ADVERTISEMENT

ಮಹಾತ್ಮರ ಪ್ರೇರಣೆಯಿಂದ ಬಲಿಷ್ಠ ಯುವಶಕ್ತಿ: ಬಿ.ಕೆ. ಸುಶೀಲಬಾಯಿ

ಸ್ವಾಮಿ ವಿವೇಕಾನಂದರ ಜಯಂತಿ, ರಾಷ್ಟ್ರೀಯ ಯುವ ದಿನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 7:26 IST
Last Updated 16 ಜನವರಿ 2026, 7:26 IST
ಬೀದರ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಹೈದರಾಬಾದಿನ ಆಧ್ಯಾತ್ಮ ಚಿಂತಕಿ ಬಿ.ಕೆ. ಸುಶೀಲಬಾಯಿ ಉದ್ಘಾಟಿಸಿದರು
ಬೀದರ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಹೈದರಾಬಾದಿನ ಆಧ್ಯಾತ್ಮ ಚಿಂತಕಿ ಬಿ.ಕೆ. ಸುಶೀಲಬಾಯಿ ಉದ್ಘಾಟಿಸಿದರು   

ಬೀದರ್: ‘ಮಹಾತ್ಮರ ಪ್ರೇರಣೆ ಹಾಗೂ ಅವರ ತತ್ವಾದರ್ಶಗಳ ಅನುಸರಣೆಯಿಂದ ಬಲಿಷ್ಠ ಯುವಶಕ್ತಿ ನಿರ್ಮಾಣವಾಗಲು ಸಾಧ್ಯ’ ಎಂದು ಹೈದರಾಬಾದಿನ ಆಧ್ಯಾತ್ಮ ಚಿಂತಕರಾದ ಬಿ.ಕೆ. ಸುಶೀಲಬಾಯಿ ತಿಳಿಸಿದರು.

ಮೇರಾ ಯುವ ಭಾರತ್‌, ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮ ಮತ್ತು ಸ್ವಾಮಿ ವಿವೇಕಾನಂದ ಯುವಶಕ್ತಿ ಕೇಂದ್ರ ಕಾಸರತೂಗಾಂವ್‌ ಸಹಯೋಗದಲ್ಲಿ ನಗರದ ಜನವಾಡ ರಸ್ತೆಯಲ್ಲಿರುವ ಬ್ರಹ್ಮಕುಮಾರಿ ಕೇಂದ್ರ ಪಾವನಧಾಮ ಆವರಣದಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವಜನರು ಆಶಾವಾದಿಗಳಾಗಿರಬೇಕು ವಿನಃ ದುರಾಸೆ ಇರಕೂಡದು. ಯುವಜನರ ಜೀವನ ಸುಂದರಗೊಳ್ಳಲು ಜೀವನ ಕೌಶಲ ಬಹುಮುಖ್ಯ ಪಾತ್ರ ವಹಿಸುತ್ತದೆ. ಧನಾತ್ಮಕ ಚಿಂತನೆ, ಸಕಾರಾತ್ಮಕ ಗುಣ, ಮಾನವೀಯ ಮೌಲ್ಯಗಳು ವ್ಯಕ್ತಿತ್ವವನ್ನು ಶ್ರೇಷ್ಠವಾಗಿಸುತ್ತವೆ ಎಂದರು.

ADVERTISEMENT

ಕೇಂದ್ರದ ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ. ಗುರುದೇವಿ ಅಕ್ಕ ಮಾತನಾಡಿ, ಯುವಜನತೆ ಈ ದೇಶದ ಪ್ರಧಾನ ಅಸ್ತ್ರ. ಇದು ಸದ್ಬಳಕೆಯಾದರೆ ದೇಶಕ್ಕೆ ಉಳಿಗಾಲ. ಇಲ್ಲವಾದರೆ ಸಂಚಕಾರ. ಯುವಜನತೆ ತಮ್ಮ ಶೈಕ್ಷಣಿಕ ಬದುಕಿನ ಜೊತೆಗೆ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸಿದರೆ ವಿವೇಕಾನಂದರ ಕನಸು ಸಾಕಾರಗೊಳ್ಳಲು ಸಾಧ್ಯ ಎಂದು ತಿಳಿಸಿದರು.

ಜಹೀರಾಬಾದ್ ಬ್ರಹ್ಮಕುಮಾರಿ ಕೇಂದ್ರದ ಸಂಚಾಲಕಿ ಬಿ.ಕೆ. ಉಷಾ ಅಕ್ಕ ಮಾತನಾಡಿ, ಇಂದು ಯುವಶಕ್ತಿ ವಿದೇಶಿ ವ್ಯಾಮೋಹ ಮತ್ತು ನಶೆಯಲ್ಲಿ ತೇಲಾಡುತ್ತಿದೆ. ಪಾಲಕರಿಗೆ ಆಸರೆಯಾಗಬೇಕಿರುವ ಯುವ ಸಂಪತ್ತು ಕಾಪಾಡಬೇಕಿದೆ. ನಿತ್ಯ ಯೋಗ, ಧ್ಯಾನ ಹಾಗೂ ಆಧ್ಯಾತ್ಮದ ಜೊತೆಗೆ ಮಹಾತ್ಮರ ಚರಿತ್ರೆ ಓದಬೇಕೆಂದು ಹೇಳಿದರು.

ಮೇರಾ ಯುವ ಭಾರತ್‌ ಇಲಾಖೆಯ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗರ್ಮೆ, ಕೇಂದ್ರದ ಬಿ.ಕೆ. ಮಂಗಲಾ ಬಹೇನಜಿ ಮಾತನಾಡಿದರು. ನೃತ್ಯ ಕಲಾವಿದರಾದ ಶೀತಲ್‌ ಪಾಂಚಾಳ ಹಾಗೂ ವಿದ್ಯಾರ್ಥಿಗಳು ನೃತ್ಯ ಗಾಯನ ನಡೆಸಿಕೊಟ್ಟರು. ರೇಣುಕಾ ಬಹೇನ್‌ಜಿ ಸ್ವಾಗತಿಸಿ, ನಿರೂಪಿಸಿದರು. ಸ್ವಾಮಿ ವಿವೇಕಾನಂದ ಯುವಶಕ್ತಿ ಕೇಂದ್ರದ ಅಧ್ಯಕ್ಷ ಶಿವಕುಮಾರ ಸ್ವಾಮಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.