ADVERTISEMENT

ಓಂಪ್ರಕಾಶ ರೊಟ್ಟೆ ತಕರಾರು ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 15:10 IST
Last Updated 19 ನವೆಂಬರ್ 2021, 15:10 IST

ಬೀದರ್: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎರಡನೇ ಬಾರಿಗೆ ಸ್ಪರ್ಧಿಸಿರುವ ಕಾರಣ ಸುರೇಶ ಚನಶೆಟ್ಟಿ ಅವರ ನಾಮಪತ್ರ ತಿರಸ್ಕರಿಸುವಂತೆ ನಿರ್ದೇಶನ ಕೋರಿ ರಾಜಕುಮಾರ ಹೆಬ್ಬಾಳೆ ಅವರ ಪರವಾಗಿ ಓಂಪ್ರಕಾಶ ರೊಟ್ಟೆ ಅವರು ಸಲ್ಲಿಸಿದ್ದ ಚುನಾವಣೆ ತಕರಾರು ಅರ್ಜಿಯನ್ನು ಹೈಕೋರ್ಟ್‍ನ ಕಲಬುರ್ಗಿ ಪೀಠ ವಜಾಗೊಳಿಸಿದೆ.

ರೊಟ್ಟೆ ಅವರು ಸುರೇಶ ಎರಡನೇ ಅವಧಿಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣೆಯಲ್ಲಿ ನಿಬಂಧನೆ ಉಲ್ಲಂಘಿಸಲಾಗಿದೆ. ಉಪ ವಿಭಾಗಾಧಿಕಾರಿ ಶ್ರೇಣಿಯ ಅಧಿಕಾರಿಯನ್ನು ಚುನಾವಣಾಧಿಕಾರಿಯಾಗಿ ನೇಮಿಸಿಲ್ಲ ಎಂಬಿತ್ಯಾದಿ ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣಾ ತರಕಾರು ಅರ್ಜಿ ಸಲ್ಲಿಸಿದ್ದರು.

ಅರ್ಜಿಯಲ್ಲಿ ಕೇಂದ್ರ ಚುನಾವಣಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿಯಾದ ಬೀದರ್ ತಹಶೀಲ್ದಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸುರೇಶ ಚನಶೆಟ್ಟಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದರು.

ADVERTISEMENT

ಅರ್ಜಿಯ ಕೂಲಂಕಷ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಂ.ಎ. ಅರುಣ ಅವರು, ಒಂದೇ ಬಾರಿ ಸ್ಪರ್ಧಿಸಬೇಕು ಎನ್ನುವುದು ಕೇಂದ್ರ ಸಮಿತಿಗೆ ಮಾತ್ರ ಅನ್ವಯವಾಗುತ್ತದೆ. ಹೀಗಾಗಿ ಯಾವುದೇ ನಿಬಂಧನೆ ಉಲ್ಲಂಘನೆಯಾಗಿಲ್ಲ ಎಂದು ಉಲ್ಲೇಖಿಸಿ ಅರ್ಜಿಯನ್ನು ವಜಾಗೊಳಿಸಿದರು. ಸುರೇಶ ಚನಶೆಟ್ಟಿ ಪರ ವಕೀಲ ಅಶೋಕ ಮಾನೂರೆ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.