ADVERTISEMENT

ಬಸ್ ಇದ್ದರೂ ಪ್ರಯಾಣಿಕರಿಲ್ಲ

ಇನ್ನೂ ಆರಂಭವಾಗದ ನಗರ ಸಾರಿಗೆ ಬಸ್ ಸೇವೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 15:14 IST
Last Updated 8 ಜೂನ್ 2020, 15:14 IST
ಬೀದರ್‌ನ ಕೇಂದ್ರ ಬಸ್ ನಿಲ್ದಾಣದಲ್ಲಿ ನಿರ್ವಾಹಕರು ಅಂತರ ಕಾಯ್ದುಕೊಂಡು ಪ್ರಯಾಣಿಕರ ಪೂರ್ಣ ಮಾಹಿತಿ ಪಡೆದು ಟಿಕೆಟ್ ನೀಡಿದರು
ಬೀದರ್‌ನ ಕೇಂದ್ರ ಬಸ್ ನಿಲ್ದಾಣದಲ್ಲಿ ನಿರ್ವಾಹಕರು ಅಂತರ ಕಾಯ್ದುಕೊಂಡು ಪ್ರಯಾಣಿಕರ ಪೂರ್ಣ ಮಾಹಿತಿ ಪಡೆದು ಟಿಕೆಟ್ ನೀಡಿದರು   

ಬೀದರ್: ನಗರದ ಕೇಂದ್ರ ಬಸ್ ನಿಲ್ದಾಣದಿಂದ ಸೋಮವಾರ ಒಂದು ನಾನ್ ಎಸಿ ಬಸ್ ಸೇರಿ ಒಟ್ಟು 6 ಬಸ್ ಬೆಂಗಳೂರಿಗೆ ತೆರಳಿದರೆ, ಬೀದರ್– ಕಲಬುರ್ಗಿ ಮಧ್ಯೆ 10 ಬಸ್‌ಗಳು ಸಂಚರಿಸಿದವು. ಗ್ರಾಮೀಣ ಪ್ರದೇಶಗಳಿಗೆ ಬಸ್‌ಗಳು ತೆರಳಲು ಸಿದ್ಧವಾಗಿದ್ದರೂ ಪ್ರಯಾಣಿಕರೇ ಇರಲಿಲ್ಲ.

ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ ಹಾಗೂ ಔರಾದ್ ಮಧ್ಯೆ ಬೆರಳೆಣಿಕೆಯಷ್ಟು ಬಸ್‌ಗಳು ಓಡಾಡಿವೆ. ಬಸ್‌ಗಳ ನಿರ್ವಾಹಕರು ಪ್ರಯಾಣಿಕರ ಹೆಸರು, ದೂರವಾಣಿ ಸಂಖ್ಯೆ ದಾಖಲಿಸಿಕೊಂಡು ಟಿಕೆಟ್‌ಗಳನ್ನು ನೀಡಿದರು. ಬಸ್‌ಗಳಲ್ಲಿ ಅಂತರ ಕಾಯ್ದುಕೊಂಡು ಕುಳಿತುಕೊಳ್ಳುವಂತೆ ಪ್ರಯಾಣಿಕರಿಗೆ ಸೂಚಿಸಲಾಯಿತು.

ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ, ಬಳ್ಳಾರಿ ಬಸ್‌ಗಳನ್ನು ಆರಂಭಿಸುವಂತೆ ಪ್ರಯಾಣಿಕರು ಮನವಿ ಮಾಡುತ್ತಿದ್ದಾರೆ. ಆದರೆ, ಬಸ್ ಸಂಚಾರ ಆರಂಭಿಸಲು ಅಗತ್ಯವಿರುವಷ್ಟು ಪ್ರಯಾಣಿಕರು ಬಾರದ ಕಾರಣ ಬಸ್‌ಗಳನ್ನು ಆರಂಭಿಸಲಿಲ್ಲ. ಕನಿಷ್ಠ 30 ಜನ ಬಂದರೂ ಬಸ್ ಆರಂಭಿಸಲಾಗುವುದು ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಶ್ರೀಮಂತ ಘಂಟೆ ತಿಳಿಸಿದರು.

ADVERTISEMENT

‘ಹಿರಿಯ ಅಧಿಕಾರಿಗಳಿಂದ ಆದೇಶ ಬಂದ ತಕ್ಷಣ ನಗರ ಸಾರಿಗೆ ಬಸ್‌ಗಳ ಸಂಚಾರವನ್ನೂ ಆರಂಭಿಸಲಾಗುವುದು’ ಎಂದು ಹೇಳಿದರು.

ನಗರದಲ್ಲಿ ಜನ ಆಟೊರಿಕ್ಷಾಗಳಲ್ಲಿ ಸಂಚರಿಸಿದರು. ಆಟೊರಿಕ್ಷಾಗಳಲ್ಲಿ ಇಬ್ಬರು ಪ್ರಯಾಣಿಕರಿಗೆ ಮಾತ್ರ ಕುಳಿಸಿಕೊಳ್ಳುವಂತೆ ಚಾಲಕರಿಗೆ ಸೂಚನೆ ನೀಡಲಾಗಿತ್ತು. ಬಸವಕಲ್ಯಾಣದಲ್ಲಿ ಪೊಲೀಸ್ ಅಧಿಕಾರಿಗಳು ಆಟೊಗಳ ಪರಿಶೀಲನೆ ನಡೆಸಿ ಚಾಲಕರಿಗೆ ಎಚ್ಚರಿಕೆ ನೀಡಿ ಕಳಿಸಿದರು. ಪ್ರಯಾಣಿಕರು ಸಮೀಪದ ಊರುಗಳಿಗೆ ಟ್ರ್ಯಾಕ್ಸ್‌ಗಳಲ್ಲಿ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.