ಚಿಟ್ಟಾವಾಡಿ (ಜನವಾಡ): ಮಂಗ ದಾಳಿಯಿಂದ ಮಹಿಳೆಯೊಬ್ಬರು ಗಂಭೀರ ಗಾಯಗೊಂಡ ಘಟನೆ ಬೀದರ್ ತಾಲ್ಲೂಕಿನ ಚಿಟ್ಟಾವಾಡಿಯಲ್ಲಿ ಬುಧವಾರ ನಡೆದಿದೆ.
ಗ್ರಾಮದ ಲಲಿತಾ ಮಲ್ಲಪ್ಪ ಗಾಯಗೊಂಡಿದ್ದು, ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಮನೆಗೆ ಮರಳಿದ್ದಾರೆ.
ಲಲಿತಾ ಅವರು ಮನೆ ಅಂಗಳದಲ್ಲಿ ಬಟ್ಟೆ ಒಗೆಯುತ್ತಿದ್ದಾಗ, ಹಿಂದಿನಿಂದ ಬಂದ ಮಂಗ ಅವರ ಬೆನ್ನಿಗೆ ಕಚ್ಚಿದೆ. ಬೆನ್ನಿಗೆ ಹೊಲಿಗೆಗಳು ಬಿದ್ದಿವೆ ಎಂದು ಲಿಲಿತಾ ಅವರ ಸಂಬಂಧಿ ರಾಜಕುಮಾರ ಕಡ್ಯಾಳ್ ತಿಳಿಸಿದರು.
‘ಗ್ರಾಮದಲ್ಲಿ ಒಂದು ತಿಂಗಳಿಂದ ಮಂಗಗಳ ಹಾವಳಿ ಹೆಚ್ಚಾಗಿದೆ. ಅನೇಕರ ಮೇಲೆ ದಾಳಿ ಮಾಡಿ, ಗಾಯಗೊಳಿಸಿವೆ. ಮಂಗಗಳು ಗುಂಪು ಗುಂಪಾಗಿ ಓಡಾಡುತ್ತಿವೆ. ಬೇವಿನ ಮರದ ಮೇಲೆ ಕುಳಿತುಕೊಳ್ಳುತ್ತಿವೆ. ಪರಸ್ಪರ ಜಗಳವಾಡುತ್ತ ಊರಲ್ಲಿ ಬರುತ್ತಿವೆ. ಎದುರಿಗೆ ಬಂದವರ ಮೇಲೆ ದಾಳಿ ನಡೆಸುತ್ತಿವೆ’ ಎಂದರು.
‘ಬೀದರ್ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ದಶರಥ ಮೋರಗಿ ಮಾತನಾಡಿ,‘ಪಟಾಕಿ ಹಚ್ಚಿದರೂ ಮಂಗಗಳು ಓಡಿ ಹೋಗುತ್ತಿಲ್ಲ. ಬಡಿಗೆ ತೋರಿಸಿದರೂ ಮೈ ಮೇಲೆ ಬರುತ್ತಿವೆ. ಮಂಗಗಳು ಚಿಟ್ಟಾವಾಡಿ, ಚಿಟ್ಟಾ ಹಾಗೂ ಅಮಲಾಪುರದಲ್ಲಿ ಅನೇಕರ ಮೇಲೆ ದಾಳಿ ನಡೆಸಿವೆ’ ಎಂದು ತಿಳಿಸಿದರು.
‘ಚಿಟ್ಟಾವಾಡಿಯ ನಾಗಮ್ಮ ಚಂದ್ರಕಾಂತ, ಜಗದೇವಿ ಸಾಯಿಬಣ್ಣ, ಹಣಮಂತ ರಾಜೋಳೆ, ತೇಜಮ್ಮ ಅರ್ಜುನ, ಲಲಿತಾ ಮಲ್ಲಪ್ಪ ಮೊದಲಾದವರ ಮೇಲೆ ದಾಳಿ ಮಾಡಿವೆ. ಎರಡು ವಾರದ ಹಿಂದೆ ನನ್ನ ಮೇಲೂ ದಾಳಿಗೆ ಪ್ರಯತ್ನಿಸಿದ್ದವು. ಕೈಯಲ್ಲಿ ಬಡಿಗೆ ಹಿಡಿದುಕೊಂಡಿದ್ದರಿಂದ ಬಚಾವಾಗಿದ್ದೆ’ ಎಂದರು.
‘ಮಂಗಗಳ ಉಪಟಳದ ಕಾರಣ ಜನ ಹೊಲಗಳಿಗೆ ಹೋಗಲು ಹೆದರುತ್ತಿದ್ದಾರೆ. ಪಾಲಕರು ಮಕ್ಕಳಿಗೆ ಹೊರಗಡೆ ಆಟವಾಡಲು ಬಿಡುತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಮಂಗಗಳ ಕಾಟ ತಪ್ಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.