ADVERTISEMENT

ಸೈನಿಕರಂತೆ ಕೆಲಸ ನಿರ್ವಹಿಸುವ ಪತ್ರಿಕಾ ವಿತರಕರು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 4 ಸೆಪ್ಟೆಂಬರ್ 2025, 6:19 IST
Last Updated 4 ಸೆಪ್ಟೆಂಬರ್ 2025, 6:19 IST
ಆಯಾ ಬಡಾವಣೆಗಳ ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸಲು ಬೆಳಗಿನಜಾವ ಬೀದರ್‌ನ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದ ಮಳಿಗೆಗಳ ಎದುರು ಪತ್ರಿಕಾ ಏಜೆಂಟರು ಹಾಗೂ ವಿತರಕರು ಪತ್ರಿಕೆಗಳನ್ನು ಜೋಡಿಸುವ ಕೆಲಸದಲ್ಲಿ ನಿರತರಾಗುತ್ತಾರೆ
ಪ್ರಜಾವಾಣಿ ಚಿತ್ರ: ಲೋಕೇಶ ವಿ. ಬಿರಾದಾರ
ಆಯಾ ಬಡಾವಣೆಗಳ ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸಲು ಬೆಳಗಿನಜಾವ ಬೀದರ್‌ನ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದ ಮಳಿಗೆಗಳ ಎದುರು ಪತ್ರಿಕಾ ಏಜೆಂಟರು ಹಾಗೂ ವಿತರಕರು ಪತ್ರಿಕೆಗಳನ್ನು ಜೋಡಿಸುವ ಕೆಲಸದಲ್ಲಿ ನಿರತರಾಗುತ್ತಾರೆ ಪ್ರಜಾವಾಣಿ ಚಿತ್ರ: ಲೋಕೇಶ ವಿ. ಬಿರಾದಾರ   

ಬೀದರ್‌: ದೇಶದ ಗಡಿ ಭಾಗದಲ್ಲಿ ಬಿಸಿಲು, ಮಳೆ, ಚಳಿ ಲೆಕ್ಕಿಸದೇ ಹಗಲು–ರಾತ್ರಿ ವರ್ಷವಿಡೀ ಕೆಲಸ ನಿರ್ವಹಿಸುವ ಯೋಧರಂತೆ ಪತ್ರಿಕಾ ವಿತರಕರದ್ದು ಕೂಡ ತ್ಯಾಗದ ಕಾರ್ಯ.

ಎಂತಹುದೇ ಪ್ರತಿಕೂಲ ಸನ್ನಿವೇಶವಿದ್ದರೂ ತಮ್ಮ ಜವಾಬ್ದಾರಿಯಿಂದ ಹಿಂದಡಿ ಇರಿಸುವುದಿಲ್ಲ. ಸೈನಿಕರಂತೆ ಇವರು ಕೂಡ ಶಿಸ್ತು, ಸಮಯ ಪಾಲನೆ ಹಾಗೂ ಬದ್ಧತೆಗೆ ಹೆಸರಾಗಿದ್ದಾರೆ. ವಾಸ್ತವದಲ್ಲಿ ಇವರೇ ದಿನಪತ್ರಿಕೆಗಳ ಮುಖ್ಯ ಜೀವಾಳ ಎಂದರೂ ತಪ್ಪಾಗಲಾರದು.

ಪತ್ರಿಕಾ ವರದಿಗಾರರು ಹಳ್ಳಿಯಿಂದ ದಿಲ್ಲಿವರೆಗೆ ನಡೆಯುವ ಘಟನೆಗಳ ಕುರಿತು ಸುದ್ದಿ ಸಂಗ್ರಹ ಮಾಡಿ ಡೆಸ್ಕ್‌ಗೆ ಕಳುಹಿಸುತ್ತಾರೆ. ಡೆಸ್ಕ್‌ನಲ್ಲಿ ಉಪಸಂಪಾದಕರು, ಪುಟ ವಿನ್ಯಾಸ ಮಾಡುವವರು ಸುದ್ದಿ, ಚಿತ್ರಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಅಂದವಾಗಿ ಪುಟಗಳನ್ನು ಮಾಡುತ್ತಾರೆ. ಬಳಿಕ ಅದನ್ನು ಮುದ್ರಣಕ್ಕೆ ಕಳುಹಿಸಿಕೊಡಲಾಗುತ್ತದೆ. ಬಳಿಕ ಆಯಾ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ ಸೇರಿದಂತೆ ಎಲ್ಲ ಕಡೆಗಳಲ್ಲಿರುವ ಏಜೆಂಟರು, ಪತ್ರಿಕಾ ವಿತರಕರಿರುವ ಸ್ಥಳಗಳಿಗೆ ಬಸ್‌, ವ್ಯಾನ್‌, ಜೀಪುಗಳಲ್ಲಿ ಪತ್ರಿಕೆಗಳ ಬಂಡಲ್‌ಗಳನ್ನು ಕಳುಹಿಸಿಕೊಡಲಾಗುತ್ತದೆ. ಆನಂತರ ಅವುಗಳನ್ನು ವ್ಯವಸ್ಥಿತವಾಗಿ ಜೋಡಿಸಿಕೊಂಡು, ಆಯಾ ಬಡಾವಣೆಗಳಿಗೆ ಎಷ್ಟು ಪತ್ರಿಕೆಗಳು ಬೇಕೋ ಅಷ್ಟನ್ನು ಪ್ರತ್ಯೇಕವಾಗಿ ವಿಂಗಡಿಸಿ, ಕಳುಹಿಸುವ ವ್ಯವಸ್ಥೆ ಮಾಡುತ್ತಾರೆ.

