ADVERTISEMENT

ಬೀದರ್‌ | ನೈಸರ್ಗಿಕ ಕೃಷಿಯಿಂದ ಹೆಚ್ಚಿನ ಇಳುವರಿ: ವೈಜನಾಥ ನಿಡೋದೆ

ಐದು ದಿನಗಳ ಕೃಷಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 5:36 IST
Last Updated 14 ನವೆಂಬರ್ 2025, 5:36 IST
ಕಾರ್ಯಕ್ರಮದಲ್ಲಿ ಗೋಮೂತ್ರ, ಗಂಜಳ ಹಾಗೂ ನೈಸರ್ಗಿಕ ಕೃಷಿಗೆ ಅಗತ್ಯವಾದ ಇತರೆ ವಸ್ತುಗಳನ್ನು ಬಿಡುಗಡೆಗೊಳಿಸಲಾಯಿತು
ಕಾರ್ಯಕ್ರಮದಲ್ಲಿ ಗೋಮೂತ್ರ, ಗಂಜಳ ಹಾಗೂ ನೈಸರ್ಗಿಕ ಕೃಷಿಗೆ ಅಗತ್ಯವಾದ ಇತರೆ ವಸ್ತುಗಳನ್ನು ಬಿಡುಗಡೆಗೊಳಿಸಲಾಯಿತು   

ಬೀದರ್‌: ನೈಸರ್ಗಿಕ ಕೃಷಿ ಕುರಿತ ಐದು ದಿನಗಳ ತರಬೇತಿ ಕಾರ್ಯಕ್ರಮಕ್ಕೆ ನಗರದ ತೋಟಗಾರಿಕೆ ಕಾಲೇಜಿನಲ್ಲಿ ಗುರುವಾರ ಚಾಲನೆ ನೀಡಲಾಯಿತು.

ತೋಟಗಾರಿಕೆ ಕಾಲೇಜು, ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ವೈಜನಾಥ ನಿಡೋದೆ ಮಾತನಾಡಿ, ನೈಸರ್ಗಿಕ ಕೃಷಿ ಮಾಡಿ ಅಂತ ಹೇಳುವುದು ಬಹಳ ಸುಲಭ. ಆದರೆ, ಪ್ರಾಯೋಗಿಕವಾಗಿ ಮಾಡುವುದು ಬಹಳ ಕಷ್ಟಕರವಾದುದು. ದೇಶಿ ತಳಿಯ ಗೋವು ಸಾಕಿದರೆ ಮಾತ್ರ ನೈಸರ್ಗಿಕ ಕೃಷಿ ಸಾಧ್ಯ. ಜೀವಾಮೃತ ಸಿದ್ಧಪಡಿಸಿ ಬೆಳೆಗಳಿಗೆ ಉಪಯೋಗಿಸಬೇಕು ಎಂದರು.

ಶೂನ್ಯ ಬಂಡವಾಳದಲ್ಲಿ ಅಧಿಕ ಇಳುವರಿ ಪಡೆಯಲಾಗುತ್ತಿದೆ. ಇಂತಹ ತರಬೇತಿಯಿಂದ ಮಾಹಿತಿ ಪಡೆದು ಹೆಚ್ಚಿನ ರೀತಿಯಲ್ಲಿ ರೈತರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡರೆ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬಹುದು. ನೈಸರ್ಗಿಕವಾಗಿ ಬೆಳೆದ ಉತ್ಪನ್ನಗಳನ್ನು ಬಳಸುವುದರಿಂದ ಆರೋಗ್ಯದಿಂದ ಇರಬಹುದು ಎಂದು ಹೇಳಿದರು.

ADVERTISEMENT

ತೋಟಗಾರಿಕೆ ಕಾಲೇಜಿನ ಡೀನ್‌ ಎಸ್.ವಿ. ಪಾಟೀಲ ಮಾತನಾಡಿ, ನೈಸರ್ಗಿಕ ಕೃಷಿ ಪದ್ಧತಿಯು ಅಧಿಕ ರಾಸಾಯನಿಕ ಬಳಕೆಯಿಂದ ಕೂಡಿರುವ ರಾಸಾಯನಿಕ ಕೃಷಿ ಪದ್ಧತಿಗಿಂತ ಭಿನ್ನವಾದುದು. ರೈತನ ಹೊಲದಲ್ಲಿರುವ ನೈಸರ್ಗಿಕ ಪರಿಕರಗಳನ್ನು ಉಪಯೋಗಿಸಿ ಸುಸ್ಥಿರ ಕೃಷಿ ಮಾಡಿ ರೈತರು ಲಾಭದಾಯಕ ಕೃಷಿ ಮಾಡಬಹುದು ಎಂದರು.

