ADVERTISEMENT

ಓಮೈಕ್ರಾನ್: ಜಿಲ್ಲೆಯ ವಸತಿ ಶಾಲೆಗಳಲ್ಲಿ ಬಿಗಿ ಕ್ರಮ

29 ವಸತಿ ಶಾಲೆಗಳಲ್ಲಿ 7,720 ವಿದ್ಯಾರ್ಥಿಗಳ ವಾಸ

ಚಂದ್ರಕಾಂತ ಮಸಾನಿ
Published 7 ಡಿಸೆಂಬರ್ 2021, 15:39 IST
Last Updated 7 ಡಿಸೆಂಬರ್ 2021, 15:39 IST
ಬೀದರ್ ತಾಲ್ಲೂಕಿನ ಘೋಡಂಪಳ್ಳಿಯ ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆಯ ಹೊರಾಂಗಣದಲ್ಲಿ ಪಾಲಕರ ಕೋವಿಡ್ ಲಸಿಕೆ ಪಡೆದ ವರದಿ ಪರಿಶೀಲಿಸುತ್ತಿರುವ ಸಿಬ್ಬಂದಿ
ಬೀದರ್ ತಾಲ್ಲೂಕಿನ ಘೋಡಂಪಳ್ಳಿಯ ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆಯ ಹೊರಾಂಗಣದಲ್ಲಿ ಪಾಲಕರ ಕೋವಿಡ್ ಲಸಿಕೆ ಪಡೆದ ವರದಿ ಪರಿಶೀಲಿಸುತ್ತಿರುವ ಸಿಬ್ಬಂದಿ   

ಬೀದರ್: ಚಿಕ್ಕಮಗಳೂರಿನ ವಸತಿ ಶಾಲೆಯ ವಿದ್ಯಾರ್ಥಿಗಳಲ್ಲಿ ಕೋವಿಡ್‌ ಕಾಣಿಸಿಕೊಂಡ ನಂತರ ಗಡಿ ಜಿಲ್ಲೆಯ ಎಲ್ಲ ವಸತಿ ಶಾಲೆಗಳಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ. ವಸತಿ ಶಾಲೆಗಳಿಗೆ ಹೊರಗಿನವರ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ. ಪಾಲಕರಿಗೂ ಕೆಲ ನಿರ್ಬಂಧಗಳನ್ನು ಹೇರಲಾಗಿದೆ.

ಆಗಸ್ಟ್‌ ಕೊನೆ ವಾರದಲ್ಲಿ ವಸತಿ ಶಾಲೆಗಳು ಕಾರ್ಯಾರಂಭ ಮಾಡಿವೆ. ವಿದ್ಯಾರ್ಥಿಗಳಿಗೆ ಆರ್‌ಟಿಪಿಸಿಆರ್‌ ವರದಿ ಆಧರಿಸಿ ಪ್ರವೇಶ ನೀಡಲಾಗಿದೆ. ಶಾಲಾ ಕೊಠಡಿಗಳಲ್ಲಿ ಸ್ಯಾನಿಟೈಸರ್‌ಗಳನ್ನು ಇಡಲಾಗಿದೆ. ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳನ್ನು ಕುಳಿಸಲಾಗುತ್ತಿದೆ. ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ.

ಬೀದರ್ ತಾಲ್ಲೂಕಿನ ಬಗದಲ್‌ನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಘೋಡಂಪಳ್ಳಿಯ ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆಯ ಹೊರಾಂಗಣದಲ್ಲೇ ಅನೇಕ ಪಾಲಕರು ತಮ್ಮ ಮಕ್ಕಳನ್ನು ಭೇಟಿ ಮಾಡಲು ನಿಂತಿದ್ದರು. ‘ಕೋವಿಡ್‌ ಪ್ರತಿಬಂಧಕ ಲಸಿಕೆಯ ಎರಡೂ ಡೋಸ್‌ ಪಡೆದವರಿಗೆ ಮಾತ್ರ ಮಕ್ಕಳನ್ನು ಭೇಟಿ ಮಾಡಲು ಅವಕಾಶ ಕೊಡುತ್ತಿದ್ದಾರೆ. ಉಳಿದವರನ್ನು ವಾಪಸ್‌ ಕಳಿಸುತ್ತಿದ್ದಾರೆ’ ಎಂದು ತಮ್ಮ ಮಗಳನ್ನು ಭೇಟಿ ಮಾಡಲು ಬಂದಿದ್ದ ಶ್ರೀಕಾಂತ ಹೇಳಿದರು.