ADVERTISEMENT

ಜನರೆಲ್ಲ ಗಾಢ ನಿದ್ರೆಯಲ್ಲಿರುವಾಗಲೇ ಏಜೆಂಟರು, ಪತ್ರಿಕಾ ವಿತರಕರ ಕೆಲಸ ಶುರುವಾಗುತ್ತದೆ. ನಿತ್ಯ ತಡರಾತ್ರಿ 2ರಿಂದ 3 ಗಂಟೆಯ ನಡುವೆ ಪತ್ರಿಕೆಗಳು ಬರುತ್ತವೆ. ಅಷ್ಟರಲ್ಲಾಗಲೇ ಅವರು ಕೆಲಸಕ್ಕೆ ಅಣಿಯಾಗಿರುತ್ತಾರೆ. ಎಷ್ಟೇ ಮಳೆ, ಗಾಳಿ, ಚಳಿಯಿದ್ದರೂ ಅದನ್ನು ಲೆಕ್ಕಿಸುವುದಿಲ್ಲ. ನಸುಕಿನ ಜಾವದಲ್ಲೇ ಬೈಸಿಕಲ್‌, ಬೈಕುಗಳ ಮೇಲೆ ಪ್ರತಿಯೊಂದು ಬಡಾವಣೆಗಳಿಗೆ ತೆರಳಿ ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸುತ್ತಾರೆ. ನಿತ್ಯವೂ ನಿರ್ದಿಷ್ಟ ಸಮಯದೊಳಗೆ ಪತ್ರಿಕೆಗಳನ್ನು ಮುಟ್ಟಿಸುತ್ತಾರೆ. ಜನ ಇನ್ನೂ ಎಚ್ಚರಗೊಂಡಿರುವುದಿಲ್ಲ. ಅಷ್ಟರೊಳಗೆ ಜನರ ಮನೆಯ ಅಂಗಳದಲ್ಲಿ ಪತ್ರಿಕೆ ಕಾಣಿಸಿಕೊಳ್ಳುತ್ತದೆ. ಇವರ ಅವಿರತ ಶ್ರಮದಿಂದ ಬೆಳ್ಳಂಬೆಳಿಗ್ಗೆ ಜನ ಬಿಸಿ ಬಿಸಿ ಚಹಾ ಹೀರುತ್ತ ಜಗತ್ತಿನಲ್ಲಾಗುವ ವಿದ್ಯಮಾನಗಳನ್ನು ಪತ್ರಿಕೆಗಳ ಮೂಲಕ ತಿಳಿದುಕೊಳ್ಳುತ್ತಾರೆ.

ಬಹುತೇಕ ಏಜೆಂಟರು, ಪತ್ರಿಕಾ ವಿತರಕರು ಇದನ್ನೇ ವೃತ್ತಿ ಮಾಡಿಕೊಂಡು ಬದುಕು ಕಟ್ಟಿಕೊಳ್ಳಲು ಯತ್ನಿಸುತ್ತಿದ್ದಾರೆ. ಮನೆ ಮನೆಗೆ ಪತ್ರಿಕೆಗಳನ್ನು ತಲುಪಿಸುವ ಬಹುತೇಕ ಯುವಕರಂತೂ ಅವರ ಓದಿನ ಖರ್ಚಿಗಾಗಿ ಈ ಕೆಲಸ ನೆಚ್ಚಿಕೊಂಡಿದ್ದಾರೆ. ಬೆಳಿಗ್ಗೆ 5ರಿಂದ 8ರವರೆಗೆ ಕೆಲಸ ಮುಗಿಸಿಕೊಂಡು ಆನಂತರ ಕಾಲೇಜುಗಳಿಗೆ ಹೋಗುತ್ತಾರೆ. ಇತರೆ ಕೆಲಸಗಳನ್ನು ಮಾಡುತ್ತಾರೆ.

