ADVERTISEMENT

ಸುಧಾರಣೆಗೆ ಪೂರಕ ಕವನಗಳು ಬರಲಿ

ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷೆ ಪಾರ್ವತಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 6:38 IST
Last Updated 18 ಜುಲೈ 2019, 6:38 IST
ಬೀದರ್‌ನಲ್ಲಿ ಬುಧವಾರ ದೇಶಪಾಂಡೆ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಬುಧವಾರ ಆಯೋಜಿಸಿದ್ದ ಕವಿಗೋಷ್ಠಿ ಹಾಗೂ ಸನ್ಮಾನ ಸಮಾರಂಭದಲ್ಲಿ ಸಾಹಿತಿ ದೇಶಾಂಶ ಹುಡುಗಿ ಮಾತನಾಡಿದರು
ಬೀದರ್‌ನಲ್ಲಿ ಬುಧವಾರ ದೇಶಪಾಂಡೆ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಬುಧವಾರ ಆಯೋಜಿಸಿದ್ದ ಕವಿಗೋಷ್ಠಿ ಹಾಗೂ ಸನ್ಮಾನ ಸಮಾರಂಭದಲ್ಲಿ ಸಾಹಿತಿ ದೇಶಾಂಶ ಹುಡುಗಿ ಮಾತನಾಡಿದರು   

ಬೀದರ್‌: ‘ಕವಿಗಳು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಹ ಹಾಗೂ ಸುಧಾರಣೆಗೆ ಪೂರಕವಾದ ಕವನಗಳನ್ನು ರಚಿಸುವ ಅಗತ್ಯ ಇದೆ’ ಎಂದು ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷೆ ಪಾರ್ವತಿ ಸೋನಾರೆ ಹೇಳಿದರು.

ನಗರದ ಲಕ್ಷ್ಮೀಬಾಯಿ ಕಮಠಾಣೆ ಕನ್ಯಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ದೇಶಪಾಂಡೆ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಬಧವಾರ ಆಯೋಜಿಸಿದ್ದ ಕವಿಗೋಷ್ಠಿ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಷ್ಟ್ರಕವಿ ಕುವೆಂಪು ಅವರು ಪ್ರಕೃತಿಯ ಮಡಿಲಲ್ಲಿ ಬೆಳೆದು ನಿಸರ್ಗದ ಕುರಿತಾಗಿಯೇ ಅನೇಕ ಕವಿತೆಗಳನ್ನು ಬರೆದರು. ಬೀದರ್‌ ಜಿಲ್ಲೆಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದೆ. ಇದನ್ನೇ ಆಧಾರವಾಗಿಟ್ಟು ಕವನಗಳನ್ನು ರಚಿಸಿದರೆ ಒಂದು ಕಾಲದ ಸ್ಥಿತಿಗತಿಯ ಮೇಲೂ ಬೆಳಕು ಚೆಲ್ಲಿದಂತೆ ಆಗಲಿದೆ’ ಎಂದು ತಿಳಿಸಿದರು.

ADVERTISEMENT

‘ಕವಿತೆ ಬರೆಯಲು ಯಾವುದೇ ಪಾಂಡಿತ್ಯ ಬೇಕಾಗಿಲ್ಲ. ಜನಪದರು ಪಾಂಡಿತ್ಯ ಇಲ್ಲದಿದ್ದರೂ ಅನೇಕ ತ್ರಿಪದಿಗಳನ್ನು ಕೊಟ್ಟಿದ್ದಾರೆ. ಚೌಕಟ್ಟು ಮೀರಿ ಕವನಗಳನ್ನು ಬರೆಯಲು ಪ್ರಯತ್ನಿಸಿದರೆ ಅದು ಹೊಸ ರೂಪ ಪಡೆದುಕೊಳ್ಳುತ್ತದೆ. ಹರಿಹರ ಚೌಕಟ್ಟು ಮೀರಿ ಬರೆದಿದ್ದಕ್ಕಾಗಿ ಅದು ರಗಳೆಯಾಗಿ ಗುರುತಿಸಿಕೊಂಡಿತು’ ಎಂದರು.

‘ಕವಿಗಳು ಅಧ್ಯಯನಶೀಲರಾಗುವ ಜತೆಗೆ ಜೀವಪರವಾದ ಕವನಗಳನ್ನು ಬರೆಯಬೇಕು. ಸಾಮಾಜಿಕ ಸಮಸ್ಯೆಗಳಿಗೆ ಬರಹ ರೂಪದಲ್ಲಿ ಸ್ಪಂದಿಸಬೇಕು. 80ನೇ ವಯಸ್ಸಿನಲ್ಲಿ ಯೌವವ್ವನದ ಬಗ್ಗೆ ಬರೆದರೂ ಕವಿಯಲ್ಲಿನ ಕ್ರಿಯಾಶೀಲತೆಯನ್ನು ಗುರುತಿಸಬೇಕು. ವಯಸ್ಸನ್ನು ಮಾನದಂಡವಾಗಿ ಇಟ್ಟುಕೊಂಡು ಟೀಕಿಸಬಾರದು’ ಎಂದು ಹೇಳಿದರು.