ADVERTISEMENT

ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಅಂತರ ಕಾಯ್ದುಕೊಂಡು ನಿಲ್ಲಲು ಮಾರ್ಕ್‌ ಮಾಡಲಾಗಿದೆ. ಗೇಟ್‌ ಬಳಿಯೇ ಮಕ್ಕಳನ್ನು ಭೇಟಿ ಮಾಡಿ ಮರಳಿ ಹೋಗಬೇಕು ಎಂದು ಸೂಚಿಸಲಾಗುತ್ತಿದೆ. ಕೆಲ ಪಾಲಕರು ತಮ್ಮ ಮಕ್ಕಳನ್ನು ಭೇಟಿ ಮಾಡಲು ಅವಕಾಶ ಕೊಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದಾಗ ಸಿಬ್ಬಂದಿ ಆರ್‌ಟಿಪಿಸಿಆರ್‌ ವರದಿ ತರುವಂತೆ ಹೇಳಿ ವಾಪಸ್ ಕಳಿಸಿದರು.

ಔರಾದ್ ತಾಲ್ಲೂಕಿನ ಎಲ್ಲ ವಸತಿ ಶಾಲೆಗಳಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಶಾಲೆಯಲ್ಲಿ ಸೇರಿಸಿಕೊಳ್ಳುವ ಸಮಯದಲ್ಲಿ ವಿದ್ಯಾರ್ಥಿಗಳ ಕೋವಿಡ್ ನೆಗೆಟಿವ್ ವರದಿ ಪಡೆಯಲಾಗಿದೆ. ಶಿಕ್ಷಕರು ಸೇರಿ ವಸತಿ ಶಾಲೆಯಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿ ಎರಡೂ ಡೋಸ್ ಲಸಿಕೆ ಪಡೆಯಬೇಕು ಎಂಬ ನಿಯಮ ಪಾಲನೆ ಮಾಡಲಾಗಿದೆ.

‘ಅನಿವಾರ್ಯ ಇದ್ದಾಗ ಮಾತ್ರ ಮಕ್ಕಳಿಗೆ ಪಾಲಕರ ಭೇಟಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಅಂತಹ ಪಾಲಕರು ಎರಡೂ ಡೋಸ್ ಲಸಿಕೆ ಪಡೆದಿರಬೇಕು. ಯಾವುದೇ ವಿದ್ಯಾರ್ಥಿ ಇಲ್ಲವೇ ಸಿಬ್ಬಂದಿಗೆ ಜ್ವರ, ಶೀತ ಕಾಣಿಸಿಕೊಂಡಲ್ಲಿ ತಕ್ಷಣ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ’ ಎಂದು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯೆ ಶಕುಂತಲಾ ತಿಳಿಸಿದರು.

ಬಸವಕಲ್ಯಾಣ ತಾಲ್ಲೂಕಿನಲ್ಲಿರುವ 4 ಮೊರಾರ್ಜಿ ದೇಸಾಯಿ, 2 ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಒಂದು ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಕೋವಿಡ್ ನಿಯಮ ಕಟ್ಟುನಿಟ್ಟಾಗಿ‌ ಪಾಲನೆ ಮಾಡಲಾಗುತ್ತಿದೆ.

‘ಹುಮನಾಬಾದ್ ತಾಲ್ಲೂಕಿನ ವಸತಿ ನಿಲಯಗಳಲ್ಲಿ ನಿತ್ಯ ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಪ್ರತಿಯೊಂದು ಕೊಠಡಿಯಲ್ಲಿ ಸ್ಯಾನಿಟೈಸರ್ ಇಡಲಾಗಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸುರೇಶ ಹೇಳಿದರು.

‘ವಸತಿ ನಿಲಯಗಳಿಗೆ ಓಮೈಕ್ರಾನ್‌ಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ನಿಯಮಾವಳಿ ಅಥವಾ ಆದೇಶ ಬಂದಿಲ್ಲ. ಆದರೆ, ಕೋವಿಡ್‌ ನಿಯಮಗಳನ್ನೇ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿಯೊಂದು ವಸತಿ ಶಾಲೆಯಲ್ಲಿ ಯಾರಿಗಾದರೂ ಜ್ವರ ಕಾಣಿಸಿಕೊಂಡರೆ ತಕ್ಷಣ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ತಪಾಸಣೆ ನಡೆಸಿ ಆಸ್ಪತ್ರೆಗೆ ಕಳಿಸಿಕೊಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ಸರ್ಕಾರದ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲಾ ಸಮನ್ವಯ ಅಧಿಕಾರಿ ಶರಣಪ್ಪ ಬಿರಾದಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.