ADVERTISEMENT

ಬೀದರ್‌: ವರ್ಷದ ಮೊದಲ ದಿನ ಪೂಜೆ, ಪ್ರಾರ್ಥನೆ

ಮಧ್ಯರಾತ್ರಿವರೆಗೆ ಕುಣಿದು ಕುಪ್ಪಳಿಸಿ ಹೊಸ ವರ್ಷ ಬರಮಾಡಿಕೊಂಡ ಜನರು

​ಪ್ರಜಾವಾಣಿ ವಾರ್ತೆ
Published 2 ಜನವರಿ 2025, 4:56 IST
Last Updated 2 ಜನವರಿ 2025, 4:56 IST
ಬೀದರ್‌ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಮಧ್ಯರಾತ್ರಿ ಏರ್ಪಡಿಸಿದ್ದ ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಯುವತಿಯರು ಸಂಭ್ರಮಿಸಿದರು
ಬೀದರ್‌ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಮಧ್ಯರಾತ್ರಿ ಏರ್ಪಡಿಸಿದ್ದ ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಯುವತಿಯರು ಸಂಭ್ರಮಿಸಿದರು   

ಬೀದರ್‌: ಹೊಸ ವರ್ಷದ ಮೊದಲ ದಿನವಾದ ಬುಧವಾರ ನಗರ ಸೇರಿದಂತೆ ಜಿಲ್ಲೆಯ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಕ್ರೈಸ್ತ ಧರ್ಮೀಯರು ಚರ್ಚ್‌ಗಳಲ್ಲಿ ಪ್ರಾರ್ಥನೆ ಮಾಡಿದರು.

ನಗರದ ಪಾಪನಾಶ ದೇವಸ್ಥಾನ, ಜನವಾಡ ರಸ್ತೆಯ ಹನುಮಾನ ದೇವಸ್ಥಾನ, ಹೊನ್ನಿಕೇರಿ ಸಿದ್ದೇಶ್ವರ ದೇವಸ್ಥಾನ, ಮೈಲಾರ ಮಲ್ಲಣ್ಣ ದೇವಸ್ಥಾನಗಳಿಗೆ ವಿವಿಧ ಭಾಗಗಳಿಂದ ಜನ ತೆರಳಿ ದೇವರ ದರ್ಶನ ಪಡೆದರು. ಬೆಳಗಿನ ಜಾವವೇ ಎಲ್ಲ ದೇವಸ್ಥಾನಗಳಲ್ಲಿ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು.

ಇನ್ನು, ನಗರದ ಸೇಂಟ್‌ ಪಾಲ್‌ ಮೆಥೋಡಿಸ್ಟ್‌ ಚರ್ಚ್‌, ನಾವದಗೇರಿ, ಶಹಾಪುರ ಗೇಟ್‌ ಸಮೀಪದ ಚರ್ಚ್‌ಗಳಲ್ಲಿ ಮಂಗಳವಾರ ಮಧ್ಯರಾತ್ರಿಯಿಂದಲೇ ಪ್ರಾರ್ಥನಾ ಸಭೆಗಳು ಆರಂಭಗೊಂಡವು. ಬುಧವಾರ ಮಧ್ಯಾಹ್ನದವರೆಗೆ ಜನ ವಿವಿಧ ಕಡೆಗಳಿಂದ ಬಂದು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಹೊಸ ವರ್ಷಕ್ಕೆ ಹೊಸ ಸಂಕಲ್ಪ ಮಾಡಿದರು.

ADVERTISEMENT

ನಗರದ ಪಾಪನಾಶ ಸಮೀಪದ ಬಸವಗಿರಿಯಲ್ಲಿ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಗಂಗಾಂಬಿಕೆಯವರು ವಿಶೇಷ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು.

ಮಂಗಳವಾರ ಸಂಜೆಯಿಂದಲೇ ಹೊಸ ವರ್ಷಾಚರಣೆಯ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಕೆಲವು ಜನ ಕೇಕ್‌ಗಳನ್ನು ಕೊಂಡೊಯ್ದು ಮನೆಯಲ್ಲಿಯೇ ಕುಟುಂಬ ಸದಸ್ಯರೊಂದಿಗೆ ಹೊಸ ವರ್ಷ ಆಚರಿಸಿದರು. ರಾತ್ರಿ ಹತ್ತು ಗಂಟೆಯಿಂದ 12ರವರೆಗೆ ಡಿಜೆ ಹಾಡಿಗೆ ಮೈಮರೆತು ಕುಣಿದು ಕುಪ್ಪಳಿಸಿದರು. ಹೋಟೆಲ್, ರೆಸಾರ್ಟ್‌ ಹಾಗೂ ಹೋಂ ಸ್ಟೇಗಳಲ್ಲೂ ಹೊಸ ವರ್ಷಾಚರಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದವರು ಪಾಲ್ಗೊಂಡಿದ್ದರು.

ಮಧ್ಯರಾತ್ರಿ 12ಗಂಟೆಯಾಗುತ್ತಿದ್ದಂತೆ ಆಕಾಶದಲ್ಲೆಲ್ಲಾ ಪಟಾಕಿಗಳ ಚಿತ್ತಾರ ಕಾಣಿಸಿತು. ಎಲ್ಲೆಡೆಯಿಂದ ಡಂ..ಡಂ ಎಂಬ ಪಟಾಕಿ ಶಬ್ದ ಕೇಳಿಸಿತು. ಸುಮಾರು ಅರ್ಧಗಂಟೆಯವರೆಗೂ ಪಟಾಕಿಗಳನ್ನು ಸಿಡಿಸಿದರು. ಕೇಕ್‌ ಕತ್ತರಿಸಿ, ಸಿಹಿ ತಿಂದು, ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಚಳಿಯ ಪ್ರಮಾಣ ಜಾಸ್ತಿಯಿದ್ದ ಕಾರಣ ಹಿಂದಿನಷ್ಟು ಸಡಗರ ಈ ವರ್ಷ ಕಂಡು ಬರಲಿಲ್ಲ. ಹೆಚ್ಚಿನವರು ಮನೆಯಿಂದ ಹೊರಗೆ ಬರಲಿಲ್ಲ. ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿಯೇ ಹೆಚ್ಚು ಜನ ಹೊಸ ವರ್ಷ ಆಚರಿಸಿದರು.

ಮಧ್ಯರಾತ್ರಿ ಗಾಳಿಯಲ್ಲಿ ಬಲೂನ್‌ ಬಿಟ್ಟು ಸಂಭ್ರಮಿಸಿದ ಜನ
ಕೇಕ್‌ ಕತ್ತರಿಸಿ ಸಂಭ್ರಮಿಸಿದ ಚಿಣ್ಣರು
ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ ಜನ –ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.