ಜನವಾಡ: ಬೀದರ್ ತಾಲ್ಲೂಕಿನ ಸಂಗೋಳಗಿ ಎ, ಬಿ, ಸಿ ಹಾಗೂ ಡಿ ತಾಂಡಾಗಳಿಗೆ ಬಸ್ ಸೌಲಭ್ಯವಿಲ್ಲ. ಹೀಗಾಗಿ ಬೇರೆ ಊರುಗಳಿಗೆ ತೆರಳಲು ತಾಂಡಾ ನಿವಾಸಿಗಳಿಗೆ ಕಿ.ಮೀ. ಗಟ್ಟಲೆ ನಡೆಯುವುದು ಅನಿವಾರ್ಯವಾಗಿದೆ.
ಜಿಲ್ಲಾ ಕೇಂದ್ರ ಬೀದರ್‌ಗೆ ತೆರಳಲು ಸರಾಸರಿ 2–3 ಕಿ.ಮೀ. ಹಾಗೂ ಹುಮನಾಬಾದ್‍ಗೆ ಪಯಣಿಸಲು 5–6 ಕಿ.ಮೀ.ನಷ್ಟು ದೂರ ನಡೆದೇ ಹೋಗಬೇಕಾಗಿದೆ. ಸಂಗೋಳಗಿ ಎ, ಬಿ, ಸಿ ಮತ್ತು ಡಿ ತಾಂಡಾಗಳು ಪರಸ್ಪರ ಅರ್ಧ ಕಿ.ಮೀ. ಅಂತರದಲ್ಲಿವೆ. ತಾಂಡಾಗಳ ನಿವಾಸಿಗಳು ಬೀದರ್‌ಗೆ ಪ್ರಯಾಣಿಸಲು 2–3 ಕಿ.ಮೀ. ದೂರದ ಸಂಗೋಳಗಿ ಕ್ರಾಸ್‌ವರೆಗೆ, ಹುಮನಾಬಾದ್‍ಗೆ ಹೋಗಲು 5 ಕಿ.ಮೀ. ದೂರದಲ್ಲಿರುವ ಆಣದೂರವಾಡಿ ಕ್ರಾಸ್ ಅಥವಾ 6 ಕಿ.ಮೀ. ಅಂತರದಲ್ಲಿರುವ ಹಾಲಹಳ್ಳಿ ಕ್ರಾಸ್‌ವರೆಗೆ ನಡಿಗೆಯಲ್ಲಿಯೇ ತಲುಪಬೇಕಿದೆ.
ತಾಂಡಾಗಳಿಗೆ ಸಾರಿಗೆ ಸಂಸ್ಥೆಯ ಬಸ್‍ಗಳು ಇಲ್ಲ. ಆಟೊ ಸೇರಿ ಖಾಸಗಿ ವಾಹನಗಳೂ ಬರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು, ನೌಕರರು ಹಾಗೂ ಸಾರ್ವಜನಿಕರು ವಿವಿಧೆಡೆ ಪ್ರಯಾಣ ಬೆಳೆಸಲು ತೊಂದರೆ ಅನುಭವಿಸಬೇಕಾಗಿದೆ ಎಂದು ತಾಂಡಾ ನಿವಾಸಿಗಳು ಗೋಳು ತೋಡಿಕೊಳ್ಳುತ್ತಾರೆ.
ತಾಂಡಾಗಳಿಗೆ ರಸ್ತೆ ಇದ್ದರೂ, ಸಾರಿಗೆ ಸಂಸ್ಥೆಯವರು ಬಸ್ ಓಡಿಸುತ್ತಿಲ್ಲ. ಹೀಗಾಗಿ ತಾಂಡಾ ನಿವಾಸಿಗಳಿಗೆ ಪ್ರಯಾಣ ತ್ರಾಸದಾಯಕವಾಗಿದೆ ಎಂದು ಸಂಗೋಳಗಿ ಎ ತಾಂಡಾದ ನಿವಾಸಿ ಶಾಂತಾಬಾಯಿ ಚಂದುಸಿಂಗ್ ರಾಠೋಡ ಹೇಳುತ್ತಾರೆ.
ಬೀದರ್‌ನಿಂದ ರಾತ್ರಿ ಹೊತ್ತು ತಾಂಡಾಗಳಿಗೆ ಮರಳುವವರು ಹೆಚ್ಚು ಸಮಸ್ಯೆ ಎದುರಿಸಬೇಕಾಗಿದೆ. ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಒಯ್ಯಲು ಕಷ್ಟ ಪಡಬೇಕಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.
ಐದು ವರ್ಷಗಳ ಹಿಂದೆ ಸಂಗೋಳಗಿ ಎ ತಾಂಡಾಕ್ಕೆ ಬೀದರ್‌ನಿಂದ ಕೆಲ ದಿನಗಳವರೆಗೆ ಬಸ್‌ಗಳನ್ನು ಓಡಿಸಲಾಗಿತ್ತು. ನಂತರ ಮತ್ತೆ ತಾಂಡಾಗಳ ಕಡೆ ಬಸ್ ಮುಖ ಮಾಡಿಲ್ಲ ಎಂದು ಬೇಸರದಿಂದ ಹೇಳುತ್ತಾರೆ ಸಂಗೋಳಗಿ ಸಿ ತಾಂಡಾದ ನಿವಾಸಿ, ಗ್ರಾ.ಪಂ ಮಾಜಿ ಸದಸ್ಯ ಬಾಬುರಾವ ರಾಠೋಡ.
ಸಂಗೋಳಗಿ ಎ ತಾಂಡಾಕ್ಕೆ ಬಸ್ ಸೌಕರ್ಯ ಕಲ್ಪಿಸಿದರೂ ನಾಲ್ಕೂ ತಾಂಡಾಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸುತ್ತಾರೆ.
ಸಂಬಂಧಪಟ್ಟವರು ಬೀದರ್ ಹಾಗೂ ಹುಮನಾಬಾದ್‍ಗೆ ತೆರಳಲು ಅನುಕೂಲವಾಗುವ ಹಾಗೆ ತಾಂಡಾಗಳಿಗೆ ನಿತ್ಯ ಮೂರು ಬಾರಿ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸುತ್ತಾರೆ.
ತಾಂಡಾ ನಿವಾಸಿಗಳ ಬೇಡಿಕೆಗೆ ಸಿಗದ ಸ್ಪಂದನೆ ಶಾಲಾ ವಿದ್ಯಾರ್ಥಿಗಳು ನಿತ್ಯ ಹೈರಾಣ ರಾತ್ರಿ ವೇಳೆ ಪ್ರಯಾಣಕ್ಕೆ ತೊಂದರೆ
ಸಂಗೋಳಗಿ ತಾಂಡಾ ನಿವಾಸಿಗಳ ಬಸ್ ಬೇಡಿಕೆ ಅನೇಕ ವರ್ಷಗಳದ್ದಾಗಿದೆ. ಈಗಲಾದರೂ ಸಾರಿಗೆ ಸಂಸ್ಥೆಯವರು ಬಸ್ ಓಡಿಸಲು ಕ್ರಮ ಕೈಗೊಳ್ಳಬೇಕುಬಾಬುರಾವ್ ರಾಠೋಡ ಸಂಗೋಳಗಿ ತಾಂಡಾ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.