ಬೀದರ್: ‘ನೇಕಾರ ಸಮುದಾಯದಿಂದ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತ್ಯೇಕ ಜಾತಿ ಗಣತಿ ಸಮೀಕ್ಷೆ ಕೈಗೊಳ್ಳಲಾಗುವುದು’ ಎಂದು ನೇಕಾರ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್ ಸೋಮಶೇಖರ್ ತಿಳಿಸಿದರು.
ರಾಜ್ಯದಲ್ಲಿ ನೇಕಾರ ಸಮಾಜದವರು 9.28 ಲಕ್ಷ ಜನರಿದ್ದಾರೆ ಎಂದು ಕಾಂತರಾಜ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ವಾಸ್ತವವಾಗಿ ಒಟ್ಟು 45ರಿಂದ 50 ಲಕ್ಷ ಜನಸಂಖ್ಯೆ ಇದೆ. ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಹೊಸ ಆ್ಯಪ್ ಬಿಡುಗಡೆ ಮಾಡಿ ಸ್ಥಳೀಯ ಅಧ್ಯಕ್ಷರಿಗೆ ಅಲ್ಲಿನ ನಮ್ಮ ಸಮುದಾಯದ ಪ್ರತಿಯೊಂದು ಮನೆಗಳ ಸಮೀಕ್ಷೆ ಮಾಡಿ, ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ರಾಜ್ಯ ಸರ್ಕಾರ ಸಾಮಾಜಿಕ, ಶೈಕ್ಷಣಿಕ ಗಣತಿ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಸಮುದಾಯದ ಹಿತದೃಷ್ಟಿಯಿಂದ ಪ್ರತ್ಯೇಕ ಸಮೀಕ್ಷೆ ಮಾಡುತ್ತಿದ್ದೇವೆ. ಸರ್ಕಾರ ಸಮೀಕ್ಷೆ ವರದಿ ಆದಷ್ಟು ಶೀಘ್ರ ಬಿಡುಗಡೆ ಮಾಡಬೇಕು. ಹಿಂದಿನಂತೆ 10 ವರ್ಷ ಕಳೆಯಬಾರದು. ಬರುವ ದಿನಗಳಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನೇಕಾರ ಸಮುದಾಯ ಭವನ ನಿರ್ಮಿಸಲಾಗುವುದು ಎಂದರು.
ಸಮಾಜದ ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ ಭಂಡಾರೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ಪ ಶೆಟ್ಟಿ, ರಾಜ್ಯ ಖಜಾಂಚಿ ನವೀನ್ ಚಿಲ್ಲಾಳ, ರಾಜ್ಯ ಕಾರ್ಯದರ್ಶಿ ವಿ.ಟಿ. ಪಿಚಾಡಿ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಉಮಾ ಜಗದೀಶ, ರಾಜ್ಯ ಕಾರ್ಯಾಧ್ಯಕ್ಷೆ ಶೋಭಾ ಮುರಳಿಕೃಷ್ಣ, ಪ್ರಧಾನ ಕಾರ್ಯದರ್ಶಿ ಹೇಮಲತಾ, ನಿರ್ದೇಶಕಿ ಉಮಾದೇವಿ, ಜ್ಯೋತಿ ಸರೋದೆ, ಶಿಲ್ಪಾ, ಉಪಾಧ್ಯಕ್ಷೆ ರುಕ್ಮಿಣಿ ಸಂಗಾ, ಆರ್.ಸಿ ಘಾಳೆ, ಜಿಲ್ಲಾಧ್ಯಕ್ಷ ಸೋಮಶೇಖರ ಅಮಲಾಪುರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.