ADVERTISEMENT

ಕೋವಿಡ್ ನಿಯಂತ್ರಣಕ್ಕೆ ಕಂಕಣಬದ್ಧರಾಗಿ ಕೆಲಸ ಮಾಡಿ: ಶಾಸಕ ಶರಣು ಸಲಗರ

ಬಸವಕಲ್ಯಾಣ: ಪ್ರಥಮ ಸಭೆಯಲ್ಲಿ ಅಧಿಕಾರಿಗಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಮೇ 2021, 5:33 IST
Last Updated 4 ಮೇ 2021, 5:33 IST
ಬಸವಕಲ್ಯಾಣದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಸಂಸದ ಭಗವಂತ ಖೂಬಾ, ಶಾಸಕ ಶರಣು ಸಲಗರ ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಸಂಸದ ಭಗವಂತ ಖೂಬಾ, ಶಾಸಕ ಶರಣು ಸಲಗರ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ‘ಕೋವಿಡ್ ನಿಯಂತ್ರಣಕ್ಕಾಗಿ ಅಧಿಕಾರಿಗಳು ಕಂಕಣಬದ್ಧರಾಗಿ ಕೆಲಸ ನಿರ್ವಹಿಸಬೇಕು. ದಿನದ 24 ಗಂಟೆಯೂ ಸೇವೆಗೆ ಸಿದ್ಧರಿದ್ದರೆ ಸೋಂಕು ಹರಡುವಿಕೆ ತಡೆಯುವುದು ಸುಲಭ ಸಾಧ್ಯ’ ಎಂದು ಶಾಸಕ ಶರಣು ಸಲಗರ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಸೋಮವಾರ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ನಾನು ಕಳೆದ ವರ್ಷ ಕೋವಿಡ್ ಲಾಕ್‌ಡೌನ್‌ನಲ್ಲಿ ಕೆಲಸವಿಲ್ಲದೆ ಸಂಕಟ ಅನುಭವಿಸಿದ ಕಾರ್ಮಿಕರಿಗೆ, ಬಡವರಿಗೆ, ನಿರ್ಗತಿಕರಿಗೆ ಆಹಾರ ಧಾನ್ಯ ವಿತರಿಸಿದ್ದೇನೆ. ಈ ವಿಧಾನಸಭಾ ಕ್ಷೇತ್ರದ ಬಸವಕಲ್ಯಾಣ ಹಾಗೂ ಹುಲಸೂರ ತಾಲ್ಲೂಕಿನ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ 50 ಸಾವಿರ ಜನರಿಗೆ ಅಕ್ಕಿ, ಬೆಳೆ ನೀಡಿದ್ದೇನೆ. ಹೀಗಾಗಿ ಏನೂ ಇಲ್ಲದಿದ್ದಾಗ ಇಷ್ಟು ಕೆಲಸ ಮಾಡಿದ್ದಾರೆ. ಇವರನ್ನು ಶಾಸಕರನ್ನಾಗಿ ಮಾಡಿದರೆ ಇನ್ನಷ್ಟು ಕೆಲಸ ಮಾಡಬಹುದಲ್ಲ. ಸಂಕಟ ಕಾಲದಲ್ಲಿ ನಮಗೆ ನೆರವಾಗಬಹುದಲ್ಲ ಎಂಬ ನಿರೀಕ್ಷೆಯಿಂದ ನನಗೆ ಉಪ ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆ ಮಾಡಿದ್ದಾರೆ. ಜನರ ಭರವಸೆ ಈಡೇರಿಸುವುದಕ್ಕಾಗಿ ನನಗೆ ಅಧಿಕಾರಿಗಳು ಸಹಕಾರ ನೀಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ನಾನು ಕೋವಿಡ್ ನಿಯಂತ್ರಣಕ್ಕಾಗಿ ಅತ್ಯಂತ ತೀವ್ರಗತಿಯಲ್ಲಿ ಕೆಲಸ ಮಾಡಲಿದ್ದೇನೆ. ಅಧಿಕಾರಿಗಳು ಕೂಡ ಅಷ್ಟೇ ತೀವ್ರಗತಿಯಲ್ಲಿ ನನ್ನೊಂದಿಗೆ ಹೆಜ್ಜೆ ಹಾಕಬೇಕು. ಈ ವಿಷಯದಲ್ಲಿ ಎಡವಿದರೆ ನಾನು ಜವಾಬ್ದಾರನಲ್ಲ. ಅನ್ಯ ಕೆಲಸದಲ್ಲಿ ರಾಜಿ ಮಾಡಿಕೊಂಡರೂ ಈ ವಿಷಯದಲ್ಲಿ ಮಾತ್ರ ನಿರ್ಲಕ್ಷ್ಯವಹಿಸಿದರೆ ಸಹಿಸುವುದಿಲ್ಲ. ತಾಲ್ಲೂಕು ಪಂಚಾಯಿತಿ ಇಒ ಅವರು ತಾಲ್ಲೂಕಿನಲ್ಲಿ ಸಂಚರಿಸುವುದೇ ಇಲ್ಲ ಎಂಬ ದೂರುಗಳಿವೆ. ಮುಂದೆ ಹೀಗಾಗಬಾರದು. ನಾನು ಜಿಲ್ಲಾ ಪಂಚಾಯಿತಿಯಲ್ಲಿ 10 ವರ್ಷ ಕೆಲಸ ನಿರ್ವಹಿಸಿದ್ದೇನೆ. ಯಾವುದೇ ಅಧಿಕಾರಿ ಸುಳ್ಳು ಹೇಳಿ ನನ್ನ ಕಣ್ಣಲ್ಲಿ ಮಣ್ಣೆರಚುವ ಕೆಲಸ ಮಾಡಿದರೆ ನಡೆಯದು’ ಎಂದು ಎಚ್ಚರಿಕೆ ನೀಡಿದರು.

