ADVERTISEMENT

ದೇವರಿಗೆ ಪೂಜೆ ಸಲ್ಲಿಸಿ ಜಾಗರಣೆ ಮಾಡಿದ ಭಕ್ತರು

ರಾತ್ರಿ ಮೊಹರಂ ಪದ ಹಾಡಿ ಸಂಭ್ರಮಿಸಿದ ಜನರು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 15:01 IST
Last Updated 19 ಆಗಸ್ಟ್ 2021, 15:01 IST
ಬೀದರ್‌ನ ಸಿದ್ದಿತಾಲೀಂನಲ್ಲಿ ದೇವರಿಗೆ ನೈವೇದ್ಯ ಸಮರ್ಪಿಸಿದ ಹಿಂದೂಗಳು
ಬೀದರ್‌ನ ಸಿದ್ದಿತಾಲೀಂನಲ್ಲಿ ದೇವರಿಗೆ ನೈವೇದ್ಯ ಸಮರ್ಪಿಸಿದ ಹಿಂದೂಗಳು   

ಬೀದರ್: ಕೋವಿಡ್‌ ಮಧ್ಯೆಯೂ ಜಿಲ್ಲೆಯ ವಿವಿಧೆಡೆ ಮೊಹರಂ ಪ್ರಯುಕ್ತ ಜನ ಪೀರ್‌ ಹಾಗೂ ಪಂಜಾಗಳ ಪೂಜೆ ಮಾಡಿ ಕೃತಾರ್ಥರಾಗುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಪೀರ್‌ ಸ್ಥಾಪನೆಗೆ ಕೋವಿಡ್‌ ಕಾರಣ ಸರ್ಕಾರ ಅವಕಾಶ ನೀಡಿಲ್ಲ. ಚಿಕ್ಕ ಭವನ ಹಾಗೂ ಮನೆಗಳಲ್ಲಿ ಪಂಜಾಗಳನ್ನು ಇಟ್ಟು ಪೂಜೆ ಸಲ್ಲಿಸಲಾಗಿದೆ.

ನಗರದ ಓಲ್ಡ್‌ಸಿಟಿಯ ಸಿದ್ದಿತಾಲೀ ಹಾಗೂ ಮನಿಯಾರ್‌ ತಾಲಿಂನಲ್ಲಿ ಪೀರ್‌ ಹಾಗೂ ಪಂಜಾಗಳನ್ನು ಸ್ಥಾಪಿಸಲಾಗಿದೆ. ಭಕ್ತರು ದೇವರ ದರ್ಶನ ಪಡೆದು ಕಾಣಿಕೆಗಳನ್ನು ಸಲ್ಲಿಸಿದರು. ಗ್ರಾಮೀಣ ಪ್ರದೇಶಗಳಲ್ಲೂ ಸಾಂಕೇತಿಕ ಕಾರ್ಯಕ್ರಮ ನಡೆಸಲಾಗಿದೆ.

ಭಾಲ್ಕಿಯ ಮಾಶೆಟ್ಟೆ ಬಡಾವಣೆಯಲ್ಲಿ ಹುಸೇನ್ ಜಂಗ್ ಹಾಗೂ ಹುಸೇನ್ ಬಾಷಾ ಪೀರ್ ಪ್ರತಿಕೃತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗಿದೆ. ಬೀದಿಗಳಲ್ಲಿ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ. ಹಿಂದೂ ಹಾಗೂ ಮುಸ್ಲಿಮರು ಸೌಹಾರ್ದತೆಯಿಂದ ಮೊಹರಂ ಗೀತೆಗಳನ್ನು ಹಾಡಿದರು.

