ADVERTISEMENT

ಬೀದರ್: ಧುಮ್ಮನಸೂರ್‌ನಲ್ಲಿ ನಮ್ಮೂರ ಗ್ರಂಥಾಲಯ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 9 ಮೇ 2025, 7:55 IST
Last Updated 9 ಮೇ 2025, 7:55 IST
ಗ್ರಂಥಾಲಯದಲ್ಲಿ ಇಟ್ಟಿರುವ ಪುಸ್ತಕಗಳು
ಗ್ರಂಥಾಲಯದಲ್ಲಿ ಇಟ್ಟಿರುವ ಪುಸ್ತಕಗಳು   

ಹುಮನಾಬಾದ್: ಗ್ರಾಮೀಣ ಭಾಗದ ಜನರಲ್ಲಿ ಅಕ್ಷರ ಪ್ರೀತಿ ಬೆಳೆಸಲು ತಾಲ್ಲೂಕಿನ ಧುಮ್ಮನಸೂರ್ ಗ್ರಾಮ ಪಂಚಾಯತಿ ವ್ಯಾಪ್ತಿಯಲೊಂದು ನಮ್ಮೂರ ಸಮುದಾಯ ಗ್ರಂಥಾಲಯ ಸ್ಥಾಪಿಸಲಾಗಿದೆ.

ಗ್ರಾಮ ಪಂಚಾಯಿತಿ ವತಿಯಿಂದ ಸ್ಥಾಪನೆ ಮಾಡಲಾದ ಈ ಗ್ರಂಥಾಲಯದಲ್ಲಿ ಹಲವು ಬಗೆಯ ಪುಸ್ತಕಗಳು ಲಭ್ಯವಿದ್ದು. ಓದುಗರನ್ನು ಕೈಬಿಸಿ ಕರೆಯುತ್ತಿದೆ.‌

ಧುಮ್ಮನಸೂರ್ ಗ್ರಾಮದ ಮುಖ್ಯ ದ್ವಾರದಲ್ಲಿನ ರಾಷ್ಟೀಯ ಹೆದ್ದಾರಿ 55 ಪಕ್ಕದಲ್ಲಿ ಗ್ರಾಮ ಪಂಚಾಯಿತಿಯ 15ನೇ ಹಣಕಾಸಿನ 90 ಸಾವಿರ ವೆಚ್ಚದಲ್ಲಿ ಈ ಸುಂದರ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ.

ADVERTISEMENT

’ನಮ್ಮೂರ ಗ್ರಂಥಾಲಯ ಕೇಂದ್ರದಲ್ಲಿ ಬುದ್ಧ, ಬಸವ ಅಂಬೇಡ್ಕರ್ ಬಗೆಗಿನ ಪುಸ್ತಕಗಳು ಕತೆ, ಕಾದಂಬರಿ, ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳು ಸೇರಿದಂತೆ 200ಕ್ಕು ಹೆಚ್ಚು ಪುಸ್ತಕಗಳನ್ನು ಇಡಲಾಗಿದೆ. ಗ್ರಾಮಸ್ಥರು ಪುಸ್ತಕಗಳನ್ನು ದೇಣಿಗೆ ರೂಪದಲ್ಲಿ ಕೊಡಬಹುದು. ವಿದ್ಯಾರ್ಥಿಗಳು, ಪ್ರಯಾಣಿಕರು ಬಿಡುವಿನ ವೇಳೆ ಗ್ರಂಥಾಲಯದಲ್ಲಿ ಇರುವ ಪುಸ್ತಕಗಳನ್ನು ಓದಿ, ಇಡಬಹುದು. ಸಾರ್ವಜನಿಕರೂ ಇದರ ಪ್ರಯೋಜನ ಪಡೆಯಬಹುದು‌’ ಎಂದು ಪಿಡಿಒ ಮಲ್ಲಿಕಾರ್ಜುನ ತಿಳಿಸಿದರು.

