ADVERTISEMENT

22 ಅಭ್ಯರ್ಥಿಗಳ ಭವಿಷ್ಯ ಬಯಲಿಗೆ ಕ್ಷಣಗಣನೆ; ಸಂಭ್ರಮಾಚರಣೆಗೆ ಪಕ್ಷಗಳ ಸಿದ್ಧತೆ

ಚಂದ್ರಕಾಂತ ಮಸಾನಿ
Published 22 ಮೇ 2019, 19:47 IST
Last Updated 22 ಮೇ 2019, 19:47 IST
ಬೀದರ್‌ನ ಬಿವಿಬಿ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಮತ ಎಣಿಕೆ ಕೇಂದ್ರದ ಬಳಿ ಪೊಲೀಸ್‌ ಬಂದೋಬಸ್ತ್‌ ಪರಿಶೀಲಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ. ಡಿವೈಎಸ್‌ಪಿ ಎಸ್‌.ವೈ.ಹುಣಸಿಕಟ್ಟಿ, ಸಿಪಿಐ ಶರಣಬಸವೇಶ್ವರ ಭಜಂತ್ರಿ, ಶ್ರೀಕಾಂತ ಇದ್ದಾರೆ
ಬೀದರ್‌ನ ಬಿವಿಬಿ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಮತ ಎಣಿಕೆ ಕೇಂದ್ರದ ಬಳಿ ಪೊಲೀಸ್‌ ಬಂದೋಬಸ್ತ್‌ ಪರಿಶೀಲಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ. ಡಿವೈಎಸ್‌ಪಿ ಎಸ್‌.ವೈ.ಹುಣಸಿಕಟ್ಟಿ, ಸಿಪಿಐ ಶರಣಬಸವೇಶ್ವರ ಭಜಂತ್ರಿ, ಶ್ರೀಕಾಂತ ಇದ್ದಾರೆ   

ಬೀದರ್: ಲೋಕಸಭಾ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಆಯ್ಕೆ ಬಯಸಿ ಚುನಾವಣಾ ಅಖಾಡಕ್ಕೆ ಇಳಿದಿರುವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸೇರಿ ಒಟ್ಟು 22 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಗುರುವಾರ ಮಧ್ಯಾಹ್ನ ಬಯಲಾಗಲಿದೆ.

ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳ ಮಧ್ಯೆ ನೇರ ಪೈಪೋಟಿ ನಡೆದಿದ್ದು, ಎರಡೂ ಪಕ್ಷಗಳ ಅಭ್ಯರ್ಥಿಗಳು ಕೊನೆ ಕ್ಷಣದ ವರೆಗೂ ಗೆಲುವು ನಮ್ಮದೇ ಎಂದು ಹೇಳಿಕೊಂಡಿದ್ದಾರೆ. ವಿಜಯೋತ್ಸವ ಆಚರಿಸಲೆಂದೇ ತಾಲ್ಲೂಕು ಕೇಂದ್ರಗಳಿಂದ ಬಂದ ಕಾರ್ಯಕರ್ತರ ಅನುಕೂಲಕ್ಕಾಗಿ ನಗರದಲ್ಲಿ ಲಾಡ್ಜ್‌ಗಳನ್ನು ಬುಕ್‌ ಮಾಡಿದ್ದಾರೆ.

ಕಾಂಗ್ರೆಸ್‌ನ ಈಶ್ವರ ಖಂಡ್ರೆ, ಬಿಜೆಪಿಯ ಭಗವಂತ ಖೂಬಾ, ಬಿಎಸ್‌ಪಿಯ ಎಸ್. ಎಚ್. ಬುಖಾರಿ, ಅಖಿಲ ಭಾರತೀಯ ಮುಸ್ಲಿಂ ಲೀಗ್ (ಸೆಕ್ಯುಲರ್)ನ ಅಬ್ದುಲ್‌ ಸತ್ತಾರ್‌ ಮುಜಾಹೀದ್, ಉತ್ತಮ ಪ್ರಜಾಕೀಯ ಪಕ್ಷದ ಅಂಬರೀಶ ಕೆಂಚಾ, ಅಂಬೇಡ್ಕರ್‌ ಪಾರ್ಟಿ ಆಫ್ ಇಂಡಿಯಾದ ದಯಾನಂದ ಗೋಡಬೋಲೆ, ಭರತ ಪ್ರಭಾತ್ ಪಾರ್ಟಿಯ ಮೊಹ್ಮದ್ ಅಬ್ದುಲ್ ವಕೀಲ, ಪ್ರಜಾ ಸತ್ತಾ ಪಾರ್ಟಿಯ ಮೊಹ್ಮದ್‌ ಯುಸೂಫ್‌ ಖದೀರ್, ಬಹುಜನ ಮಹಾ ಪಾರ್ಟಿಯ ಎಂ.ಡಿ.ಮಿರಾಜೊದ್ದಿನ್, ನ್ಯಾಷನಲ್ ಡೆವಲೆಪ್‌ಮೆಂಟ್ ಪಾರ್ಟಿಯ ಮೌಲ್ವಿ ಜಮಿರೋದ್ದಿನ್, ಪೂರ್ವಾಂಚಲ ಜನತಾ ಪಾರ್ಟಿ(ಸೆಕ್ಯುಲರ್)ಯ ರಾಜಕುಮಾರ, ಭಾರತೀಯ ಬಹುಜನ ಕ್ರಾಂತಿ ದಳದ ರಾಜಮಾಬಿ ದಸ್ತಗೀರ್‌, ಭಾರತೀಯ ಜನಕ್ರಾಂತಿ ದಳದ ಸಂತೋಷ ರಾಠೋಡ, ಕ್ರಾಂತಿಕಾರಿ ಜೈಹಿಂದ್ ಸೇನಾ ಪಾರ್ಟಿಯ ಸುಗ್ರೀವ ಕಚುವೆ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

