯಾಹ್ನದ ವರೆಗೆ ಅವರ ನಿವಾಸದ ಬಳಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು.

ಆನಂತರ ಮಧ್ಯಾಹ್ನ 3ಕ್ಕೆ ಹೂವಿನಿಂದ ಅಲಂಕೃತ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದೆ. ಖಂಡ್ರೆ ಗಲ್ಲಿ, ಬಸವೇಶ್ವರ ವೃತ್ತ, ಮಹಾತ್ಮ ಗಾಂಧಿ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌, ಬಸ್‌ ನಿಲ್ದಾಣ, ಬೊಮ್ಮಗೊಂಡೇಶ್ವರ ವೃತ್ತ, ಹುಮನಾಬಾದ್ ರಸ್ತೆ, ಬಿಕೆಐಟಿ ಮಾರ್ಗವಾಗಿ ಚಿಕ್ಕಲಚಂದಾ ರಸ್ತೆ ಸಮೀಪದ ತೋಟದ ಮನೆಯಲ್ಲಿರುವ ಶಾಂತಿಧಾಮದ ವರೆಗೆ ಮೆರವಣಿಗೆ ನಡೆಯಲಿದೆ.

ಅಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸಂಜೆ 5ಕ್ಕೆ ವೀರಶೈವ ಲಿಂಗಾಯತ ಧರ್ಮದ ವಿಧಿ ವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಭೀಮಣ್ಣ ಖಂಡ್ರೆಯವರ ಪುತ್ರ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.