ಕಮಲನಗರ : ತಾಲ್ಲೂಕಿನ ಗಂಗನಬೀಡ ಗ್ರಾಮದ ಎಂಎ ಪದವೀಧರ ಅಂಕುಶ ವಾಡೇಕರ್ ಎಂಬ ರೈತ 1.20 ಎಕರೆ ಜಮೀನಲ್ಲಿ ಹಸಿ ಮೆಣಸಿಕಾಯಿ ಬೆಳೆದು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾನೆ.
ಕಮಲನಗರ ತೊಟಗಾರಿಕೆ ಕೃಷಿಯಲ್ಲಿ ಸಾಧನೆ ಮಾಡುತ್ತಿರುವ ರೈತ ಅಂಕುರ 930 ತಳಿಯ ಮಹಾರಾಷ್ಟ್ರದ ಕರಡಖೇಲನ ನರ್ಸರಿಯಿಂದ ₹1 ರೂಪಾಯಿಗೆ ಒಂದರಂತೆ 9 ಸಾವಿರ ಸಸಿ ತಂದು ನಾಟಿ ಮಾಡಿದ್ದಾರೆ.
ಸಸಿಗಳಿಗೆ ಪ್ಲಾಸ್ಟಿಕ್ ಹೊದಿಕೆ(ಮಲ್ಚಿಂಗ್), ತೊಟಗಾರಿಕೆ ಇಲಾಖೆಯಿಂದ ಪಡೆದ ಹನಿ ನೀರಾವರಿ, ಕೃಷಿ ಹೊಂಡ ಸೌಲಭ್ಯ ಪಡೆದು ಮೆಣಸಿನಕಾಯಿ ಬೆಳೆದಿದ್ದು, ಈಗ ಎರಡು ತಿಂಗಳ ಬೆಳೆ ಇದ್ದು, ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.
ಪ್ರತಿ ವರ್ಷ ಮೆಣಸಿನಕಾಯಿ ಬೆಳೆದು ಆರು ತಿಂಗಳಲ್ಲಿ ₹3 ಲಕ್ಷಕ್ಕೂ ಹೆಚ್ಚು ಆದಾಯ ಪಡೆಯುತ್ತಿದ್ದಾರೆ. ಈ ವರ್ಷವೂ ಮೇ ತಿಂಗಳಿನಲ್ಲಿ ಹಸಿ ಮೆಣಸಿನಕಾಯಿ ನಾಟಿ ಮಾಡಿದ್ದಾರೆ. ಕೊಟ್ಟಿಗೆ ಗೊಬ್ಬರ ಹಾಕಿ ಕೀಟಗಳ ಸಮಗ್ರ ನಿರ್ವಹಣೆಗೆ ಜೈವಿಕ ಹಾಗೂ ರಾಸಾಯನಿಕ ಕ್ರಿಮಿನಾಶಕ ಸಿಂಪಡಿಸಿ ಇದುವರೆಗೆ ಸುಮಾರು ₹40 ಸಾವಿರ ಖರ್ಚು ಮಾಡಿದ್ದಾರೆ.
ಸದ್ಯ ಮಾರುಕಟ್ಟೆಯಲ್ಲಿ ಪ್ರತಿಕೆಜಿ ಹಸಿ ಮೆಣಸಿನಕಾಯಿಗೆ ₹75 ಬೆಲೆ ಇದ್ದು, ಇನ್ನು ಮುಂದೆ ಮೆಣಸಿನಕಾಯಿ ಬೆಳೆಯನ್ನು 8-10 ಬಾರಿ ಕಟಾವು ಮಾಡಿದರೆ. ಸುಮಾರು ₹3 ಲಕ್ಷಕ್ಕೂ ಹೆಚ್ಚು ಆದಾಯ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಇವರು ಈ ಭಾಗದಲ್ಲಿ, ಪ್ರಗತಿಪರ ರೈತರಾಗಿ ಸುತ್ತಲಿನ ಸಾಕಷ್ಟು ರೈತರಿಗೆ ಹಾಗೂ ಯುವಕರಿಗೆ ಮಾದರಿಯಾಗಿದ್ದಾರೆ.
