
ಕಮಲನಗರ : ತಾಲ್ಲೂಕಿನ ಚಿಮ್ಮೇಗಾಂವ-ಮಾಳೆಗಾಂವ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ ಪವರ್ ಗ್ರಿಡ್ ಉಪ ಕೇಂದ್ರಕ್ಕೆ ಶಾಸಕ ಪ್ರಭು ಬಿ.ಚವಾಣ್ ಶನಿವಾರ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.
ಆಡಳಿತ ಕಚೇರಿ, ಟಾವರ್‌ಗಳು, ಕಟ್ಟಡಗಳ ನಿರ್ಮಾಣ ಸೇರಿದಂತೆ ಉಪ ಕೇಂದ್ರದ ಆವರಣದಲ್ಲಿ ಸಂಚರಿಸಿ ಕೆಲಸದ ಗುಣಮಟ್ಟವನ್ನು ಪರಿಶೀಲಿಸಿದರು. ನಂತರ ಅಧಿಕಾರಿಗಳ ಸಭೆ ನಡೆಸಿ ಕಾಮಗಾರಿಯ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಅವರು, ‘ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಈ ಭಾಗದಲ್ಲಿ ಜನತೆಗೆ ಉದ್ಯೋಗಾವಕಾಶಗಳು ಲಭಿಸಿ ಆರ್ಥಿಕವಾಗಿ ಸದೃಢರಾಗಬೇಕೆಂಬ ಉದ್ದೇಶದಿಂದ ನಾನು ಸಚಿವನಾಗಿದ್ದಾಗ ಸಾಕಷ್ಟು ಪ್ರಯತ್ನಪಟ್ಟು ಕ್ಷೇತ್ರಕ್ಕೆ ಯೋಜನೆಯನ್ನು ತಂದಿದ್ದೇನೆ’ ಎಂದರು.
₹ 2,147 ಕೋಟಿ ಮೊತ್ತದ 675 ಕೆ.ವಿ ಪವರ್ ಟ್ರಾನ್ಸ್‌ಮಿಷನ್ ಸಾಮರ್ಥ್ಯದ ಕರ್ನಾಟಕ ಮೊದಲ ಪವರ್ ಗ್ರಿಡ್ ಉಪಕೇಂದ್ರ ಇದಾಗಿದೆ. ನಮ್ಮ ಭಾಗದ ಬಹುದೊಡ್ಡ ಯೋಜನೆಯನ್ನು ಗುಣಮಟ್ಟದಿಂದ ಮಾಡಬೇಕು ಮತ್ತು ನಿಗದಿತ ಅವಧಿಯೊಳಗಾಗಿ ಕೆಲಸ ಪೂರ್ಣಗೊಳಿಸಬೇಕು’ ಎಂದು ನಿರ್ದೇಶನ ನೀಡಿದರು.
ಪವರ್ ಗ್ರಿಡ್ ಕಾರ್ಪೋರೇಷನ್ ಕಾಮಗಾರಿಗೆ ಇಲ್ಲಿನ ಅನೇಕ ರೈತರು ಜಮೀನು ನೀಡಿದ್ದಾರೆ. ಅವರಿಗೆ ಅನುಕೂಲ ಮಾಡಿಕೊಡಬೇಕು. ಕಾಮಗಾರಿ ಸ್ಥಳದಲ್ಲಿ ನೂರಾರು ಜನರ ಅವಶ್ಯಕತೆ ಇರುತ್ತದೆ. ಇದರಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ತಾಂತ್ರಿಕ ಕೆಲಸಗಳಿಗೆ ಪರಿಣಿತರ ಅವಶ್ಯಕತೆಯಿರುತ್ತದೆ. ಆದರೆ ತಾಂತ್ರಿಕೇತರ ಕೆಲಸಗಳಿಗೆ ಸಾಧ್ಯವಾದಷ್ಟು ಸ್ಥಳೀಯರ ಸೇವೆ ಪಡೆಯಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿದರು.
ರಸ್ತೆ ಬಿಟ್ಟಿಲ್ಲವೆಂದು ಪ್ರತಿದಿನ ನೂರಾರು ರೈತರಿಂದ ಕರೆಗಳು ಬರುತ್ತಿವೆ. ಹಿಂದಿನಿಂದಲೂ ಕೃಷಿಯಲ್ಲಿ ತೊಡಗಿಸಿಕೊಂಡ ರೈತರಿಗೆ ಏಕಾಏಕಿ ರಸ್ತೆ ಮುಚ್ಚಿದಲ್ಲಿ ಜಮೀನಿಗೆ ಓಡಾಡಲು ತೀವ್ರ ಸಮಸ್ಯೆಯಾಗುತ್ತದೆ. ಪವರ್ ಗ್ರಿಡ್ ಉಪ ಕೇಂದ್ರದ ಸುತ್ತಲಿನ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದಾಗ ಅಧಿಕಾರಿಗಳು ರೈತರಿಗೆ ಅನುಕೂಲವಾಗುವಂತೆ ನೋಡಿಕೊಳ್ಳುತ್ತೇವೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ಅನಿಲ ಬಿರಾದಾರ, ಶಿವರಾಜ ಅಲ್ಮಾಜೆ, ಪ್ರಹ್ಲಾದ ಚಿಮ್ಮೇಗಾಂವ, ಸಚಿನ ಬಿರಾದಾರ, ರಮೇಶ ಪಾಟೀಲ, ಧನಾಜಿ ರಾಠೋಡ ಸೇರಿದಂತೆ ಪವರ್ ಗ್ರಿಡ್ ಕಾರ್ಪೋರೇಷನ್ ಅಧಿಕಾರಿಗಳು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.