ನೈಸರ್ಗಿಕ ಕೃಷಿಯು ನಾಲ್ಕು ಮೂಲ ತತ್ವಗಳಾದ ಬೀಜಾಮೃತ, ಜೀವಾಮೃತ, ಬೆಳೆಗಳ ಹೊದಿಕೆ ಮತ್ತು ವಾಪಸಾ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ರಸಾಯನಿಕ ಗೊಬ್ಬರ, ಕೀಟ ಮತ್ತು ರೋಗಗಳನ್ನು ರಾಸಾಯನಿಕ ಕೀಟನಾಶಕ / ರೋಗನಾಶಕಗಳನ್ನು ಬಳಸದೆ, ನೈಸರ್ಗಿಕವಾಗಿ ಸಿಗುವ ಸಸ್ಯ ಜನ್ಯ ಕೀಟನಾಶಕಗಳು, ಹಸುವಿನ ಗಂಜಲ, ಗೋಮೂತ್ರ, ಬೆಲ್ಲ, ದ್ವಿದಳ ಧಾನ್ಯಗಳ ಹಿಟ್ಟಿನ ಮಿಶ್ರಣಗಳ ಬಳಕೆಯನ್ನು ಅಳವಡಿಸಿ ಬೆಳೆಗಳಿಗೆ ಅಗತ್ಯ ಪೋಷಕಾಂಶ ಒದಗಿಸಿ, ಮಣ್ಣು ಹದಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್. ಮಾತನಾಡಿ, ರೈತರು ಸಾಂಪ್ರದಾಯಿಕ ಕೃಷಿಯಿಂದ ಹೊರಬರಬೇಕು. ಏಕ ಕೃಷಿ ಪದ್ಧತಿಗೆ ಜೋತು ಬೀಳದೆ ಹೊಸ ಪ್ರಯೋಗಗಳನ್ನು ಕೈಗೊಳ್ಳಬೇಕು. ಕೃಷಿ ಬೆಳೆಗಳಲ್ಲಿ ಅತೀ ಹೆಚ್ಚು ರಾಸಾಯನಿಕ ಕೀಟಗಾಶಕ ಮತ್ತು ಗೊಬ್ಬರಗಳನ್ನು ಬಳಕೆ ಮಾಡುತ್ತಿರುವುದರಿಂದ ಹವಾಮಾನದಲ್ಲಿ ವೈಪರೀತ್ಯ ಉಂಟಾಗಿ, ಮಾನವನ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ ಎಂದರು.

ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿಶ್ವನಾಥ ಜಿಳ್ಳೆ ಮಾತನಾಡಿ, ಸಾವಯವ ಕೃಷಿಯು ಮಣ್ಣಿನ ಗುಣಮಟ್ಟವನ್ನು ಕಾಪಾಡಿ, ಉತ್ತಮ ಫಲಿತಾಂಶ ನೀಡುತ್ತದೆ. ಸಾವಯವ ಕೃಷಿಯ ಮೂಲಕ ಬೆಳೆದ ಬೆಳೆ ವಿಪುಲವಾದ ಪೋಷಕಾಂಶಗಳಿಂದ ತುಂಬಿರುತ್ತದೆ. ಇದು ಆಹಾರದ ನೈಸರ್ಗಿಕ ರುಚಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಸಹಾಯಕ ಪ್ರಾಧ್ಯಾಪಕ ವಿ.ಪಿ. ಸಿಂಗ್‌, ಸಹ ಸಂಯೋಜಕ ಅಂಬರೀಶ, ಅರವಿಂದಕುಮಾರ, ಕಾರ್ಯಕ್ರಮದ ಸಂಯೋಜಕ ವಿಜಯಮಹಾಂತೇಶ, ಅರವಿಂದಕುಮಾರ ರಾಠೋಡ್‌, ಅಬ್ದುಲ್ ಕರೀಂ ಹಾಜರಿದ್ದರು. ಕಾಲೇಜು ವಿದ್ಯಾರ್ಥಿನಿಯರಾದ ಪೂಜಾ ಮತ್ತು ಸುಮಲತಾ ಪ್ರಾರ್ಥಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.