‘ಇಂದು ಎಡ ಹಾಗೂ ಬಲದ ಹೆಸರಲ್ಲಿ ಕವನಗಳು ರಚನೆಯಾಗುತ್ತಿರುವುದು ಅಥವಾ ಗುರುತಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಎಡ,ಬಲದ ಘರ್ಷಣೆಯಲ್ಲಿ ಸಾವು ಸಂಭವಿಸಿದರೆ ಕೊನೆಗೆ ನೋವು ಅನುಭವಿಸುವವಳು ತಾಯಿ. ತಾಯ್ತತನಕ್ಕೆ ಎಡ, ಬಲದ ಬೇಧವಿಲ್ಲ. ಕವನ ಬರೆಯುವವರಲ್ಲಿ ತಾಯ್ತನ ಜಾಗೃತಗೊಂಡರೆ ಅದು ಇನ್ನಷ್ಟು ಗಟ್ಟಿತನ ಪಡೆದುಕೊಳ್ಳುತ್ತದೆ’ಎಂದು ತಿಳಿಸಿದರು.

ಕವಿಗೋಷ್ಠಿ ಉದ್ಘಾಟಿಸಿದ ಸಾಹಿತಿ ದೇಶಾಂಶ ಹುಡುಗಿ, ‘ಕವಿಗಳು ಸಾಧಕರ ಬಗ್ಗೆ ಕವಿತೆಗಳನ್ನು ರಚಿಸಿದರೆ ಅವರಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ’ ಎಂದು ಹೇಳಿದರು.


ಪ್ರೊ.ದೇವೇಂದ್ರ ಕಮಲ್‌ ಮಾತನಾಡಿ, ‘ಸೌಂದರ್ಯ ಪ್ರೇರಣೆ ಇದ್ದರೆ ಕವನ ಜನಮನ ಗೆಲ್ಲುತ್ತದೆ’ ಎಂದರು.
ಅರವಿಂದ ಕುಲಕರ್ಣಿ ಮಾತನಾಡಿ, ‘ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯ ಕಳೆಯಬಾರದು. ಓದು, ಬರಹಕ್ಕೆ ಹತ್ತಿರವಾಗಿದ್ದರೆ ಉತ್ತಮ ಕವಿತೆಗಳು ಬರುತ್ತವೆ’ ಎಂದು ಹೇಳಿದರು.


ಮುಖ್ಯ ಅತಿಥಿಗಳಾಗಿ ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಅರವಿಂದ ಕುಲಕರ್ಣಿ ಪಾಲ್ಗೊಂಡಿದ್ದರು.


ರಾಷ್ಟ್ರೀಯ ಫೆಲೋಶಿಪ್ ಪುರಸ್ಕೃತ ಮಹಾರುದ್ರ ಡಾಕುಳಗಿ ಹಾಗೂ ರಾಜ್ಯ ಸಂಘಟನಾ ಚತುರ ಪ್ರಶಸ್ತಿ ಪುರಸ್ಕೃತ ಸಂಗಮೇಶ ಜ್ಯಾಂತೆ ಅವರನ್ನು ಸನ್ಮಾನಿಸಲಾಯಿತು. ದೇಶಪಾಂಡೆ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹಿರಿಯ ಪತ್ರಕರ್ತ ಚಂದ್ರಕಾಂತ ಮಸಾನಿ ಅವರಿಗೆ ‘ಪತ್ರಿಕಾ ಚೂಡಾಮಣಿ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಎಸ್‌.ಬಿ.ಕುಚಬಾಳ, ನಿರಂಕಾರ ಬಂಡಿ, ಅಜೀತ ಎನ್., ರವಿದಾಸ ಕಾಂಬಳೆ, ಚೆನ್ನಪ್ಪ ಸಂಗೋಳಗಿ, ಲಕ್ಷ್ಮಣರಾವ್‌ ಕಾಂಚೆ , ಕೀರ್ತಿಲತಾ ಹೊಸಹಳ್ಳಿ, ಎಸ್‌.ಎಸ್‌.ಹೊಡಮನಿ, ಅವಿನಾಶ ಸೋನೆ ಕವನ ವಾಚಿಸಿದರು.

ಮೇನಕಾ ಪಾಟೀಲ ಆಶಯ ಭಾಷಣ ಮಾಡಿದರು. ದೇಶಪಾಂಡೆ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಎಂ.ಜಿ. ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಭದ್ರಪ್ಪ ಉಪ್ಪಿನ ಇದ್ದರು.
ಓಂಕಾರ ಪಾಟೀಲ ಸ್ವಾಗತಿಸಿದರು. ಶ್ರೇಯಾ ಮಹೇಂದ್ರಕರ್ ನಿರೂಪಿಸಿದರು. ಜಗದೇವಿ ತಿಬಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.