ADVERTISEMENT

ನಾಲ್ದೇರಾ ಪ್ರವಾಸ ಕಥನ ಮಾಹಿತಿ ಆಗರ: ಸಾಹಿತಿ ರಾಜ್ ಆಚಾರ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 15:32 IST
Last Updated 20 ಮಾರ್ಚ್ 2021, 15:32 IST
ಬೀದರ್‌ನ ಕರ್ನಾಟಕ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ನಾಲ್ದೇರಾ ಮತ್ತು ಸಾಹಿತ್ಯ ಸಾರ ಉಪನ್ಯಾಸ' ಕಾರ್ಯಕ್ರಮದಲ್ಲಿ ಸಾಹಿತಿ ಶಿವಕುಮಾರ ಕಟ್ಟೆ ಮಾತನಾಡಿದರು
ಬೀದರ್‌ನ ಕರ್ನಾಟಕ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ನಾಲ್ದೇರಾ ಮತ್ತು ಸಾಹಿತ್ಯ ಸಾರ ಉಪನ್ಯಾಸ' ಕಾರ್ಯಕ್ರಮದಲ್ಲಿ ಸಾಹಿತಿ ಶಿವಕುಮಾರ ಕಟ್ಟೆ ಮಾತನಾಡಿದರು   

ಬೀದರ್: ಪ್ರವಾಸಿ ತಾಣಗಳ ಪರಿಚಯ, ಗ್ರಾಮೀಣ ಜೀವನ, ಗ್ರಾಮ ಸ್ವರಾಜ್ಯ, ಹೈನುಗಾರಿಕೆಯ ಬೆಳವಣಿಗೆ, ಹೆಣ್ಣುಮಕ್ಕಳ ಸ್ಥಿತಿಗತಿಯಂತಹ ವೈವಿಧ್ಯಮಯ ವಿಷಯಗಳ ಮೇಲೆ ಬೆಳಕು ಚೆಲ್ಲುವ 'ನಾಲ್ದೇರಾ' ಅಪರೂಪದ ಗ್ರಂಥ ಎಂದು ಬೆಂಗಳೂರಿನ ಸಾಹಿತಿ ರಾಜ್ ಆಚಾರ್ಯ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಕರ್ನಾಟಕ ಪದವಿಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಶನಿವಾರ ಕರ್ನಾಟಕ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ `ನಾಲ್ದೇರಾ ಮತ್ತು ಸಾಹಿತ್ಯ ಸಾರ ಉಪನ್ಯಾಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿವಕುಮಾರ ಕಟ್ಟೆ ಅವರು ತಾವು ಭೇಟಿ ನೀಡಿದ ಪ್ರವಾಸಿ ತಾಣಗಳ ಮಾಹಿತಿ, ಅವುಗಳ ಐತಿಹಾಸಿಕ ಮಹತ್ವವನ್ನು ಅಂಕಿ ಅಂಶಗಳೊಂದಿಗೆ ಕೃತಿಯಲ್ಲಿ ದಾಖಲಿಸಿದ್ದಾರೆ. ಪ್ರತಿಯೊಂದು ಪುಟಗಳೂ ಓದಿಸಿಕೊಂಡು ಹೋಗುತ್ತವೆ ಎಂದು ಹೇಳಿದರು.

ADVERTISEMENT

ಪಠ್ಯ ಪುಸ್ತಕಗಳು ಕೇವಲ ಅಂಕ ಗಳಿಸಲು ನೆರವಾದರೆ ಸಾಹಿತ್ಯ ಕೃತಿಗಳು ಜೀವನದ ಪಾಠ ಕಲಿಸುತ್ತವೆ. ಕ್ರಿಯಾಶೀಲತೆ ಹೆಚ್ಚಿಸುತ್ತವೆ. ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಲು ಅಗತ್ಯವಿರುವ ಸಂವಹನ ಕಲೆ ಬೆಳೆಸುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಸಾಹಿತ್ಯದ ಒಲವು ಬೆಳೆಸಿಕೊಳ್ಳಬೇಕು. ಸಾಹಿತ್ಯ ಕೃತಿಗಳನ್ನು ಓದಬೇಕು ಎಂದು ತಿಳಿಸಿದರು.

ಸಾಹಿತ್ಯ ಕೃತಿಗಳನ್ನು ಓದಿದ ನಂತರ ವಿಶ್ಲೇಷಣೆ ಮಾಡಲು ಪ್ರಯತ್ನಿಸಬೇಕು. ಅದರಲ್ಲಿ ಏನಾದರೂ ಲೋಪ ದೋಷಗಳು ಕಂಡು ಬಂದಲ್ಲಿ ಲೇಖಕರಿಗೆ ಪತ್ರ ಬರೆದು ತಿಳಿಸಬೇಕು. ಓದುವ ಅಭ್ಯಾಸದ ಮೂಲಕ ಸಾಹಿತ್ಯ ಕೃತಿಗಳಿಗೆ ಮನ್ನಣೆ ನೀಡಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ. ಬಸವರಾಜ ಬಲ್ಲೂರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕವು 50 ವರ್ಷಗಳನ್ನು ಪೂರೈಸಿದೆ. ಹಾಗೆಯೇ ಕರ್ನಾಟಕ ಪದವಿಪೂರ್ವ ಕಾಲೇಜು ಸ್ಥಾಪನೆಯಾಗಿ 50 ವರ್ಷಗಳು ಆಗಿವೆ. ಈ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ನಾಲೇರಾ ಪ್ರವಾಸ ಕಥನದ ಲೇಖಕ ಶಿವಕುಮಾರ ಕಟ್ಟೆ ಅವರು, ನಾಲ್ದೇರಾ ಪ್ರವಾಸ ಕಥನದ ರಚನೆ, ಪ್ರವಾಸದ ಅನುಭವ ಹಾಗೂ ಕೃತಿಯ ವಿಶೇಷತೆಗಳ ಕುರಿತು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ರಮೇಶ ಬಿರಾದಾರ, ಜಯರಾಮ ಪಣಿಯಾಡಿ ಉಪಸ್ಥಿತರಿದ್ದರು. ಗುರುನಾಥ ರಾಜಗೀರಾ ನಿರೂಪಿಸಿದರು. ಜಗನ್ನಾಥ ಕಪಲಾಪುರೆ ಸ್ವಾಗತಿಸಿದರು. ಸಚಿನ್ ವಿಶ್ವಕರ್ಮ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.