‘ನಮಗೆ ರಜೆ ಎಂಬುದೇ ಇರುವುದಿಲ್ಲ. ನಮ್ಮ ಸ್ವಂತದ ಬದುಕು ತ್ಯಾಗ ಮಾಡಿ ಪತ್ರಿಕೆಗಳ ಮೂಲಕ ಜನರ ಜ್ಞಾನ ಹೆಚ್ಚಿಸುವ ಕೆಲಸ ಮಾಡುತ್ತಿದ್ದೇವೆ. ಕೋವಿಡ್‌ ಸಂಕಷ್ಟದ ಸಂದರ್ಭದಲ್ಲೂ ಜೀವ ಲೆಕ್ಕಿಸದೇ ಕೆಲಸ ಮಾಡಿದ್ದೇವೆ. ಆದರೆ, ನಾವು ಕೂಡ ಮುಖ್ಯವಾಹಿನಿಗೆ ಬರುವ ಅಗತ್ಯವಿದೆ. ನಮ್ಮ ಬದುಕು ಅತಂತ್ರವಿದೆ. ನಿಶ್ಚಿತ ಆದಾಯ, ಸಂಧ್ಯಾಕಾಲದಲ್ಲಿ ಜೀವನಾಧಾರಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಆಲೋಚಿಸಿ, ನಮ್ಮ ಬದುಕು ಕಟ್ಟಿಕೊಡಲು ವ್ಯವಸ್ಥೆ ಮಾಡಬೇಕು’ ಎನ್ನುತ್ತಾರೆ ಪತ್ರಿಕಾ ಏಜೆಂಟರು ಹಾಗೂ ವಿತರಕರು.

ಬೆಳಗಿನ ಜಾವ ಪತ್ರಿಕೆಗಳನ್ನು ಮನೆಗೆ ತಲುಪಿಸುವ ಕೆಲಸದಲ್ಲಿ ನಿರತ ಬೀದರ್‌ನ ರಾಮಚಂದ್ರ
ಇಂದಿನ ದಿನಗಳಲ್ಲಿ ಅಲ್ಪ ಆದಾಯದಲ್ಲಿ ಬದುಕು ಸಾಗಿಸುವುದು ಕಷ್ಟ. ಪತ್ರಿಕಾ ಏಜೆಂಟರು ಹಾಗೂ ವಿತರಕರ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಬೇಕು. ಉನ್ನತ ಶಿಕ್ಷಣಕ್ಕೂ ನೆರವು ನೀಡಬೇಕು.
ರಾಕೇಶ್‌ ಪತ್ರಿಕಾ ವಿತರಕ ಹೌಸಿಂಗ್‌ ಬೋರ್ಡ್‌ ಕಾಲೊನಿ ಬೀದರ್‌
ಇಡೀ ಜಗತ್ತಿನಲ್ಲಿ ಆಗುವ ಮಾಹಿತಿಯನ್ನು ಪತ್ರಿಕೆಗಳನ್ನು ತಲುಪಿಸುವ ಮೂಲಕ ಜನರ ಜ್ಞಾನ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಸರ್ಕಾರ ನಮ್ಮ ಕಲ್ಯಾಣಕ್ಕೂ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಬೇಕು. ನಮ್ಮನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು.
ಸಂತೋಷ್‌ ಪತ್ರಿಕಾ ವಿತರಕ ನಂದಿ ಕಾಲೊನಿ ಬೀದರ್‌
ಪತ್ರಿಕಾ ಏಜೆಂಟರು ಹಾಗೂ ವಿತರಕರಿಗೆ ಉಚಿತ ಬಸ್‌ ಸೌಲಭ್ಯ ಕಲ್ಪಿಸಬೇಕು. ಬ್ಯಾಂಕ್‌ಗಳಲ್ಲಿ ಸುಲಭವಾಗಿ ಸಾಲ ಸೌಲಭ್ಯ ಮಕ್ಕಳ ಓದಿಗೆ ಅನುಕೂಲ ಶೈಕ್ಷಣಿಕ ಸಾಲ ರಿಯಾಯಿತಿ ದರದಲ್ಲಿ ನಿವೇಶನ ಹಾಗೂ ಮನೆ ಖರೀದಿಸಲು ಸರ್ಕಾರ ಅನುಕೂಲ ಮಾಡಿಕೊಡಬೇಕು.
ಗಣೇಶ್‌ ಪತ್ರಿಕಾ ವಿತರಕ ಶಿವನಗರ ಬೀದರ್‌
ಪ್ರತಿದಿನ ತಪ್ಪದೇ ನಮ್ಮ ನೆಚ್ಚಿನ ಓದುಗರಿಗೆ ಎಲ್ಲ ಕಾಲದಲ್ಲೂ ಸಮಯಕ್ಕೆ ಸರಿಯಾಗಿ ಪತ್ರಿಕೆಗಳನ್ನು ತಲುಪಿಸುವ ಕಾಯಕ ಮಾಡುತ್ತೇವೆ. ಎಲ್ಲ ಓದುಗರು ಸರಿಯಾದ ಸಮಯಕ್ಕೆ ಪತ್ರಿಕೆಗಳ ಹಣ ಪಾವತಿಸಿ ಸಹಕರಿಸಬೇಕು. ಸರ್ಕಾರವೂ ಪತ್ರಿಕಾ ವಿತರಕರ ಬಾಳನ್ನು ಬೆಳಗಲು ವಿವಿಧ ಯೋಜನೆಗಳನ್ನು ರೂಪಿಸಬೇಕು.
ಶಫಿಯುದ್ದೀನ್ ಪತ್ರಿಕಾ ವಿತರಕ ಭಾತಂಬ್ರಾ
ಗೌರವಧನ ನೀಡಬೇಕು ಓದುಗರಿಗೆ ಸರಿಯಾದ ಸಮಯಕ್ಕೆ ಪತ್ರಿಕೆಗಳು ತಲುಪಬೇಕು ಎಂದು ಗಾಳಿ ಮಳೆ ಬಿಸಿಲು ಕತ್ತಲು ಸೇರಿದಂತೆ ಎಲ್ಲ ಸಮಯದಲ್ಲಿಯೂ ನಸುಕಿನ ಜಾವದಲ್ಲಿಯೇ ಮನೆ ಮನೆಗೆ ತೆರಳಿ ಪತ್ರಿಕೆಗಳನ್ನು ಓದುಗರಿಗೆ ತಲುಪಿಸುತ್ತೇವೆ. ಹಾಗಾಗಿ ಸರ್ಕಾರ ನಮ್ಮ ಸೇವೆಯನ್ನು ಪರಿಗಣಿಸಿ ಪ್ರತಿ ತಿಂಗಳು ಗೌರವ ಧನ ನೀಡಬೇಕು
ರಾಜಗುರು ಪತ್ರಿಕಾ ವಿತರಕ ಭಾಲ್ಕಿ

