ADVERTISEMENT

ಕೊಹಿನೂರ-–ಸಲಗರ ಅವಳಿ ಊರುಗಳ ಅಭಿವೃದ್ಧಿ

ರಸ್ತೆ ಕಾಮಗಾರಿಯ ಭೂಮಿಪೂಜಾ ಕಾರ್ಯಕ್ರಮದಲ್ಲಿ ಶಾಸಕ ಶರಣು ಸಲಗರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 5:34 IST
Last Updated 2 ಡಿಸೆಂಬರ್ 2022, 5:34 IST
ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರಿನಲ್ಲಿ ನಡೆದ ರಸ್ತೆ ಕಾಮಗಾರಿಯ ಭೂಮಿಪೂಜಾ ಕಾರ್ಯಕ್ರಮದಲ್ಲಿ ಶಾಸಕ ಶರಣು ಸಲಗರ ಮಾತನಾಡಿದರು
ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರಿನಲ್ಲಿ ನಡೆದ ರಸ್ತೆ ಕಾಮಗಾರಿಯ ಭೂಮಿಪೂಜಾ ಕಾರ್ಯಕ್ರಮದಲ್ಲಿ ಶಾಸಕ ಶರಣು ಸಲಗರ ಮಾತನಾಡಿದರು   

ಬಸವಕಲ್ಯಾಣ: ‘ನನ್ನೂರು ಸಲಗರ ಆಳಂದ ತಾಲ್ಲೂಕಿನಲ್ಲಿದ್ದರೂ ಇಲ್ಲಿಗೆ ಅತಿ ಸಮೀಪದಲ್ಲಿದ್ದು ಸಲಗರ-ಕೊಹಿನೂರ ಈ ಹೋಬಳಿ ಕೇಂದ್ರಗಳು ಅವಳಿ ಊರುಗಳಂತಿವೆ. ಹೀಗಾಗಿ ಹುಟ್ಟೂರಿನಂತೆಯೇ ಇಲ್ಲಿನ ಉದ್ಧಾರದ ಬಗ್ಗೆಯೂ ನನಗೆ ಅತೀವ ಕಾಳಜಿ ಇದೆ’ ಎಂದು ಶಾಸಕ ಶರಣು ಸಲಗರ ಹೇಳಿದರು.

ತಾಲ್ಲೂಕಿನ ಕೊಹಿನೂರಿನಲ್ಲಿ ಮಂಗಳವಾರ ನಡೆದ ರಸ್ತೆ ಕಾಮಗಾರಿಯ ಭೂಮಿಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇದು ದೊಡ್ಡ ಊರಾದ ಕಾರಣ ₹8 ಕೋಟಿ ವೆಚ್ಚದಲ್ಲಿ ಇಲ್ಲಿನ ರಸ್ತೆ ಅಗಲಗೊಳಿಸಿ ದ್ವಿವಿಭಜಕ ಹಾಗೂ ಪಕ್ಕದಲ್ಲಿ ಚರಂಡಿ ನಿರ್ಮಿಸಲಾಗುತ್ತಿದೆ. ₹34 ಕೋಟಿ ವೆಚ್ಚದಲ್ಲಿ ಇಲ್ಲಿಂದ ಮಂಠಾಳಕ್ಕೆ ಹೋಗುವ ರಸ್ತೆ ಹಾಗೂ ₹27 ಕೋಟಿಯಲ್ಲಿ ಮುಡಬಿ ರಸ್ತೆಯ ಡಾಂಬರೀಕರಣ ಕೈಗೊಳ್ಳಲಾಗುತ್ತಿದೆ. ಬಸವರಾಜ ಪಾಟೀಲ ಅಟ್ಟೂರ್ ಅವರು ಶಾಸಕ ಇದ್ದಾಗ ಈ ಗ್ರಾಮದ ಸುತ್ತಲಿನ ಗ್ರಾಮಗಳಿಗೆ ನೀರು ಪೂರೈಕೆಗೆ ಕೈಗೊಂಡ ಬಹುಗ್ರಾಮ ನೀರು ಸರಬರಾಜು ಯೋಜನೆಯಲ್ಲಿ 24 ರ ಬದಲಾಗಿ 48 ಗ್ರಾಮಗಳನ್ನು ಸೇರ್ಪಡೆಗೊಳಿಸಿ ₹80 ಕೋಟಿಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ’ ಎಂದರು.

ADVERTISEMENT

‘ಶೀಘ್ರದಲ್ಲಿಯೇ ಸಕ್ಕರೆ ಕಾರ್ಖಾನೆ ಹಾಗೂ ಸೋಯಾಬಿನ್ ಸಂಸ್ಕರಣೆ ಕಾರ್ಖಾನೆ ಸ್ಥಾಪಿಸುತ್ತೇನೆ. ಶಾಸಕನಾದ 18 ತಿಂಗಳಲ್ಲಿಯೇ ನೂರಾರು ಕೋಟಿಯ ಕೆಲಸ ಮಾಡಿದ್ದೇನೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಗಲ್ಲಿ ಮತ್ತು ಗ್ರಾಮದ ರಾಜಕೀಯದ ಕಾರಣಕ್ಕಾಗಿ ನನಗೆ ಅನ್ಯಾಯ ಮಾಡಬಾರದು’ ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮೇಘರಾಜ ನಾಗರಾಳೆ ಮಾತನಾಡಿ,‘ತಾಲ್ಲೂಕಿನಲ್ಲಿನ ಅಭಿವೃದ್ಧಿ ಕಾರ್ಯಗಳ ಪ್ರಚಾರ ಕೈಗೊಳ್ಳಬೇಕಾಗಿದೆ’ ಎಂದರು.

ಮುಖಂಡ ಮಹಾದೇವ ಹಸೂರೆ, ಪ್ರಭು ಪಾಟೀಲ ಮಾತನಾಡಿದರು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ, ಮಾಜಿ ಅಧ್ಯಕ್ಷ ಸೂರ್ಯಕಾಂತ ಚಿಲ್ಲಾಬಟ್ಟೆ ಹಾಗೂ ಮುಖಂಡ ರತಿಕಾಂತ ಕೊಹಿನೂರ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಿಲ ಅಡೆಪ್ಪಗೋಳ, ಸಂಜೀವಕುಮಾರ ಸುಗೂರೆ, ಶ್ರೀನಿವಾಸ ಪಾಟೀಲ, ಮಲ್ಲಪ್ಪ ಸಂತಾಜಿ, ದಿಲೀಪ ಪಾಟೀಲ, ಪಿಡಿಒ ಭೀಮಶಾಪ್ಪಾ ದಂಡಿನ್ ಇದ್ದರು.

ಇದಕ್ಕೂ ಮೊದಲು ಶಾಸಕರ ಮೇಲೆ ಜೆಸಿಬಿ ಮೂಲಕ ಹೂಮಳೆಗರೆದು ಸ್ವಾಗತಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.