ಕೃಷಿ ಇಲಾಖೆ2020ನೇ ಸಾಲಿನಲ್ಲಿ ತಾಲ್ಲೂಕು ಮಟ್ಟದಲ್ಲಿ ಸೂಪರ್ ರೈತ ಹಾಗೂ 2024ರಲ್ಲಿ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿವೆ.
ಇಂದಿನ ದಿನಗಳಲ್ಲಿ ಯುವಕರು ಹೆಚ್ಚಾಗಿ ಕೃಷಿ ಕಡೆ ಮುಖ ಮಾಡುತ್ತಿಲ್ಲ. ಹೊಲ ಇದ್ದವರು ಅಲ್ಲಿ, ಇಲ್ಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಶ್ರದ್ಧೆಯಿಂದ ಕೃಷಿಯಲ್ಲಿ ಆಧುನಿಕ ಪದ್ಧತಿ ರೂಢಿಸಿಕೊಂಡು ಉತ್ತಮ ಆದಾಯ ಗಳಿಸಬಹುದು. ಹಸಿ ಮೆಣಸಿನಕಾಯಿ ಬೆಳೆ ಸುಮಾರು 7-8 ವರ್ಷಗಳಿಂದ ಬೆಳೆಯುತ್ತಿದ್ದೇನೆ. ಉತ್ತಮ ಆದಾಯ ಕೂಡಾ ಬರುತ್ತಿದೆ ಎನ್ನುತ್ತಾರೆ ರೈತ ಅಂಕುಶ ವಾಡೇಕರ್.
2007 ರಿಂದ ತೊಟಗಾರಿಕೆ ಬೆಳೆಗಳಾದ ಮೇಣಸಿನಕಾಯಿ ಟೊಮ್ಯಾಟೋ ಈರುಳ್ಳಿ ಬೆಳ್ಳುಳ್ಳಿ ಬೆಳೆಯುತ್ತಿದ್ದೇನೆ. ಇದರಿಂದ ಉತ್ತಮ ಆದಾಯ ಕೂಡಾ ಬರುತ್ತಿದೆಅಂಕುಶ ವಾಡೇಕರ್ ರೈತ
ಪ್ಲಾಸ್ಟಿಕ ಹೊದಿಕೆ ವಿಧಾನದಿಂದ ಮಣ್ಣಿನಲ್ಲಿನ ತೇವಾಂಶ ಹೆಚ್ಚು ಕಾಲ ಉಳಿಯುತ್ತದೆ. ಮಣ್ಣಿನ ಉಷ್ಣತೆ ಒಂದೇ ತೆರನಾಗಿರುತ್ತದೆ. ಇದರಿಂದ ಕಳೆಗಳ ಬಾಧೆ ಇರುವುದಿಲ್ಲ- ಪ್ರಾಣೇಶಕುಮಾರ ಸಹಾಯಕ ತೋಟಗಾರಿಕೆ ಅಧಿಕಾರಿ ದಾಬಕಾ(ಸಿ)
ಅಂಕುಶ ವಾಡೇಕರ್ ಉತ್ತಮ ರೈತ ಆಗಿದ್ದು ಈ ಭಾಗದಲ್ಲಿ ಇವರು ಕೃಷಿಯಲ್ಲಿ ಮಾಡಿರುವ ಸಾಧನೆಗೆ ಕೃಷಿ ಇಲಾಖೆಯೂ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಕೃಷಿಯಲ್ಲಿನ ಸಾಧನೆ ಎಲ್ಲರಿಗೂ ಮಾದರಿಯಾಗಿದೆ -ಕಿಶನರಾವ ಮಾಧವರಾವ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.