ಗ್ರಂಥಾಲಯದಲ್ಲಿ ಬಗೆ ಬಗೆಯ ಬಣ್ಣದ ಬ್ಯಾನರ್ ಅಳವಡಿಸಲಾಗಿದ್ದು, ಅವುಗಳ ಮೇಲೆ ಮಹನೀಯರ ಸಂದೇಶ ಬರೆಯಲಾಗಿದೆ. ಪುಸ್ತಕ ಇಡಲು ಕಪಾಟುಗಳನ್ನು ಸಹ ಅಳವಡಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಅವರು ಧುಮ್ಮನಸೂರ್ ಗ್ರಾಮದಲ್ಲಿನ ನೂತನ ನಮ್ಮೂರ ಗ್ರಂಥಾಲಯವನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ’ಜಿಲ್ಲೆಯಲ್ಲಿ ಮೊದಲ ಬಾರಿಗೆ ಧುಮ್ಮನಸೂರ್ ಗ್ರಾಮ ಪಂಚಾಯಿತಿ ಅವರು ಈ ನಮ್ಮೂರ ಗ್ರಂಥಾಲಯ ಸ್ಥಾಪನೆ ಮಾಡಿರುವುದು ಶ್ಲಾಘನೀಯವಾಗಿದೆ. ಬಿಡುವಿನ ವೇಳೆಯಲ್ಲಿ ಗ್ರಾಮಸ್ಥರು ಈ ಸುಂದರ ಕೆರೆಯ ಸುತ್ತಲೂ ವಾಯು ವಿಹಾರಕ್ಕೆ ಬಂದ ಸಂದರ್ಭದಲ್ಲಿ ಈ ಗ್ರಂಥಾಲಯಕ್ಕೆ ಭೇಟಿ ನೀಡಿ ದಿನ ಪತ್ರಿಕೆಗಳು ಸೇರಿದಂತೆ ಮಹಾತ್ಮರ ಆದರ್ಶ ಪುಸ್ತಕಗಳು ಲಭ್ಯವಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು. ಅಲ್ಲದೆ ಇದರ ನಿವಾರಣೆಗಾಗಿ ಗ್ರಾಮದ ಎಲ್ಲ ಜನರು ಸ್ವಯಂ ಪ್ರೇರಿತರಾಗಿ ಗ್ರಂಥಾಲಯ ಸಂರಕ್ಷಣೆ ಮಾಡಬೇಕು’ ಎಂದರು.‌

ಹುಮನಾಬಾದ್ ತಾಲ್ಲೂಕಿನ ಧುಮ್ಮನಸೂರ್ ಗ್ರಾಮದಲ್ಲಿನ ನಮ್ಮೂರ ಗ್ರಂಥಾಲಯವನ್ನು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಉದ್ಘಾಟಿಸಿದರು.‌
ಜಿಲ್ಲೆಯಲ್ಲೇ ಮೊದಲನೇ ನಮ್ಮೂರು ಗ್ರಂಥಾಲಯ ಇದ್ದಾಗಿದೆ. ಈ ಗ್ರಂಥಾಲಯ ರಾಷ್ಟೀಯ ಹೆದ್ದಾರಿ ಪಕ್ಕದಲ್ಲಿ ಇರುವುದರಿಂದಾಗಿ ಪ್ರಯಾಣಿಕರಿಗೆ ಮತ್ತು ಗ್ರಾಮಸ್ಥರಿಗೆ ಇದರ ಅನುಕೂಲ ಆಗಲಿದೆ.
–ಡಾ.ಗಿರೀಶ್ ಬದೋಲೆ, ಜಿ.ಪಂ ಕಾರ್ಯನಿರ್ವಾಹಕ ಅಧಿಕಾರಿ
ಗ್ರಾಮೀಣ ಪ್ರದೇಶದ ಜನರಲ್ಲಿ ಪುಸ್ತಕ ಓದುವ ಅಭಿರುಚಿ ಬೆಳೆಸುವುದು ಈ ಗ್ರಂಥಾಲಯ ಸ್ಥಾಪನೆಯ ಉದ್ದೇಶವಾಗಿದೆ. ಧುಮ್ಮನಸೂರ್ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಒ ಅವರ ಸಹಕಾರದಿಂದ ಸುಂದರ ಗ್ರಂಥಾಲಯ ಸ್ಥಾಪನೆ ಮಾಡಲಾಗಿದೆ.
–ದೀಪಿಕಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ
ಸ್ಪರ್ಧಾತ್ಮಕ ಪರೀಕ್ಷೆ ದಿನ ಪತ್ರಿಕೆಗಳು ಕಾದಂಬರಿ ಶರಣರ ವಚನಗಳ ಸೇರಿದಂತೆ ಎಲ್ಲ ರೀತಿಯ ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯವಿವೆ. ಗ್ರಾಮದ ವಿದ್ಯಾರ್ಥಿಗಳು ಹಿರಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು.
–ವೀರಪ್ಪ ಧುಮ್ಮನಸೂರ್, ಗ್ರಾ.ಪಂ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.