ಮಹೇಶ ವಿ. ಪಾಟೀಲ್
ಬೀದರ್: ನಟ, ನಿರ್ದೇಶಕ ಮಹೇಶ ವಿ. ಪಾಟೀಲ್ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಒಲಿದು ಬಂದಿದೆ.
ಅಕಾಡೆಮಿಯು 2025–26ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಿದ್ದು, ಗಡಿ ಜಿಲ್ಲೆಯ ಕಲಾವಿದನನ್ನು ಗುರುತಿಸಿ, ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಮಹೇಶ ಅವರು ರಂಗಭೂಮಿ ಮತ್ತು ಬೆಳ್ಳಿ ಪರದೆ ಎರಡರಲ್ಲೂ ಬಣ್ಣ ಹಚ್ಚಿದ್ದಾರೆ. ಅನೇಕ ನಾಟಕ, ಕಿರುಚಿತ್ರ ಹಾಗೂ ಸಿನಿಮಾಗಳಲ್ಲಿ ನಟ–ನಿರ್ದೇಶಕ, ವಿನ್ಯಾಸಕಾರರಾಗಿ ಕೆಲಸ ಮಾಡಿದ್ದಾರೆ. ‘ವೀರಭದ್ರ ಮತ್ತು ಭದ್ರಕಾಳಿ’ಯಲ್ಲಿ ಸತತ ಒಂಬತ್ತು ಗಂಟೆಗಳ ಕಾಲ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.
‘ಬಡ್ತೆ ಕದಂ’, ‘ಮೇನ್ ರೋಡ್’, ‘ಷರೀಫ್ ಜಾದೆ‘ ಸೇರಿದಂತೆ 50ಕ್ಕೂ ಹೆಚ್ಚು ಹಿಂದಿ ಸಿನಿಮಾಗಳಲ್ಲಿ ನಟ, ವಿನ್ಯಾಸಕಾರ ಮತ್ತು ನಿರ್ದೇಶಕರಾಗಿ ದುಡಿದಿದ್ದಾರೆ. ‘ಬೆಳೆದವರು’, ‘ದಂಗೆ ಮುಂಚಿನ ದಿನಗಳು’, ‘ರಕ್ತ ಕಲ್ಯಾಣ’, ‘ಜೂಲಿಯಸ್ ಸೀಸರ್’ ಸೇರಿದಂತೆ 52ಕ್ಕೂ ಹೆಚ್ಚು ನಾಟಕಗಳಿಗೆ ಬಣ್ಣ ಹಚ್ಚಿದ್ದಾರೆ. ಡಾ. ಸಿದ್ದಲಿಂಗಯ್ಯನವರ ‘ಕತ್ತೆ ಮತ್ತು ಧರ್ಮ’ ನಾಟಕದಲ್ಲಿ ಇವರು ನಿರ್ವಹಿಸಿದ್ದ ‘ಮಿನಿಸ್ಟರ್’ ಪಾತ್ರ ಇವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಈ ನಾಟಕವು 200ಕ್ಕೂ ಹೆಚ್ಚು ಪ್ರದರ್ಶನ ಕಂಡಿರುವುದು ವಿಶೇಷ.
