ADVERTISEMENT

ಜುಲೈ 13 ರಿಂದ ರಾಷ್ಟ್ರೀಯ ಲೋಕ್‌ ಅದಾಲತ್

ಕಳೆದ ಬಾರಿ ಕಕ್ಷಿದಾರರಿಗೆ ₹ 3.23 ಕೋಟಿ ಪರಿಹಾರ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 9:57 IST
Last Updated 15 ಜೂನ್ 2019, 9:57 IST
ಪ್ರೇಮಾವತಿ ಮನಗೂಳಿ
ಪ್ರೇಮಾವತಿ ಮನಗೂಳಿ   

ಬೀದರ್: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಜುಲೈ 13ರಂದು ಜಿಲ್ಲಾ ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಅದಾಲತ್‌ನಲ್ಲಿ ರಾಜಿಯಾಗಬಲ್ಲ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುವುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಪ್ರೇಮಾವತಿ ಮನಗೂಳಿ ತಿಳಿಸಿದರು.

ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ರಾಜಿಯಾಗಬಲ್ಲ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಯಾವುದೇ ಖರ್ಚಿಲ್ಲದೇ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

ಇಲ್ಲಿ ಇತ್ಯರ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಕೋರ್ಟ್ ಮೆಟ್ಟಿಲೇರುವ ಅಗತ್ಯವಿಲ್ಲ. ಅಷ್ಟೇ ಅಲ್ಲ; ಲೋಕ್ ಅದಾಲತ್‌ನಲ್ಲಿ ಇತ್ಯರ್ಥಗೊಂಡ ಪ್ರಕರಣಗಳ ಕಕ್ಷಿದಾರರಿಗೆ ಕೋರ್ಟ್ ಶುಲ್ಕವನ್ನು ಹಿಂತಿರುಗಿಸಲಾಗುವುದು ಎಂದು ತಿಳಿಸಿದರು.

ಚೆಕ್ ಬೌನ್ಸ್‌ ಪ್ರಕರಣ, ಬ್ಯಾಂಕ್‌ ವಸೂಲಾತಿ ಪ್ರಕರಣ, ಮೋಟಾರು ವಾಹನ ಅಪಘಾತ ಪರಿಹಾರ, ಕಾರ್ಮಿಕ ವಿವಾದಗಳು, ಕೈಗಾರಿಕಾ ಕಾರ್ಮಿಕರ ವೇತನ, ವಿದ್ಯುತ್ ಹಾಗೂ ನೀರಿನ ಶುಲ್ಕ, ಭೂ ಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ರಾಜಿಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದು. ಅಲ್ಲದೆ, ವ್ಯಾಜ್ಯ ಪೂರ್ವ ಪ್ರಕರಣಗಳು, ಜಮೀನು ಕಂದಾಯಕ್ಕೆ ಸಂಬಂಧಿಸಿದಂತೆ ತಕರಾರು ಇದ್ದರೆ ಅರ್ಜಿ ನೀಡಿ ಅದನ್ನು ಪರಿಹರಿಸಿಕೊಳ್ಳಬಹುದು ಎಂದು ಹೇಳಿದರು.

ತಾಲ್ಲೂಕು ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಮತ್ತು ಒಬ್ಬರು ಹಿರಿಯ ವಕೀಲರ ನೇತೃತ್ವದಲ್ಲಿ 1 ರಿಂದ 2 ಪೀಠಗಳನ್ನು ಸ್ಥಾಪಿಸಲಾಗುವುದು. ಈ ಮೂಲಕ ಕಕ್ಷಿದಾರರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.

ಮಾರ್ಚ್ 9 ರಂದು ನಡೆದ ಲೋಕ್ ಅದಾಲತ್‌ನಲ್ಲಿ 6780 ಪ್ರಕರಣಗಳನ್ನು ರಾಜಿಸಂಧಾನ ಮೂಲಕ ಇತ್ಯರ್ಥ ಪಡಿಸಲಾಗಿದೆ. ₹ 3.23 ಕೋಟಿ ಪರಿಹಾರ ಕೊಡಲಾಗಿದೆ ಎಂದು ತಿಳಿಸಿದರು.

ಜುಲೈ 13 ರ ಅದಾಲತ್‌ನಲ್ಲಿ ರಾಜಿ ಮೂಲಕ ಬಗೆಹರಿಸಲು 1350 ಪ್ರಕರಣಗಳನ್ನು ಗುರುತಿಸಲಾಗಿದೆ. ವಕೀಲರ ಮೂಲಕ ಕಕ್ಷಿದಾರರ ಮನವೊಲಿಸಿ ಜುಲೈ 12ರವರೆಗೂ ಮತ್ತಷ್ಟು ಪ್ರಕರಣಗಳು ಲೋಕ್ ಅದಾಲತ್‌ಗೆ ಬರುವಂತೆ ಮಾಡಲಾಗುವುದು ಎಂದು ಹೇಳಿದರು.

ಕಕ್ಷಿದಾರರು ಆರಂಭದಲ್ಲಿ ಮೇಲ್ಮನವಿ ಸಲ್ಲಿಸುತ್ತ ಹೋದರೆ ಕೆಳ ಹಂತದ ನ್ಯಾಯಲಯದಿಂದ ಸುಪ್ರಿಂ ಕೋರ್ಟ್‌ ವರೆಗೂ ಮೇಲ್ಮನವಿ ಸಲ್ಲಿಸುತ್ತ ಹೋಗಬೇಕಾಗುತ್ತದೆ. ಲೋಕ್ ಅದಲಾತ್‌ನಲ್ಲಿ ಒಂದೇ ಅವಧಿಗೆ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ಕಕ್ಷಿದಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ನ್ಯಾಯಾಧೀಶರು ಮನವಿ ಮಾಡಿಕೊಂಡರು

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ, ಬೀದರ್‌ ವಕೀಲರ ಸಂಘದ ಜಗದೀಶ ಜಗತಾಪ ಹಾಗೂ ಧನರಾಜ್‌ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.