ADVERTISEMENT

ಎನ್‌ಎಸ್‌ಎಸ್‌ಕೆಗೆ ಆರ್ಥಿಕ ನೆರವು ಕೊಡಿಸಿ: ಸೂರ್ಯಕಾಂತ ನಾಗಮಾರಪಳ್ಳಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 5:26 IST
Last Updated 25 ಡಿಸೆಂಬರ್ 2025, 5:26 IST
ಬೀದರ್ ತಾಲ್ಲೂಕಿನ ಜನವಾಡ ಸಮೀಪದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಗೆ ಎಸ್‌ಸಿಡಿಸಿಯಿಂದ ಆರ್ಥಿಕ ನೆರವು ದೊರಕಿಸಿಕೊಡಲು ರಾಜ್ಯ ಸರ್ಕಾರ ನೆರವಾಗಬೇಕು ಎಂದು ಒತ್ತಾಯಿಸಿ ಕಾರ್ಖಾನೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು ಬೆಂಗಳೂರಿನಲ್ಲಿ ಕಬ್ಬು ಅಭಿವೃದ್ಧಿ ಆಯುಕ್ತ ಗೋವಿಂದ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಬೀದರ್ ತಾಲ್ಲೂಕಿನ ಜನವಾಡ ಸಮೀಪದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಗೆ ಎಸ್‌ಸಿಡಿಸಿಯಿಂದ ಆರ್ಥಿಕ ನೆರವು ದೊರಕಿಸಿಕೊಡಲು ರಾಜ್ಯ ಸರ್ಕಾರ ನೆರವಾಗಬೇಕು ಎಂದು ಒತ್ತಾಯಿಸಿ ಕಾರ್ಖಾನೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು ಬೆಂಗಳೂರಿನಲ್ಲಿ ಕಬ್ಬು ಅಭಿವೃದ್ಧಿ ಆಯುಕ್ತ ಗೋವಿಂದ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಜನವಾಡ: ಬೀದರ್ ತಾಲ್ಲೂಕಿನ ಜನವಾಡ ಸಮೀಪದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಗೆ ಎನ್‌ಸಿಡಿಸಿಯಿಂದ ₹550 ಕೋಟಿ ಆರ್ಥಿಕ ನೆರವು ಕೊಡಿಸಲು ರಾಜ್ಯ ಸರ್ಕಾರ ನೆರವಾಗಬೇಕು ಎಂದು ಕಾರ್ಖಾನೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಕಬ್ಬು ಅಭಿವೃದ್ಧಿ ಆಯುಕ್ತ ಗೋವಿಂದ ರೆಡ್ಡಿ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ಆರ್ಥಿಕ ಸಮಸ್ಯೆಯಲ್ಲಿ ಇರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ, ವಿಜಯಪುರದ ನಂದಿ ಸಹಕಾರ ಸಕ್ಕರೆ ಕಾರ್ಖಾನೆ, ಭೀಮಾಶಂಕರ ಸಹಕಾರ ಸಕ್ಕರೆ ಕಾರ್ಖಾನೆ, ಬೈಲಹೊಂಗಲದ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಹಾಗೂ ಬೆಳಗಾವಿಯ ಸಂಗಮ ಸಹಕಾರ ಸಕ್ಕರೆ ಕಾರ್ಖಾನೆಗಳಿಗೆ ಎನ್.ಸಿ.ಡಿ.ಸಿಯಿಂದ ಸಾಲ ಕೊಡಿಸಲು ಪ್ರಸ್ತಾವ ಸಲ್ಲಿಸಿದೆ. ಈ ಪಟ್ಟಿಯಲ್ಲಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಹೆಸರನ್ನೂ ಸೇರಿಸಬೇಕು ಎಂದು ಬೇಡಿಕೆ ಮಂಡಿಸಿದರು.

ಎನ್.ಸಿ.ಡಿ.ಸಿಯಿಂದ ಆರ್ಥಿಕ ನೆರವು ದೊರಕಿಸಿಕೊಟ್ಟರೆ ಅದರಲ್ಲಿ ಡಿಸಿಸಿ ಬ್ಯಾಂಕ್‍ನ ಮೂಲ ಸಾಲ₹57.90 ಕೋಟಿ ಹಾಗೂ ಅಪೆಕ್ಸ್ ಬ್ಯಾಂಕ್‍ನ ₹40 ಕೋಟಿ ಪಾವತಿಸಿ, ಉಳಿದ ಹಣವನ್ನು 60 ಕೆ.ಪಿ.ಎಲ್.ಡಿ. ಸಾಮರ್ಥ್ಯದ ಎಥೆನಾಲ್ ಘಟಕ ಸ್ಥಾಪನೆ ಹಾಗೂ ದುಡಿಯುವ ಬಂಡವಾಳಕ್ಕೆ ಬಳಸಲಾಗುವುದು ಎಂದು ಹೇಳಿದರು.

