ಔರಾದ್: ಪಟ್ಟಣದ ಅಮರೇಶ್ವರ ದೇವಸ್ಥಾನ ಅಭಿವೃದ್ಧಿಗೆ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರು ಅಡ್ಡಿಪಡಿಸುತ್ತಿದ್ದಾರೆ ಎಂದು ಶಾಸಕ ಪ್ರಭು ಚವಾಣ್ ಆರೋಪಿಸಿದರು.
ಪಟ್ಟಣ ಪಂಚಾಯಿತಿಯಲ್ಲಿ ಮಂಗಳವಾರ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಕೊಠಡಿ ಉದ್ಘಾಟನೆ ಕಾರ್ಯಕ್ರಮದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಔರಾದ್ ಅಮರೇಶ್ವರ ದೇವಸ್ಥಾನ ಅಭಿವೃದ್ಧಿ ಆಗಬೇಕು ಎಂಬುದು ಭಕ್ತರ ಬಯಕೆಯಾಗಿದೆ. ಈ ನಿಟ್ಟಿನಲ್ಲಿ ನಾನು ಅಂದು ಪಶು ಸಂಗೋಪನೆ ಸಚಿವನಾಗಿದ್ದಾಗ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಈ ದೇವಸ್ಥಾನ ಅಭಿವೃದ್ಧಿಗೆ ಅಧಿಕಾರಿಗಳನ್ನು ಕರೆಸಿ ಕ್ರಿಯಾ ಯೋಜನೆ ರೂಪಿಸಿದೆ. ಕೆಲಸ ಶುರು ಮಾಡಲು ಪೂಜೆಯೂ ಮಾಡಿದೆ. ಆದರೆ ಇದನ್ನು ಸಹಿಸಲಾಗದೇ ಅಂದು ಕೇಂದ್ರ ಸಚಿವರಾಗಿದ್ದ ಭಗವಂತ ಖೂಬಾ ಅವರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕಾಮಗಾರಿ ತಡೆದರು. ಅವರಿಗೆ ಔರಾದ್ ಅಭಿವೃದ್ಧಿ ಬೇಕಿಲ್ಲ. ಪದೇ ಪದೇ ನನ್ನನ್ನು ಲಂಬಾಣಿ ಎಂದು ಹಿಯಾಳಿಸಿ ಮಾತನಾಡುವ ಚಾಳಿ ಬೆಳಿಸಿಕೊಂಡಿದ್ದಾರೆ. ಅವರ ಈ ರೀತಿಯ ವರ್ತನೆ ಅವರಿಗೆ ಈ ಲೋಕಸಭೆ ಚುನಾವಣೆಯಲ್ಲಿ ಮುಳುವಾಗಿದೆ’ ಎಂದರು.
’ಔರಾದ್ ಪಟ್ಟಣ ಇನ್ನಷ್ಟು ಅಭಿವೃದ್ಧಿಯಾಗಬೇಕು. ಇಲ್ಲಿಯ ಜನರಿಗೆ ಮೂಲ ಸೌಲಭ್ಯ ಸಿಗಬೇಕು. ಕಾರಂಜಾ ಜಲಾಶಯದಿಂದ ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಸುವ ₹84 ಕೋಟಿ ವೆಚ್ಚದ ಕಾಮಗಾರಿ ಮಂಜೂರಾತಿ ಸಿಕ್ಕಿದೆ. ಟೆಂಡರ್ ಆಗಿ ಒಂದು ವರ್ಷವಾದರೂ ಕಾಮಗಾರಿ ಆರಂಭಿಸಿಲ್ಲ’ ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮಿತ್ರ ಪಕ್ಷ ಅಧಿಕಾರಕ್ಕೆ ಬರಲಿದೆ. ಅಲ್ಲಿನ ನಾಲ್ಕೈದು ವಿಧಾನಸಭೆ ಕ್ಷೇತ್ರದಲ್ಲಿ ನಾನು ಪ್ರಚಾರ ನಡೆಸಿದೆ. ಈ ಎಲ್ಲ ಕಡೆ ನಮ್ಮ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧ್ಯಕ್ಷ- ಉಪಾಧ್ಯಕ್ಷರ ಕೊಠಡಿ ಉದ್ಘಾಟನೆ: ನೂತನ ಅಧ್ಯಕ್ಷೆ ಸರುಬಾಯಿ ಘುಳೆ, ಉಪಾಧ್ಯಕ್ಷೆ ರಾಧಾಬಾಯಿ ನರೋಟೆ ಅವರ ಕೊಠಡಿಯನ್ನು ಶಾಸಕ ಪ್ರಭು ಚವಾಣ್ ಪೂಜೆ ಸಲ್ಲಿಸಿ ಉದ್ಘಾಟಿಸಿದರು.
ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಪ.ಪಂ ಮುಖ್ಯಾಧಿಕಾರಿ ಸ್ವಾಮಿದಾಸ, ಸದಸ್ಯ ದಯಾನಂದ ಘುಳೆ, ಸಂತೋಷ ಪೋಕಲವಾರ, ಸಂಜು ವಡೆಯರ್, ಬನಸಿ ನಾಯಕ, ಕೇರಬಾ ಪವಾರ್, ಗುಂಡಪ್ಪ ಮುದಾಳೆ, ಮುಖಂಡ ರಾಮ ನರೋಟೆ, ಪ್ರಕಾಶ ಘುಳೆ ಹಾಗೂ ಪ.ಪಂ ಸದಸ್ಯರು, ಸ್ಥಳೀಯ ಗಣ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.