ADVERTISEMENT

ಬ್ರೋಕರ್‌ ಕಂಡು ಬಂದರೆ ಕಚೇರಿಗೆ ಬೀಗ: ಎಚ್ಚರಿಕೆ

ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಗೆ ಸಚಿವ ದಿಢೀರ್ ಭೇಟಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 15:46 IST
Last Updated 31 ಡಿಸೆಂಬರ್ 2019, 15:46 IST
ಬೀದರ್‌ನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು
ಬೀದರ್‌ನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು   

ಬೀದರ್‌: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಮಂಗಳವಾರ ಇಲ್ಲಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಹಾಗೂ ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು.

ಸಚಿವರು ಆರ್‌ಟಿಒ ಕಚೇರಿ ಪ್ರವೇಶಿಸುತ್ತಿದ್ದಂತೆ ಬ್ರೋಕರ್‌ ಒಬ್ಬರು ಹೊರಗೆ ಓಡಿ ಹೋದರು. ಸಚಿವರು ಆರ್‌ಟಿಒ ಕಚೇರಿಯ ವಿವಿಧ ವಿಭಾಗಗಳಿಗೆ ತೆರಳಿ ಸಿಬ್ಬಂದಿ ನಿರ್ವಹಿಸುತ್ತಿದ್ದ ನೋಂದಣಿ ಬುಕ್‌ಗಳನ್ನು ಪರಿಶೀಲಿಸಿದರು. ಸರಿಯಾಗಿ ದಾಖಲೆಗಳನ್ನು ಇಟ್ಟುಕೊಳ್ಳದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು, ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.

‘ಪ್ರಾದೇಶಿಕ ಸಾರಿಗೆ ಇಲಾಖೆಯ ಸಿಬ್ಬಂದಿ ಬಗ್ಗೆ ಅನೇಕ ದೂರುಗಳು ಬಂದಿದ್ದವು. ಹೀಗಾಗಿ ಇಲ್ಲಿ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ್ದೇನೆ’ ಎಂದರು.

ADVERTISEMENT

‘ಆರ್‌ಟಿಇ ಕಚೇರಿ ಅಂದರೆ ಬ್ರೋಕರ್ ಮಾಫಿಯಾ ಎನ್ನುವ ಕೆಟ್ಟ ಹೆಸರು ಇದೆ. ಇನ್ನು ಮುಂದೆ ಈ ಕಚೇರಿಯಲ್ಲಿ ಬ್ರೋಕರ್‌ಗಳು ಕಂಡು ಬಂದಲ್ಲಿ ಖುದ್ದು ಕಚೇರಿಯನ್ನು ಬಂದ್ ಮಾಡಿಸುತ್ತೇನೆ’ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

‘ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ಲಭ್ಯವಾಗುವಂತೆ ಮಾಹಿತಿ ಫಲಕ ಅಳವಡಿಸಬೇಕು. ಕಚೇರಿ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಆರ್‌ಟಿಒ ಕಚೇರಿಯಲ್ಲಿ ಅಳವಡಿಸಿರುವ ಸಿಸಿಟಿವಿಯ ದೃಶ್ಯಾವಳಿಗಳನ್ನು ಕಳುಹಿಸಿಕೊಡಬೇಕು’ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ಆರ್‌ಟಿಒ ಕಚೇರಿಯಲ್ಲಿ ಮಧ್ಯಸ್ಥಿಕೆದಾರರಿಗೆ ಅವಕಾಶವಿಲ್ಲ ಎನ್ನುವ ಬೋರ್ಡ್ ಹಾಕಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅನಿಲ ಬಿರಾದಾರ, ಸಾರಿಗೆ ಇಲಾಖೆಯ ಇನ್‌ಸ್ಪೆಕ್ಟರ್‌ ರಘು, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಗೌತಮ ಅರಳಿ, ಶಿವಕುಮಾರ ಕಟ್ಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.