ADVERTISEMENT

ಗ್ರಾಮಾಂತರ ಪ್ರದೇಶದಲ್ಲಿ ಜಿಟಿ ಜಿಟಿ ಮಳೆ ಲೆಕ್ಕಿಸದೆ ಭಕ್ತರು ಜಾಗರಣೆ ಮಾಡಿದರು. ದೇವರಿಗೆ ಪುಟಾಣಿ ಸಕ್ಕರೆ ಹಾಗೂ ಮಾಲ್ದಿ ನೈವೇದ್ಯ ಸಮರ್ಪಿಸಿದರು. ಮೊಹರಂ ಕೊನೆಯ ದಿನ ಶುಕ್ರವಾರ ದೇವರ ವಿಶೇಷ ಪೂಜೆ ನಡೆಯಲಿದೆ. ದೇವರ ಸೇವೆಯಲ್ಲಿ ತೊಡಗಿರುವ ಮುಲ್ಲಾಗಳು ಜಾತಿ, ಮತ ಭೇದವಿಲ್ಲದೇ ಮಕ್ಕಳು ಮತ್ತು ಹಿರಿಯರಿಗೆ ನವಿಲುಗರಿಯ ಬೀಸಣಿಕೆಯಿಂದ ತಲೆ ಸವರಿ ಆಶೀರ್ವದಿಸಿದರು.

ಶೋಕಾಚರಣೆ:ನಗರದ ಇರಾನಿಗಲ್ಲಿಯಲ್ಲಿ 10 ದಿನಗಳಿಂದ ಶೋಕಾಚರಣೆ ನಡೆದಿದೆ. ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ ಸಾಂಕೇತಿಕವಾಗಿ ಧಾರ್ಮಿಕ ಕಾರ್ಯಕ್ರಮ ನಡೆದಿದೆ. ಕೋವಿಡ್‌ ಕಾರಣ ಬಹಿರಂಗ ಮೆರವಣಿಗೆಗೆ ಅವಕಾಶ ಕಲ್ಪಿಸಿಲ್ಲ. ಶುಕ್ರವಾರ ಬೆಳಿಗ್ಗೆ ಇರಾನಿಗಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶೋಕಾಚರಣೆ ಮುಕ್ತಾಯಗೊಳಿಸಲಿದ್ದಾರೆ.

ಇರಾನಿ ಸಮುದಾಯದವರು ಪ್ರತಿ ವರ್ಷ ಇರಾನಿಗಲ್ಲಿಯಿಂದ ಮೆರವಣಿಗೆ ಹೊರಟು ರೈಲ್ವೆ ನಿಲ್ದಾಣ ಮಾರ್ಗವಾಗಿ ಶರಣ ಹರಳಯ್ಯ ವೃತ್ತಕ್ಕೆ ಬಂದು ಬಹಿರಂಗವಾಗಿ ಮೊನಚಾದ ವಸ್ತುಗಳಿಂದ ಮೈಮೇಲೆ ಬಡಿದುಕೊಂಡು ಶೋಕಾಚರಣೆ ಮಾಡುತ್ತಿದ್ದರು. ಈ ಬಾರಿ ಮೆರವಣಿಗೆ ನಿಷೇಧಿಸಲಾಗಿದೆ.

ವರಮಹಾಲಕ್ಷ್ಮಿ ಪೂಜೆಗೆ ಸಿದ್ಧತೆ

ಬೀದರ್: ಜಿಲ್ಲೆಯಲ್ಲಿ ವರ ಮಹಾಲಕ್ಷ್ಮಿ ಪೂಜೆ ಮಾಡುವ ಸಂಪ್ರದಾಯ ಇಲ್ಲ. ಆದರೆ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಕಡೆಯಿಂದ ಬಂದು ನೆಲೆಸಿದ ಕೆಲವರು ತಮ್ಮ ಮನೆಗಳಲ್ಲಿ ಶುಕ್ರವಾರ ವರ ಮಹಾಲಕ್ಷ್ಮಿ ಪೂಜೆಗೆ ಸಿದ್ಧತೆ ಮಾಡಿಕೊಂಡರು.ದಿನವಿಡೀ ಮೋಡ ಕವಿದ ವಾತಾವರಣ ಇದ್ದ ಕಾರಣ ಮಾರುಕಟ್ಟೆ ಪ್ರದೇಶದಲ್ಲಿ ಜನರ ಸಂಖ್ಯೆ ವಿರಳವಾಗಿತ್ತು. ಹಣ್ಣು ಹಾಗೂ ಹೂವಿನ ಬೆಲೆಯಲ್ಲೂ ವ್ಯತ್ಯಾಸ ಕಂಡು ಬರಲಿಲ್ಲ. ಲಕ್ಷ್ಮಿ ಮಂದಿರಗಳಲ್ಲಿ ದೇವರ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.