
ಬೀದರ್: ‘ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ 46,116 ಪ್ರಕರಣ ಇತ್ಯರ್ಥಪಡಿಸಿದ್ದು, ₹21.92 ಕೋಟಿ ಪರಿಹಾರವನ್ನು ಕಕ್ಷಿದಾರರಿಗೆ ಒದಗಿಸಲಾಗಿದೆ’ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರೂ ಆದ ಬೀದರ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಬಿ. ರಹಮಾನ್ ತಿಳಿಸಿದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆಯಾದ್ಯಂತ ಡಿ.13ರಂದು ಏರ್ಪಡಿಸಿದ್ದ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿಯಿರುವ ಒಟ್ಟು 13,902 ಪ್ರಕರಣಗಳನ್ನು ಇತ್ಯರ್ಥಗೊಳಿಸಿ, ₹13.41 ಕೋಟಿ ಕಕ್ಷಿದಾರರಿಗೆ ವಸೂಲಾತಿ ಮತ್ತು ಪರಿಹಾರ ಒದಗಿಸಲಾಗಿದೆ ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
32,214 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಕಕ್ಷಿದಾರರಿಗೆ ₹8.50 ಕೋಟಿ ವಸೂಲಾತಿ ಮತ್ತು ಪರಿಹಾರ ಒದಗಿಸಲಾಗಿದೆ. ಜಿಲ್ಲೆಯಾದ್ಯಂತ ಈ ಲೋಕ್ ಅದಾಲತ್ ನಲ್ಲಿ ವೈವಾಹಿಕ ವ್ಯಾಜ್ಯವನ್ನು ಇತ್ಯರ್ಥಪಡಿಸಿ ಸಂಧಾನದ ಮೂಲಕ ಒಂಬತ್ತು ಜೋಡಿಯನ್ನು ರಾಜಿ ಸಂಧಾನದ ಮೂಲಕ ಒಂದುಗೂಡಿಸಲಾಗಿದೆ. ನ್ಯಾಯಾಲಯಗಳಲ್ಲಿ ಬಾಕಿ ಇರುವ ಒಟ್ಟು 13 ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.
ನ್ಯಾಯಾಲಯಗಳಿಗೆ ಪ್ರಕರಣಗಳು ಬರುವುದನ್ನು ತಡೆಯಲು, ನ್ಯಾಯಾಲಯಗಳಲ್ಲಿ ಪ್ರಕರಣಗಳ ಹೊರೆ ಕಡಿಮೆ ಮಾಡಲು, ವ್ಯಾಜ್ಯಗಳು ದೊಡ್ಡದಾಗುವುದಕ್ಕೆ ಮುನ್ನವೇ ಇತ್ಯರ್ಥಪಡಿಸಲು ವಿವಿಧ ಇಲಾಖೆಗಳಲ್ಲಿ ‘ವ್ಯಾಜ್ಯ ಪೂರ್ವ’ ಹಂತದಲ್ಲಿಯೇ ರಾಜಿ ಮತ್ತು ಮಧ್ಯಸ್ಥಿಕೆ ಮೂಲಕ ಪ್ರಕರಣಗಳನ್ನು ಬಗೆಹರಿಸಲು ಉತ್ತಮ ಪ್ರಯತ್ನವಾಗಿದೆ. ಇದು ಜನರಿಗೆ ಶೀಘ್ರ ಪರಿಹಾರ ಸಿಗುವಂತೆ ಮಾಡುತ್ತದೆ ಮತ್ತು ನ್ಯಾಯಾಲಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದರು.
ಬೀದರ್ ತಾಲ್ಲೂಕಿನ ಒಂದು ಹಳ್ಳಿಯನ್ನು ಗುರುತಿಸಿ, ಹಳ್ಳಿಯ ಜನರ ಸಮಸ್ಯೆಗಳನ್ನು ಪಟ್ಟಿ ಮಾಡಿ ಸರ್ಕಾರಿ ಸೌಲಭ್ಯ ಹಾಗೂ ಕಾನೂನು ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಪ್ರಮಾಣದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಮಾಡಲಾಗುವುದು. ಹೈಕೋರ್ಟ್ ನ್ಯಾಯಮೂರ್ತಿಗಳಿಂದ ದಿನಾಂಕ ಪಡೆದು ನಿರ್ಧರಿಸಲಾಗುವುದು. ಜಿಲ್ಲೆಯ ವಿವಿಧ ಇಲಾಖೆಗಳ ಸಹಕಾರ ಮತ್ತು ಸಹಯೋಗ ಬಹಳ ಮುಖ್ಯ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ್ ಬನಸೋಡೆ ಮಾತನಾಡಿ, ಹಳ್ಳಿಯ ಜನರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಸ್ಥಳದಲ್ಲಿಯೇ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಸರ್ಕಾರದಿಂದಿರುವ ವಿವಿಧ ಸೌಲಭ್ಯಗಳು ಹಾಗೂ ಕಾನೂನು ನೆರವು ಪಡೆದುಕೊಳ್ಳಬಹುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.