ADVERTISEMENT

ಪಕ್ಷೇತರ ಅಭ್ಯರ್ಥಿಗಳಾದ ಮೌಲಪ್ಪ ಅಮೃತ ಮಾಳಗೆ, ಮೌಲಾಸಾಬ ದಡಕಲ್, ರವಿಕಾಂತ ಹೂಗಾರ, ಶರದ್ ಗಂದಗೆ, ಶಿವರಾಜ ತಮ್ಮಣ್ಣ ಬೊಕ್ಕೆ, ಶ್ರೀಮಂತ ಪಾಟೀಲ, ಶೇಖ್ ಅಬ್ದುಲ್ ಗಫಾರ್, ಸೈಬಣ್ಣ ನಾಗೇಂದ್ರ ಜಮಾದಾರ ಅದೃಷ್ಟ ಪರೀಕ್ಷಿಸಿಕೊಳ್ಳಲು ಅಣಿಯಾಗಿದ್ದಾರೆ. ಕೆಲವರು ನಮ್ಮ ಠೇವಣಿ ಉಳಿದರೂ ಸಾಕು ಎನ್ನುವ ಹಂತದಲ್ಲಿದ್ದಾರೆ.

ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಯ ಅಭ್ಯರ್ಥಿಗಳೇ ಅಬ್ಬರದ ಪ್ರಚಾರ ನಡೆಸಿ ಚುನಾವಣೆ ರಂಗೇರುವಂತೆ ಮಾಡಿದ್ದರು. ಎರಡೂ ಪಕ್ಷಗಳು ಶಕ್ತಿ ಪ್ರದರ್ಶನ ನಡೆಸುವ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸಿದ್ದವು. ತಮ್ಮ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎನ್ನುವ ಬಲವಾದ ನಂಬಿಕೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಇಬ್ಬರೂ ಜಿಲ್ಲೆಗೆ ಪ್ರಚಾರಕ್ಕೆ ಬಂದಿರಲಿಲ್ಲ. ರಾಷ್ಟ್ರಮಟ್ಟದ ಪ್ರಭಾವಿ ನಾಯಕರೂ ಸಹ ಜಿಲ್ಲೆಯತ್ತ ಸುಳಿಯಲಿಲ್ಲ. ಹೀಗಾಗಿ ಇದು ವರ್ಚಸ್ಸಿನ ಚುನಾವಣೆಯಾಗಿ ಮಾರ್ಪಟ್ಟಿತ್ತು.

ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದ್ದರು. ಒಂದು ಹಂತದಲ್ಲಿ ಕೆಸರೆರಚಾಟವೂ ನಡೆಯಿತು. ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಭಗವಂತ ಖೂಬಾ ವಿರುದ್ಧ ಮುನಿಸಿಕೊಂಡಿದ್ದರೆ, ಅಲ್ಪಸಂಖ್ಯಾತರಿಗೆ ಟಿಕೆಟ್‌ ಕೊಟ್ಟಿಲ್ಲವೆಂದು ಜಿಲ್ಲೆಯ ಮುಸ್ಲಿಂರು ಕಾಂಗ್ರೆಸ್‌ ವಿರುದ್ಧ ಅಸಮಾಧಾನಗೊಂಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಮತಗಟ್ಟೆಗೆ ಬಂದು ಮತದಾನ ಮಾಡಿದ್ದರು.

ಇದೀಗ ಮತದಾನ ನಡೆದು ಬರೋಬ್ಬರಿ ಒಂದು ತಿಂಗಳು ಕಳೆದಿದೆ. ರಾಜಕಾರಣಿಗಳಲ್ಲಿ ಆವೇಶ ಕಡಿಮೆಯಾಗಿದೆ. ಎಲ್ಲರ ದೃಷ್ಟಿ ಫಲಿತಾಂಶದ ಮೇಲೆ ನೆಟ್ಟಿದೆ. ಅಭ್ಯರ್ಥಿಗಳ ಹೃದಯ ಬಡಿತ ಹೆಚ್ಚಾಗಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.