‘ಕೋವಿಡ್‌ ವಾರಿಯರ್ಸ್‌ ಹೆಗ್ಗಳಿಕೆ’

ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಇಡೀ ದೇಶದ ಜನ ಅವರ ಮನೆಗಳಲ್ಲಿ ಸುರಕ್ಷಿತವಾಗಿದ್ದರು. ಪೊಲೀಸರು ಆರೋಗ್ಯ ಇಲಾಖೆಯವರು ಪತ್ರಿಕಾ ವರದಿಗಾರರು ಮಾತ್ರ ಎಲ್ಲೆಡೆ ಓಡಾಡುತ್ತ ಕರ್ತವ್ಯ ಪ್ರಜ್ಞೆ ಮೆರೆದಿದ್ದರು. ಅದೇ ರೀತಿ ಪತ್ರಿಕಾ ಏಜೆಂಟರು ಹಾಗೂ ವಿತರಕರು ಕೂಡ ಯಾವುದೇ ಹಿಂಜರಿಕೆಯಿಲ್ಲದೆ ಕೆಲಸ ಮಾಡಿದ್ದರು. ಅಂತಹ ಸಂಕಷ್ಟದ ಸಂದರ್ಭದಲ್ಲೂ ಸ್ವಲ್ಪವೂ ವಿಚಲಿತರಾಗದೆ ಜೀವದ ಹಂಗು ತೊರೆದು ಎಂದಿನಂತೆ ನಿರ್ಬಂಧಿತ ಪ್ರದೇಶಗಳಲ್ಲೂ ಓಡಾಡಿ ಜನರಿಗೆ ಪತ್ರಿಕೆಗಳನ್ನು ತಲುಪಿಸಿದ್ದರು. ಹೀಗಾಗಿಯೇ ಏಜೆಂಟರು ಪತ್ರಿಕಾ ವಿತರಕರನ್ನು ಕೋವಿಡ್‌ ವಾರಿಯರ್ಸ್‌ ಎಂದು ವರ್ಣಿಸಿ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.