‘ಗ್ರಾಮೀಣ ಭಾಗದಲ್ಲಿ ಜ್ವರ, ಕೆಮ್ಮಿನಿಂದ ಬಳಲಿದರೆ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಕೋವಿಡ್ ಸೋಂಕಿತರಿಗೆ ತಕ್ಷಣ ಚಿಕಿತ್ಸೆ ದೊರಕಬೇಕಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಸಿಗೆ, ಆಮ್ಲಜನಕ, ಲಸಿಕೆ, ಔಷಧಿ ಹಾಗೂ ಇತರೆ ಯಾವುದರ ಕೊರತೆಯೂ ಆಗಬಾರದು. ಗ್ರಾಮ ಸಮಿತಿ ಹಾಗೂ ವಾರ್ಡ್ ಸಮಿತಿಗಳನ್ನು ರಚಿಸಿ ಕೋವಿಡ್ ನಿರ್ಮೂಲನೆಗೆ ಶ್ರಮಿಸಬೇಕಾಗಿದೆ’ ಎಂದು ಹೇಳಿದರು.

‘ಎಲ್ಲೆಡೆ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಗ್ರಾಮಗಳಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ಲಾಕ್‌ಡೌನ್‌ನಲ್ಲಿ ಯಾರಿಗೂ ಆಹಾರದ ಕೊರತೆ ಹಾಗೂ ಅನವಶ್ಯಕ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತಲೆದೂರದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ನಾನೂ ಸುಮ್ಮನೆ ಕುಳಿತುಕೊಳ್ಳದೆ ಯಾರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ಸ್ಥಳಕ್ಕೆ ಬಂದು ಪರಿಶೀಲಿಸಲಿದ್ದೇನೆ’ ಎಂದರು.

ಸಂಸದ ಭಗವಂತ ಖೂಬಾ ಮಾತನಾಡಿ, `ಕೋವಿಡ್ ಪ್ರಭಾವ ತಡೆಯುವುದಕ್ಕೆ ಎಲ್ಲರೂ ಪ್ರಯತ್ನಿಸಬೇಕು. ಸೋಂಕಿತರು ಗುಣಮುಖರಾಗಲು ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ' ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅಣ್ಣಾರಾವ್ ರಾಠೋಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸಿದ್ರಾಮ ಕಾಮಣ್ಣ, ತಹಶೀಲ್ದಾರ್ ನಾಗಯ್ಯ ಸ್ವಾಮಿ, ನಗರಸಭೆ ಆಯುಕ್ತ ಗೌತಮಬುದ್ಧ ಕಾಂಬಳೆ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಬೀರೇಂದ್ರಸಿಂಗ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.