ADVERTISEMENT

ನಿರ್ಮಾಣ ವೆಚ್ಚದಲ್ಲಿ ರೈತರ ಷೇರು ಹಣದ ಪಾಲು ಬರೀ ಶೇ 9.29 ರಷ್ಟು ಆಗಿದ್ದರಿಂದ ಬ್ಯಾಂಕ್‍ಗಳಿಂದ ಸಾಲ ಪಡೆಯುವುದು ಅನಿವಾರ್ಯವಾಗಿತ್ತು. ಕಾರಣ, ಡಿಸಿಸಿ ಬ್ಯಾಂಕ್‍ನಿಂದ ಶೇ 15 ರಷ್ಟು ಬಡ್ಡಿ ದರದಲ್ಲಿ ಸಾಲ ಪಡೆಯಲಾಗಿತ್ತು. ಈ ಸಾಲದ ಮೇಲೆ ಬಡ್ಡಿ ಬಹಳ ಬೆಳೆದಿದೆ ಎಂದು ತಿಳಿಸಿದರು.

2002-03 ರಿಂದ 2024-25ರ ವರೆಗಿನ ಅವಧಿಯಲ್ಲಿ ಸಾಲದ ಮೇಲಿನ ಬಡ್ಡಿಯ ಮೊತ್ತವೇ ₹668 ಕೋಟಿ ಆಗಿದೆ. ಕಾರ್ಖಾನೆ ಇದನ್ನು ಪಾವತಿಸುವ ಸ್ಥಿತಿಯಲ್ಲಿಲ್ಲ. ಬಡ್ಡಿ ಹೊರೆ ಕಾರ್ಖಾನೆಯ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಡುವಂತೆ ಮಾಡಿದೆ ಎಂದು ಹೇಳಿದರು.

ಕಾರ್ಖಾನೆ ನಿರ್ಮಾಣಕ್ಕೆ ಮಾಡಿದ ಸಾಲ, ಎಫ್‍ಆರ್‌ಪಿಗಿಂತ ಅಧಿಕ ಬೆಲೆ ಪಾವತಿಸಿದ್ದರಿಂದ ಉಂಟಾದ ನಷ್ಟ, ಉಚಿತ ಸಕ್ಕರೆ ವಿತರಣೆಯಿಂದ ಆಗಿರುವ ನಷ್ಟ ಹಾಗೂ ಬ್ಯಾಂಕ್ ಸಾಲದ ಬಡ್ಡಿ ಹೊರೆಯಿಂದ ಕಾರ್ಖಾನೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದರಿಂದ ಕಾರ್ಖಾನೆ ಮುನ್ನಡೆಸುವುದು ಕಷ್ಟಸಾಧ್ಯವಾಗಿದೆ ಎಂದು ತಿಳಿಸಿದರು.

ಒಂದು ವೇಳೆ ಕಾರ್ಖಾನೆ ಮುಚ್ಚಿದರೆ ರೈತ ಸದಸ್ಯರು, ಕಾಯಂ ನೌಕರರು, ಪ್ರತ್ಯೇಕ, ಪರೋಕ್ಷವಾಗಿ ಉದ್ಯೋಗ ಮಾಡುವವರು ಸೇರಿದಂತೆ 2 ಲಕ್ಷ ಜನರ ಬದುಕಿನ ಮೇಲೆ ಪರಿಣಾಮ ಉಂಟಾಗಲಿದೆ. ಆರ್ಥಿಕ ಸಮಸ್ಯೆಯ ಕಾರಣ ಕಾರ್ಖಾನೆಯ ಬ್ಯಾಂಕ್‍ಗಳ ಸಾಲದ ಸಂಪೂರ್ಣ ಬಡ್ಡಿ ಮನ್ನಾ ಮಾಡಿಸಬೇಕು ಹಾಗೂ ಎನ್.ಸಿ.ಡಿ.ಸಿ.ಯಿಂದ ಆರ್ಥಿಕ ನೆರವು ಕೊಡಿಸಲು, ಸಹಾಯ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.