ADVERTISEMENT

ಬೆಳಿಗ್ಗೆ ನೀರಸ: ಸಂಜೆ ಮತದಾನ ಬಿರುಸು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 15:58 IST
Last Updated 17 ಏಪ್ರಿಲ್ 2021, 15:58 IST
ಬಸವಕಲ್ಯಾಣ ತಾಲ್ಲೂಕಿನ ಬೇಟಬಾಲಕುಂದಾದಲ್ಲಿ ಸ್ಥಾಪಿಸಿದ್ದ ಸಖಿ ಮತಗಟ್ಟೆಯಲ್ಲಿ ಮಹಿಳಾ ಸಿಬ್ಬಂದಿ ಸಮವಸ್ತ್ರದಲ್ಲಿ ಚುನಾವಣಾ ಕಾರ್ಯ ನಿರ್ವಹಿಸಿದರು
ಬಸವಕಲ್ಯಾಣ ತಾಲ್ಲೂಕಿನ ಬೇಟಬಾಲಕುಂದಾದಲ್ಲಿ ಸ್ಥಾಪಿಸಿದ್ದ ಸಖಿ ಮತಗಟ್ಟೆಯಲ್ಲಿ ಮಹಿಳಾ ಸಿಬ್ಬಂದಿ ಸಮವಸ್ತ್ರದಲ್ಲಿ ಚುನಾವಣಾ ಕಾರ್ಯ ನಿರ್ವಹಿಸಿದರು   

ಬೀದರ್: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಹದಿನೈದು ದಿನ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಕೈಗೊಂಡರೂ ಉಪ ಚುನಾವಣೆಯಲ್ಲಿ ಮತದಾರರಲ್ಲಿ ನಿರೀಕ್ಷೆಯಷ್ಟು ಉತ್ಸಾಹ ಕಂಡು ಬರಲಿಲ್ಲ. ಬೆಳಿಗ್ಗೆ ಮಂದಗತಿಯಲ್ಲೇ ಮತದಾನ ಆರಂಭವಾಯಿತು. ಕೋವಿಡ್‌ ಭಯ ಹಾಗೂ ಮಧ್ಯಾಹ್ನ ಅಧಿಕ ಬಿಸಿಲು ಇದ್ದ ಕಾರಣ ಮತದಾರರು ಮತಗಟ್ಟೆಗಳೆತ್ತ ಸುಳಿಯಲಿಲ್ಲ.

ಮಧ್ಯಾಹ್ನದ ವರೆಗೂ ಕ್ಷೇತ್ರದ ಮತಗಟ್ಟೆಗಳಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತ ದೃಶ್ಯಗಳು ಕಾಣಸಿಗಲಿಲ್ಲ. ಮತದಾರರು ಆಗೊಮ್ಮೆ, ಈಗೊಮ್ಮೆ ನಾಲ್ಕೈದು ಜನ ಗುಂಪು ಸೇರಿ ಬಂದು ಮತ ಹಕ್ಕು ಚಲಾಯಿಸಿ ಹೋಗುತ್ತಿದ್ದರು. ಮತಗಟ್ಟೆ ಸಮೀಪದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಸಣ್ಣ ಗುಂಪುಗಳು ಅಲ್ಲಲ್ಲಿ ಕಾಣಿಸಿಕೊಂಡವು. ಕಾರ್ಯಕರ್ತರಲ್ಲೂ ಅಬ್ಬರ ಕಂಡು ಬರಲಿಲ್ಲ.

ತ್ರಿಪುರಾಂತ ಗ್ರಾಮದಲ್ಲಿ ಹಣ ಹಂಚಿಕೆ ಆರೋಪ ಕೇಳಿ ಬಂದ ನಂತರ ಮತಗಗಟ್ಟೆಗಳ ವ್ಯಾಪ್ತಿಯಲ್ಲಿ ಪೊಲೀಸ್‌ ಬಂದೋಬಸ್ತ್‌ ಬಿಗಿಗೊಳಿಸಲಾಗಿತ್ತು. ಜಿಲ್ಲಾ ಚುನಾವಣಾ ಆಧಿಕಾರಿ ರಾಮಚಂದ್ರನ್‌ ಅವರು ಅಧಿಕಾರಿಗಳ ತಂಡದೊಂದಿಗೆ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ಬಸವಕಲ್ಯಾಣ ತಾಲ್ಲೂಕಿನ ಮುಚಳಂಬದ ಮತಗಟ್ಟೆ 41ರಲ್ಲಿ ಬೆಳಿಗ್ಗೆ 10.20ರ ವೇಳೆಗೆ 128 ಮಂದಿ ಮಾತ್ರ ಮತದಾನ ಮಾಡಿದ್ದರು. ಧನ್ನೂರ (ಕೆ.ಎಚ್‌) ಗ್ರಾಮದ ಮತಗಟ್ಟೆ 50ರಲ್ಲಿ 843 ಮತದಾರರ ಪೈಕಿ 10 ಗಂಟೆಯ ವೇಳೆಗೆ ಶೇಕಡ 25ರಷ್ಟು ಜನ ಮತಹಕ್ಕು ಚಲಾಯಿಸಿದ್ದರು.

