ADVERTISEMENT

ಚಿಟಗುಪ್ಪ: ನೀರು ಹರಸಿ ನಾಡಿಗೆ ಬಂದ ಮಂಗ

ಬಿಸಿಲ ತಾಪಕ್ಕೆ ಬತ್ತಿದ ಜಲಮೂಲಗಳು; ಕಂಗಾಲಾದ ಪ್ರಾಣಿಗಳು

​ಪ್ರಜಾವಾಣಿ ವಾರ್ತೆ
Published 16 ಮೇ 2023, 19:34 IST
Last Updated 16 ಮೇ 2023, 19:34 IST
ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿ ಸೋರುತ್ತಿರುವ ಕೊಳವೆ ಬಾವಿಯಲ್ಲಿ ಹನಿ ನೀರಿಗೆ ಬಾಯೊಡ್ಡಿದ್ದ ಮಂಗಗಳು
ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿ ಸೋರುತ್ತಿರುವ ಕೊಳವೆ ಬಾವಿಯಲ್ಲಿ ಹನಿ ನೀರಿಗೆ ಬಾಯೊಡ್ಡಿದ್ದ ಮಂಗಗಳು   

ವೀರೇಶ್‌ ಎನ್.ಮಠಪತಿ

ಚಿಟಗುಪ್ಪ: ಜಲ ಮೂಲಗಳು ಬತ್ತಿದ ಪರಿಣಾಮ ಕಾಡಿನಿಂದ ನಾಡಿನತ್ತ ನೀರು, ಆಹಾರ ಹರಸಿ ಮಂಗಗಳು ನಾಡಿಗೆ ಬರಲಾರಂಭಿಸಿವೆ.

ತಾಲ್ಲೂಕಿನ ದೇವಗಿರಿ ಸಾಮಾಜಿಕ ಅರಣ್ಯ ಪ್ರದೇಶ ಹಾಗೂ ಕರಕನಳ್ಳಿ ಕಾಯ್ದಿರಿಸಿದ ಅರಣ್ಯ ಪ್ರದೇಶದಲ್ಲಿ ಬಿಸಿಲಿನ ತಾಪ ತಾಳಲಾರದೇ ಮಂಗಗಳು ಊರಿನತ್ತ ಬರುತ್ತಿವೆ. ಗ್ರಾಮಗಳಲ್ಲಿ ನೀರಿನ ಮೂಲಗಳಲ್ಲಿ ಹನಿ ನೀರು ಕುಡಿದು,  ಮಾಳಿಗೆ ಯಿಂದ ಮಾಳಿಗೆಗೆ ಜಿಗಿಯುತ್ತ ಮನೆಯ ಅಂಗಳದಲ್ಲಿ ಬೆಳೆಸಿದ ಹಣ್ಣಿನ ಗಿಡಗಳ ಎಲೆ ಕಾಯಿ ತಿಂದು ಬದುಕುತ್ತಿವೆ.

ADVERTISEMENT

ತಿಂಡಿ, ತಿನಿಸು ಪೊಟ್ಟಣ ಹಿಡಿದು ಕೊಂಡು ಬರುವ ಜನರನ್ನು ಕಸಿದುಕೊಳ್ಳುತ್ತಿವೆ. ಅಲ್ಲದೇ ಮನುಷ್ಯರಂತೆಯೇ ಮನೆಬಾಗಿಲ ಮುಂದೆ ನಿಂತು ಆಹಾರ ಬೇಡುತ್ತಿವೆ. ಮೂಕ ಪ್ರಾಣಿಗಳ ವೇದನೆ ಅರಿತು ಕೆಲವರು ಆಹಾರ ನೀಡಿದರೆ, ಕೆಲವರು ಹೆದರಿ ಬಾಗಿಲು ಮುಚ್ಚಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಬೆನ್ನಟ್ಟಿ ಹೆದರಿಸಿ ಗ್ರಾಮದಿಂದ ಓಡಿಸುತ್ತಿದ್ದಾರೆ.

ಬಿಸಿಲಿನ ತಾಪಕ್ಕೆ ಅರಣ್ಯ ಪ್ರದೇಶದಲ್ಲಿಯೇ ನೀರು ಇಲ್ಲದಂತಾಗಿದೆ. ದೇವಗಿರಿ, ಕರಕನಳ್ಳಿ ಅರಣ್ಯ ಪ್ರದೇಶದಲ್ಲಿ ಮರಗಿಡಗಳ ಎಲೆ ಉದುರಿದ್ದು, ಅಲ್ಲಿನ ಪ್ರಾಣಿಗಳಿಗೆ ಆಹಾರದ ಕೊರತೆ ಉಂಟಾಗಿದೆ.

ಉರಿ ಬಿಸಿಲಿನಲ್ಲಿ ಮಂಗಗಳು ಎಲ್ಲೆಂದರಲ್ಲಿ ಜಿಗಿಯುತ್ತ ನೀರಿಗಾಗಿ ಹುಡುಕಾಡಿದರೂ ಎಲ್ಲೂ ತೊಟ್ಟು ನೀರು ಸಿಗುತ್ತಿಲ್ಲ. ಜನ ಮೂಕ ಪ್ರಾಣಿಗಳ ವೇದನೆ ಅರ್ಥ ಮಾಡಿಕೊಳ್ಳುತ್ತಿಲ್ಲ. ಯಾರೊಬ್ಬರು ಕುಡಿಯಲು ನೀರು ಪೂರೈಸುತ್ತಿಲ್ಲ. ಹೀಗಾಗಿ ಮೂಕ ಪ್ರಾಣಿಗಳ ಸ್ಥಿತಿ ದಯನೀಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.