ಪತ್ರಕರ್ತ ‘ದಮನ್’ ವಿಶ್ವನಾಥ ಪಾಟೀಲ್ ಅವರ ಎರಡನೇ ಮಗ. ಆರಂಭದಿಂದಲೂ ಇವರಿಗೆ ರಂಗಭೂಮಿ ಬಗ್ಗೆ ವಿಶೇಷ ಆಸ್ಥೆ. ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿದ ಬಳಿಕ ಇವರು ರಂಗಭೂಮಿಯ ಕಡೆಗೆ ಮುಖ ಮಾಡಿದರು. 1988–91ರಲ್ಲಿ ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ (ಎನ್‌ಎಸ್‌ಡಿ) ಡಿಪ್ಲೊಮಾ ಇನ್ ಡ್ರಮ್ಯಾಟಿಕ್ ಆರ್ಟ್ಸ್, ಸ್ಪೆಶಲೈಜೇಶನ್ ಇನ್ ಡಿಸೈನ್ ಅಂಡ್ ಡೈರೆಕ್ಷನ್, ವಿಡಿಯೋ ಫಿಲಂ, ಫಿಲಂ ಅಪ್ರಿಸಿಯೇಶನ್ ಕೋರ್ಸ್ ಮಾಡಿದರು. ಬಳಿಕ ಹೆಗ್ಗೋಡಿನ ನಿನಾಸಂನಲ್ಲಿ ಡಿಪ್ಲೊಮಾ ಇನ್ ಥೇಟರ್ ಆರ್ಟ್ಸ್ ಅಂಡ್ ಫಿಲಂ ಅಪ್ರಿಸಿಯೇಶನ್ ಕೋರ್ಸ್, ನವದೆಹಲಿಯಲ್ಲಿ ವೃತ್ತಿಪರ ವಿಡಿಯೋ ಫಿಲಂ ಪ್ರೊಡಕ್ಷನ್ ಕೋರ್ಸ್ ಮಾಡಿದರು. ಎನ್‌ಎಸ್‌ಡಿಯ ಆಜೀವ ಸದಸ್ಯರಾಗಿರುವ ಇವರು ಇಂಡಿಯನ್ ಫಿಲಂ ಅಂಡ್ ಟೆಲಿವಿಷನ್ ಡೈರೆಕ್ಟರ್ಸ್ ಅಸೋಸಿಯೇಶನ್ ಸದಸ್ಯರೂ ಆಗಿದ್ದಾರೆ.
1979ರಲ್ಲಿ ರಾಜ್ಯಮಟ್ಟದ ಅತ್ಯುತ್ತಮ ನಟ ಪ್ರಶಸ್ತಿ, 1980ರಲ್ಲಿ ಅತ್ಯುತ್ತಮ ಏಕಪಾತ್ರಾಭಿನಯಕ್ಕೆ ಪ್ರಶಸ್ತಿ, 1982ರಲ್ಲಿ ಅತ್ಯುತ್ತಮ ಯುವ ನಿರ್ದೇಶಕ, 1998ರಲ್ಲಿ ಅತ್ಯುತ್ತಮ ನಿರ್ಮಾಣ, 2000ನೇ ಇಸ್ವಿಯಲ್ಲಿ ಅತ್ಯುತ್ತಮ ಸೃಜನಶೀಲ ಬರವಣಿಗೆಗೆ, 2001ರಲ್ಲಿ ಕಿರು ಸಾಕ್ಷ್ಯಚಿತ್ರಕ್ಕಾಗಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ.
‘ಸದ್ದಿಲ್ಲದೇ ಎಲೆಮರೆಕಾಯಿಯಂತೆ ಕೆಲಸ ಮಾಡುವ ಸ್ವಭಾವ ಮಹೇಶ ಪಾಟೀಲ್ ಅವರದ್ದು. ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸೂಕ್ತ ಎನ್ನುತ್ತಾರೆ’ ಜಾನಪದ ಕಲಾವಿದ ವಿಜಯಕುಮಾರ ಸೋನಾರೆ.
‘ಸರ್ಕಾರ ತಡವಾಗಿಯಾದರೂ ಗುರುತಿಸಿದೆ’:
‘ಸ್ವಲ್ಪ ತಡವಾಗಿಯಾದರೂ ಸರ್ಕಾರ ನನ್ನನ್ನು ಪ್ರಶಸ್ತಿಗೆ ಅರ್ಹನೆಂದು ತಿಳಿದು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ. ಆಯಾ ಸಾಧಕರಿಗೆ ಅವರ ಸಾಧನೆಯ ಸೂಕ್ತ ಸಮಯದಲ್ಲಿ ಪ್ರಶಸ್ತಿ ಕೊಟ್ಟರೆ ಉತ್ತಮ. ಅವರು ಇನ್ನಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡಲು ಸಾಧ್ಯ’ ಎಂದು ನಟ–ನಿರ್ದೇಶಕ ಮಹೇಶ ವಿ. ಪಾಟೀಲ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.