ಬಸವಕಲ್ಯಾಣದ ಜೀಜಾಮಾತಾ ಶಾಲೆಯ ಮತಗಟ್ಟೆ 80ರಲ್ಲಿ ಬೆಳಿಗ್ಗೆ 10 ಗಂಟೆಗೆ 744 ಮತದಾರರಲ್ಲಿ 131 ಜನ ಮತದಾನ ಮಾಡಿದ್ದರು. ಲಮಾಣಿ ವಿದ್ಯಾರ್ಥಿ ನಿಲಯದ ಮತಗಟ್ಟೆ 87ರಲ್ಲೂ ಮತಹಕ್ಕು ಚಲಾಯಿಸಿದವರ ಸಂಖ್ಯೆ 150 ದಾಟಿರಲಿಲ್ಲ. ನೀಲಾಂಬಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಮಧ್ಯಾಹ್ನ 12 ಗಂಟೆ ವೇಳೆಗೆ ಶೇಕಡ 30ರಷ್ಟು ಜನ ಮಾತ್ರ ಮತದಾನ ಮಾಡಿದ್ದರು.
ಬೇಟಬಾಲಕುಂದಾದಲ್ಲಿ ಸ್ಥಾಪಿಸಿದ್ದ ಸಖಿ ಮತಗಟ್ಟೆ ಮತದಾರರನ್ನು ಸೆಳೆಯಿತು. ಮತಗಟ್ಟೆಗೆ ಪೂರ್ಣ ಗುಲಾಬಿ ಬಣ್ಣ ಬಳಿಯಲಾಗಿತ್ತು. ಪ್ರವೇಶ ದ್ವಾರದಲ್ಲಿ ಗುಲಾಬಿ ಬಣ್ಣದ ಬಲೂನ್‌ ಅಳವಡಿಸಲಾಗಿತ್ತು. ಗುಲಾಬಿ ಬಣ್ಣದ ಸೀರೆ ಧರಿಸಿದ್ದ ಮಹಿಳಾ ಸಿಬ್ಬಂದಿಯೇ ಮತಗಟ್ಟೆಗಳಲ್ಲಿ ಕಾರ್ಯ ನಿರ್ವಹಿಸಿದರು. ಇಲ್ಲಿ ಬೆಳಿಗ್ಗೆ 9 ಗಂಟೆ ವೇಳೆಗೆ 63 ಹಾಗೂ 11 ಗಂಟೆ ವೇಳೆಗೆ 104 ಜನ ಮತದಾನ ಮಾಡಿದ್ದರು.

ಮಹಾರಾಷ್ಟ್ರದ ಗಡಿಯಲ್ಲಿರುವ ಮಂಠಾಳದ ಪ್ರಾಥಮಿಕ ಶಾಲೆಯ ಮತಗಟ್ಟೆ 161ರಲ್ಲಿ ಬೆಳಿಗ್ಗೆ 7 ರಿಂದ 9 ಗಂಟೆ ವರೆಗೆ 121, 9ರಿಂದ 11 ಗಂಟೆಗೆ 129 ಹಾಗೂ 11ರಿಂದ ಮಧ್ಯಾಹ್ನ 1 ಗಂಟೆ ವರೆಗೆ 66 ಜನ ಮತದಾನ ಮಾಡಿದ್ದರು. ಮಧ್ಯಾಹ್ನ ಶೇಕಡ 50 ರಷ್ಟು ಮತದಾನವಾಗಿತ್ತು.

ಬೆಳಿಗ್ಗೆ 9 ಗಂಟೆಗೆ ಶೇ 7.46 ರಷ್ಟು, 11 ಗಂಟೆಗೆ ಶೇ 19.48, ಮಧ್ಯಾಹ್ನ 1 ಗಂಟೆಗೆ ಶೇ 29, 3 ಗಂಟೆ ಶೇ 37.73 ಹಾಗೂ ಸಂಜೆ 5 ಗಂಟೆಗೆ ಶೇ.52.40 ರಷ್ಟು ಮತದಾನವಾಗಿದೆ.

‘ಬಸವಕಲ್ಯಾಣ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆದಿದೆ. ಯಾವುದೇ ಅಹಿತಕರ ಘಟನೆಗಳ ನಡೆದ ಬಗ್ಗೆ ವರದಿಯಾಗಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.