ಕಮಲನಗರ: ತಾಲ್ಲೂಕಿನ ರಂಡ್ಯಾಳ ಗ್ರಾಮದಿಂದ ಡೋಣಗಾಂವ(ಎಂ) ಮಾರ್ಗವಾಗಿ ಕಮಲನಗರ ತಾಲ್ಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 2 ಕಿ.ಮೀ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ನಿತ್ಯ ಸಂಚರಿಸುವ ಪ್ರಯಾಣಿಕರು ರೋಸಿ ಹೋಗಿದ್ದಾರೆ. ರಸ್ತೆಯ ಸ್ಥಿತಿ ಅಧೋಗತಿಗೆ ತಲುಪಿದೆ.
ರಸ್ತೆಯುದ್ದಕ್ಕೂ ಎದ್ದಿರುವ ಜಲ್ಲಿ ಕಲ್ಲುಗಳು ಪ್ರಯಾಣಿಕರ ಸುಗಮ ಸಂಚಾರಕ್ಕೆ ಕಂಟಕವಾಗಿವೆ. ರಸ್ತೆಯ ಮೇಲೆ ಮೊಣಕಾಲುದ್ದ ತಗ್ಗು ಗುಂಡಿಗಳು ನಿರ್ಮಾಣಗೊಂಡಿವೆ. ಡಾಂಬರು ಕಿತ್ತು ಹೋಗಿ ವರ್ಷಗಳೇ ಕಳೆದಿದೆ. ಮಳೆಗಾಲದಲ್ಲಂತೂ ರಸ್ತೆಯ ತುಂಬ ಬಿದ್ದಿರುವ ಗುಂಡಿಗಳಲ್ಲಿ ಮಳೆಯ ನೀರು ಸಂಗ್ರಹವಾಗುವುದು ಸಾಮಾನ್ಯವಾಗಿದೆ.
ಕೊಂಚ ಆಯ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿ. ಈ ರಸ್ತೆಯಲ್ಲಿ ನಿತ್ಯ ಓಡಾಡುವ ಜನರು ರಸ್ತೆಯ ಸ್ಥಿತಿ ಕಂಡು ಹಿಡಿಶಾಪ ಹಾಕುತ್ತಿದ್ದಾರೆ. ಸರ್ಕಾರ ರಸ್ತೆಗಳ ಸುಧಾರಣೆಗಾಗಿಯೇ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡುತ್ತದೆ. ಆದರೆ ಹಲವು ವರ್ಷಗಳಿಂದ ಹದಗೆಟ್ಟ ಈ ರಸ್ತೆ ಸುಧಾರಣೆಯತ್ತ ಮಾತ್ರ ಗಮನಹರಿಸದೇ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಮೇಲೆ ಬಿದ್ದಿರುವ ತಗ್ಗುಗಳಲ್ಲಿ ಮಳೆಗಾಲದಲ್ಲಿ ನೀರು ನಿಂತು ದೊಡ್ಡ ಹೊಂಡಗಳೇ ಸೃಷ್ಟಿಯಾಗಿವೆ. ದುರುಸ್ತಿಗಾಗಿ ಹಲವು ಬಾರಿ ಚುನಾಯಿತ ಪ್ರತಿನಿಧಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಸೆಳೆದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಪ್ರಯಾಣಿಕರು.
ಕೂಡಲೇ ಸಂಬಂಧಿತ ಅಧಿಕಾರಿಗಳು ಗಮನಹರಿಸಿ ರಸ್ತೆ ದುರುಸ್ತಿಗೆ ಮುಂದಾಗಬೇಕು ಎಂದು ಪ್ರಯಾಣಿಕರಾದ ಶೇಷರಾವ ಮಾಧವರಾವ ಪಾಟೀಲ್, ಆಕಾಶ ಬಿರಾದಾರ, ವಿಜಯಕುಮಾರ ನಾಗಶೇಟ್ಟಿ ಪಾಟೀಲ್, ನಾಗುರಾವ ನಿಡೋದೆ, ಪ್ರಕಾಶ ಪಾಟೀಲ್ ಒತ್ತಾಯಿಸಿದ್ದಾರೆ.
ಈ ಕುರಿತು ಪಂಚಾಯತ್‌ರಾಜ್ ಇಲಾಖೆ ಎಇಇ ಅಧಿಕಾರಿಗೆ ದೂರವಾಣಿ ಮುಖಾಂತರ ಕರೆ ಮಾಡಿದರೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಸಂಬಂಧಿತ ಅಧಿಕಾರಿಗಳು ಕೂಡಲೇ ರಸ್ತೆ ದುರುಸ್ತಿಗೆ ಮುಂದಾಗಬೇಕು. ಇಲ್ಲದಿದ್ದಲ್ಲಿ ರಸ್ತೆಗಿಳಿದು ಹೋರಾಟ ಮಾಡುವುದು ಅನಿವಾರ್ಯಶೇಷರಾವ ಪಾಟೀಲ ರಂಡ್ಯಾಳ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.